ಪುತ್ತೂರು:ತಾಲೂಕು ಆಟೊ ರಿಕ್ಷಾ ಚಾಲಕ- ಮಾಲೀಕರ ಸಂಯುಕ್ತ ಹೋರಾಟ ಸಮಿತಿ ಉದ್ಘಾಟನೆ

ಪುತ್ತೂರು: ಸಂಘಟನೆಗಳು ಗಟ್ಟಿಯಾದಾಗ ನಾವಾಡುವ ಪ್ರತಿಯೊಂದು ಮಾತಿಗೂ ಬಲ ಮತ್ತು ಬೆಲೆ ಸಿಗುತ್ತದೆ. ಈ ನಿಟ್ಟಿನಲ್ಲಿ ಪುತ್ತೂರಿನ ವಿವಿಧ ರಿಕ್ಷಾ ಚಾಲಕ ಮಾಲಕರ ಸಂಘವು ಒಟ್ಟಾಗಿ ಸಂಯುಕ್ತ ಹೋರಾಟ ಸಮಿತಿ ರಚಿಸಿಕೊಂಡಿರುವುದು ಉತ್ತಮ ಬೆಳವಣಿಗೆ ಎಂದು ಪತ್ರಕರ್ತ ಸಂಶುದ್ದೀನ್ ಸಂಪ್ಯ ಹೇಳಿದರು.
ಅವರು ಶನಿವಾರ ನೂತನವಾಗಿ ಆರಂಭಗೊಂಡ ಪುತ್ತೂರಿನ ಪುರಭವನದಲ್ಲಿ ಪುತ್ತೂರು ತಾಲೂಕು ಆಟೊ ರಿಕ್ಷಾ ಚಾಲಕ- ಮಾಲೀಕರ ಸಂಯುಕ್ತ ಹೋರಾಟ ಸಮಿತಿಯನ್ನು ಉದ್ಘಾಟಿಸಿ ಮಾತನಾಡಿದರು. ಸಂಘ ಶಕ್ತಿಯೇ ಸರ್ವಶಕ್ತಿ ಎಂಬ ಮಾತಿದೆ. ಬದುಕು ನೆಮ್ಮದಿಯಿಂದ ಸಾಗಬೇಕು ಎನ್ನುವ ಉದ್ದೇಶದಿಂದ ಸಂಘಗಳು ರಚನೆಯಾಗುತ್ತವೆ. ಇನ್ನೊಬ್ಬರ ನೋವಿಗೆ ಸ್ಪಂದನೆ ನೀಡಲು ಸಂಘಟಿತ ಪ್ರಯತ್ನ ಅಗತ್ಯ. ಸಂಘಟನೆಗಳ ಮೂಲಕ ಬೇಡಿಕೆಯ ಧ್ವನಿಗಳು ಒಂದಾಗಿ ಹೊರಹೊಮ್ಮಿದಾಗ ಇಚ್ಚಿತ ಕಾರ್ಯ ನೆರವೇರಲು ಸಾಧ್ಯ ಎಂದರು.
ದೀರ್ಘಕಾಲಿಕ ಪರಿಕಲ್ಪನೆಯನ್ನು ಇಟ್ಟುಕೊಂಡು ಸ್ಥಾಪಿಸಲ್ಪಟ್ಟ ಸಂಯುಕ್ತ ಹೋರಾಟ ಸಮಿತಿ ದೀರ್ಘಕಾಲಿಕ ಚಿಂತನೆಯನ್ನಿಟ್ಟುಕೊಂಡು ಕಾರ್ಯೋನ್ಮುಖವಾಗಲಿ ಎಂದ ಅವರು ಪುತ್ತೂರು ನಗರ ವ್ಯಾಪ್ತಿಯಲ್ಲಿ 2ಸಾವಿರಕ್ಕೂ ಅಧಿಕ ಆಟೋರಿಕ್ಷಾಗಳು ಓಟಾಟ ನಡೆಸುತ್ತಿದ್ದು, ಕೇವಲ 28 ರಿಕ್ಷಾ ಪಾರ್ಕ್‌ಗಳಿವೆ. ರಿಕ್ಷಾ ನಿಲುಗಡೆಗೆ ಸೂಕ್ತ ವ್ಯವಸ್ಥೆಗಳಿಲ್ಲದೇ ಹೊಸ ಪರವಾನಗಿ ನೀಡುವುದು ಎಷ್ಟು ಸರಿ ಎಂಬ ಆಟೋ ಚಾಲಕರ ಪ್ರಶ್ನೆ ಸರಿಯಾಗಿಯೇ ಇದೆ. ನಿಮ್ಮ ಹೋರಾಟಕ್ಕೆ ಬೆಲೆ ಸಿಕ್ಕಬೇಕಾದರೆ ಒಗ್ಗಟ್ಟಾಗಿ ಮುಂದುವರಿಯುವುದು ಸೂಕ್ತ ಎಂದರು.
ಸ್ನೇಹಸಂಗಮ ರಿಕ್ಷಾ ಚಾಲಕ ಮಾಲಕರ ಸಂಘದ ಗೌರವಾಧ್ಯಕ್ಷ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ ಮಾತನಾಡಿ ವಿವಿಧ ದೃಷ್ಟಿಕೋನದ ರಿಕ್ಷಾ ಚಾಲಕ ಮಾಲಕರ ಸಂಘಗಳು ಸಂಯುಕ್ತ ಹೋರಾಟ ಸಮಿತಿಯ ಒಂದೆಡೆ ಸೇರಿಕೊಂಡು ಪುತ್ತೂರಿನಲ್ಲಿ ಇತಿಹಾಸ ನಿರ್ಮಾಣಗೊಂಡಿದೆ. ರಿಕ್ಷಾ ಚಾಲಕರು ಪ್ರತಿಯೊಬ್ಬರ ನೋವಿನಲ್ಲಿ ಭಾಗಿಯಾಗುವುದರಿಂದ ಆತ್ಮತೃಪ್ತಿ ಹೊಂದುತ್ತಾರೆ. ಪುತ್ತೂರಿನಲ್ಲಿ ಪಾರ್ಕಿಂಗ್‌ಗೆ ಜಾಗವಿಲ್ಲ. ಪಾರ್ಕಿಂಗ್ ಸ್ಥಳಗಳಲ್ಲಿ ವ್ಯಾಪಾರ ಮಳಿಗೆಗಳು ತಲೆ ಎತ್ತಿವೆ. ಜನಪ್ರತಿನಿಧಿಗಳು ಮಾತನಾಡದ ಕಾರಣದಿಂದ ಇಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸದ್ಯ ರಸ್ತೆ ಅಗಲೀಕರಣ ಮಾಡಬೇಕು ಎಂಬ ಕೂಗು ಕೇಳಿಬರುತ್ತಿದೆ. ಇದಕ್ಕೆ ಸೀಮಿತ ಜನ ಹೋರಾಟ ಮಾಡಿದರೆ ಸಾಲದು ಎಲ್ಲರೂ ಒಟ್ಟಾಗಿ ಹೋರಾಟ ನಡೆಸಬೇಕು ಎಂದರು.
ಸಂಯುಕ್ತ ಹೋರಾಟ ಸಮಿತಿ ಸಂಚಾಲಕ ದಿಲೀಪ್ ಮೊಟ್ಟೆತ್ತಡ್ಕ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಿಕ್ಷಾ ಚಾಲಕ- ಮಾಲೀಕ ಸಂಘ ಗೌರವಾಧ್ಯಕ್ಷ ಸಂಜೀವ ನಾಯಕ್ ಕಲ್ಲೇಗ, ಎಸ್‌ಡಿಪಿಐ ಪಕ್ಷದ ಸಿದ್ದೀಕ್ ಪುತ್ತೂರು, ಬಿಎಂಎಸ್ ಅಧ್ಯಕ್ಷ ರಂಜನ್ ಎ, ಸ್ನೇಹಸಂಗಮ ಅಧ್ಯಕ್ಷ ಲೊಕೇಶ್ ಗೌಡ, ಬಾತೀಶ ಬಡೆಕ್ಕೋಡಿ ಉಪಸ್ಥಿತರಿದ್ದರು.
ಕರ್ನಾಟಕ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ಜಯರಾಮ ಕುಲಾಲ್ ಪ್ರಸ್ತಾವಿಕ ಮಾತುಗಳನ್ನಾಡಿದರು.ಸೇಸಪ್ಪ ನಾಯ್ಕ ಸ್ವಾಗತಿಸಿದರು. ಗಿರೀಶ್ ಕಾರ್ಯಕ್ರಮ ನಿರೂಪಿಸಿದರು.







