ಪುತ್ತೂರು:ಸರಣಿ ಮನೆಕಳ್ಳ ತಂಗರಾಜು ಪೊಲೀಸ್ ಕಸ್ಟಡಿ ವಿಸ್ತರಣೆ
ಪುತ್ತೂರು,ಮೇ 28: ಪುತ್ತೂರು ನಗರ ವ್ಯಾಪ್ತಿಯಲ್ಲಿ 7 ಮನೆಗಳ ಬೀಗ ಮುರಿದು ನುಗ್ಗಿ ನಗ -ನಗದು ಕಳವು ಮಾಡಿದ ಕುಖ್ಯಾತ ಮನೆ ಕಳ್ಳತನದ ಆರೋಪಿ ಕೇರಳದ ತಂಗರಾಜುವಿನ ಪೊಲೀಸ್ ಕಸ್ಟಡಿ ಅವಧಿಯನ್ನು ಜೂ. 3 ರ ತನಕ ವಿಸ್ತರಿಸಿ ಶನಿವಾರ ಪುತ್ತೂರು ನ್ಯಾಯಾಲಯ ಆದೇಶಿಸಿದೆ. ಆರೋಪಿ ತಂಗರಾಜುವನ್ನು ಪುತ್ತೂರು ಬೈಪಾಸ್ ರಸ್ತೆಯಲ್ಲಿ ಬಂಧಿಸಿರುವ ನಗರ ಪೊಲೀಸರು ಮೇ 21 ರಂದು ಪುತ್ತೂರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯ ಆತನಿಗೆ ಮೇ 28 ರ ತನಕ ಪೊಲೀಸ್ ಕಸ್ಟಡಿ ವಿಧಿಸಿತ್ತು. ಆದರೆ ಆರೋಪಿಯ ತನಿಖಾ ಕಾರ್ಯ ಮತ್ತು ಕಳವಿನ ಸೊತ್ತುಗಳ ಮುಟ್ಟುಗೋಲು ಕಾರ್ಯ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಪುತ್ತೂರು ನಗರ ಪೊಲೀಸರು ನ್ಯಾಯಾಲಯಕ್ಕೆ ಶನಿವಾರ ಅರ್ಜಿ ಸಲ್ಲಿಸಿ ಪೊಲೀಸ್ ಕಸ್ಟಡಿ ಅವಧಿಯನ್ನು ವಿಸ್ತರಣೆ ಮಾಡುವಂತೆ ಮನವಿ ಸಲ್ಲಿಸಿದ್ದರು.
ಪೊಲೀಸರ ಮನವಿಯನ್ನು ಪುರಸ್ಕರಿಸಿದ ಪುತ್ತೂರು ನ್ಯಾಯಾಲಯ ಆರೋಪಿ ತಂಗರಾಜುವಿನ ಪೊಲೀಸ್ ಕಸ್ಟಡಿಯನ್ನು ಜೂ. 3 ರ ತನಕ ವಿಸ್ತರಿಸಿ ಆದೇಶಿಸಿದೆ. ತಂಗರಾಜುವನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಮೊದಲು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಆತನ ವೈದ್ಯಕೀಯ ಪರೀಕ್ಷೆ ನಡೆಸಿ ನಗರ ಪೊಲೀಸ್ ಇನ್ಸ್‌ಪೆಕ್ಟರ್ ಮಹೇಶ್ ಪ್ರಸಾದ್ ಪುತ್ತೂರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.





