ಪ್ರತಿಭಟನೆ ಕೈಬಿಡಿ: ಪೊಲೀಸ್ ಸಿಬ್ಬಂದಿಗೆ ಗೃಹ ಸಚಿವ ಪರಮೇಶ್ವರ್ ಮನವಿ

ಬೆಂಗಳೂರು, ಮೇ 28: ರಾಜ್ಯ ಸರಕಾರ ಪೊಲೀಸ್ ಸಿಬ್ಬಂದಿಗಳ ಎಲ್ಲ ಬೇಡಿಕೆಗಳ ಈಡೇರಿಕೆಗೆ ಬದ್ಧವಾಗಿದ್ದು, ಅವರ ಕಷ್ಟ-ಸುಖಗಳಿಗೆ ಸ್ಪಂದಿಸುತ್ತದೆ ಎಂದು ಅಭಯ ನೀಡಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಹೊರಗಿನ ವ್ಯಕ್ತಿಗಳ ಕುಮ್ಮಕ್ಕಿನಿಂದ ಜೂ.4ರಂದು ನಡೆಸಲು ಉದ್ದೇಶಿಸಿರುವ ‘ಸಾಮೂಹಿಕ ರಜೆ’ ಚಳವಳಿಯನ್ನು ಕೈಬಿಡಿ ಎಂದು ಮನವಿ ಮಾಡಿದ್ದಾರೆ.
ಶನಿವಾರ ವಿಕಾಸಸೌಧದಲ್ಲಿನ ತಮ್ಮ ಕೊಠಡಿಯಲ್ಲಿ ಇಲಾಖೆ ಹಿರಿಯ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿನ ಪೊಲೀಸ್ ಸಿಬ್ಬಂದಿಗೆ ರಾಜ್ಯ ಸರಕಾರ ಎಲ್ಲ ಸೌಲಭ್ಯಗಳನ್ನು ನೀಡಿದೆ ಎಂದು ಹೇಳಿದರು.
ಪೊಲೀಸ್ ಸಿಬ್ಬಂದಿಗಳಿಗೆ ‘ಆರೋಗ್ಯಭಾಗ್ಯ ಯೋಜನೆ’ಯಡಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ವಾರ್ಷಿಕ 50ಕೋಟಿ ರೂ.ವೆಚ್ಚ ಮಾಡಲಾಗುತ್ತಿದ್ದು, ಪೊಲೀಸ್ ಕಾನ್‌ಸ್ಟೆಬಲ್‌ಗಳಿಗೆ ಪ್ರತಿ ಕುಟುಂಬಕ್ಕೆ 15 ಕೆಜಿ ಅಕ್ಕಿ, 3 ಕೆಜಿ ಗೋಧಿಯನ್ನು ಉಚಿತವಾಗಿ ವಿತರಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಮಿಲಿಟರಿ ಮಾದರಿಯಲ್ಲೆ ಕರ್ತವ್ಯನಿರತ ಪೊಲೀಸ್ ಹಾಗೂ ನಿವೃತ್ತ ಸಿಬ್ಬಂದಿಗೂ 45 ಕಡೆಗಳಲ್ಲಿ ಪೊಲೀಸ್ ಕ್ಯಾಂಟೀನ್ ಸ್ಥಾಪಿಸಿದ್ದು, ರಿಯಾಯಿತಿ ದರದಲ್ಲಿ ಅಗತ್ಯ ವಸ್ತುಗಳನ್ನು ಒದಗಿಸಲಾಗುತ್ತಿದೆ ಎಂದ ಅವರು, ಕಾಲಮಿತಿಯಲ್ಲಿ ಎಲ್ಲ ಸಿಬ್ಬಂದಿಗೂ ಭಡ್ತಿ ನೀಡಲಾಗುತ್ತಿದೆ ಎಂದರು.
15ಸಾವಿರ ಸಿಬ್ಬಂದಿ ನೇಮಕ: ಗೃಹ ಇಲಾಖೆಯಲ್ಲಿ ಮಂಜೂರಾಗಿರುವ ಹುದ್ದೆಗಳ ಪೈಕಿ 25 ಸಾವಿರದಷ್ಟು ಸಿಬ್ಬಂದಿ ಕೊರತೆ ಹಿನ್ನೆಲೆಯಲ್ಲಿ ಪೊಲೀಸರ ಮೇಲೆ ಕೆಲವು ಕಡೆ ಒತ್ತಡ ಇದೆ ಎಂದು ಒಪ್ಪಿಕೊಂಡ ಪರಮೇಶ್ವರ್, ಸಿಬ್ಬಂದಿ ಮೇಲಿನ ಒತ್ತಡ ಕಡಿಮೆ ಮಾಡಲು ಮುಂದಿನ 3ವರ್ಷಗಳಲ್ಲಿ 15ಸಾವಿರ ಪೊಲೀಸ್ ಸಿಬ್ಬಂದಿ ನೇಮಕಕ್ಕೆ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.
ಪಿಎಸ್ಸೈ ಸೇರಿದಂತೆ 8,500 ಮಂದಿ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡಿದ್ದು, ಅವರೆಲ್ಲ ಇದೀಗ ತರಬೇತಿಯಲ್ಲಿದ್ದು,ಆರು ತಿಂಗಳಲ್ಲಿ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ ಎಂದು ಅವರು, ಪ್ರಸಕ್ತ ಸಾಲಿನಲ್ಲಿ 3500 ಮಂದಿ ಸಿಬ್ಬಂದಿ ನೇಮಕಕ್ಕೆ ರಾಜ್ಯ ಸರಕಾರ ಅನುಮತಿ ನೀಡಿದೆ ಎಂದರು.
ಸಿಬ್ಬಂದಿಗೆ ಪ್ರತಿಷ್ಠಿತ ಕಂಪೆನಿಗಳಿಂದಲೇ ಸಮವಸ್ತ್ರ ಹಾಗೂ ಬೂಟ್ಸ್‌ಗಳನ್ನು ಒದಗಿಸಲಾಗುತ್ತಿದೆ. ಅಲ್ಲದೆ, ವಾಸಕ್ಕೆ ಆಧುನಿಕ ಮಾದರಿಯ 11 ಸಾವಿರ ಮನೆ ನಿರ್ಮಾಣ ಮಾಡಲಾಗುತ್ತಿದೆ. ಹೊರ ಜಿಲ್ಲೆಗಳಿಂದ ಆಗಮಿಸುವ ಸಿಬ್ಬಂದಿ ವಾಸ್ತವ್ಯಕ್ಕೆ ಇಲ್ಲಿನ ಆನಂದರಾವ್ ವೃತ್ತದಲ್ಲಿ ಅತಿಥಿ ಗೃಹ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.
ವೇತನ ಹೆಚ್ಚಳ: ನೆರೆಯ ಕೆಲ ರಾಜ್ಯಗಳಲ್ಲಿರುವಂತೆಯೇ ಪೊಲೀಸ್ ಇಲಾಖೆ ಸಿಬ್ಬಂದಿಗೆ ವೇತನ ಶ್ರೇಣಿಯನ್ನು ಹೆಚ್ಚುಮಾಡಲು ಚಿಂತಿಸಲಾಗಿದ್ದು, ಮುಂಬರುವ ವೇತನಾ ಪರಿಷ್ಕರಣ ಆಯೋಗದ ಮುಂದೆ ಪ್ರಸ್ತಾವನೆ ಮಂಡಿಸಿ ವೇತನ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಪರಮೇಶ್ವರ್ ಇದೇ ವೇಳೆ ಭರವಸೆ ನೀಡಿದರು.
ಹಿರಿಯ ಅಧಿಕಾರಿಗಳಿಂದ ಆಗುತ್ತಿರುವ ಕಿರುಕುಳ ತಪ್ಪಿಸಲು ಕ್ರಮ ಕೈಗೊಂಡಿದ್ದು, ಇಲಾಖೆಯಲ್ಲೆ ಅದಕ್ಕೂ ವ್ಯವಸ್ಥೆ ಕಲ್ಪಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ಎಂಟು ಗಂಟೆ ಪಾಳಿ (ಶಿಫ್ಟ್) ವ್ಯವಸ್ಥೆಯನ್ನು ಪೂರ್ಣ ಪ್ರಮಾಣದಲ್ಲಿ ಸಿಬ್ಬಂದಿ ನಿಯೋಜನೆ ಬಳಿಕ ಜಾರಿಗೆ ತರಲು ಚಿಂತನೆ ನಡೆಸಲಾಗುತ್ತಿದೆ ಎಂದರು.
ಕಪ್ಪುಚುಕ್ಕಿ ತರಬೇಡಿ: ಶಿಸ್ತಿಗೆ ಹೆಸರಾಗಿರುವ ರಾಜ್ಯ ಪೊಲೀಸ್ ಇಲಾಖೆಯಲ್ಲಿ ‘ಸಾಮೂಹಿಕ ರಜೆ’ ಪ್ರತಿಭಟನೆ ನೆಪದಲ್ಲಿ ಅಶಿಸ್ತಿ ಪ್ರದರ್ಶಿಸಿ, ಯಾವುದೇ ಕಾರಣಕ್ಕೂ ಗೃಹ ಇಲಾಖೆಗೆ ಕೆಟ್ಟ ಹೆಸರು ತರಬೇಡಿ ಎಂದು ಕೋರಿದ ಅವರು, ನಿಮ್ಮಿಂದಿಗೆ ನಾವಿದ್ದೇವೆ, ಕೂಡಲೇ ಪ್ರತಿಭಟನೆ ಹಿಂಪಡೆಯಿರಿ ಎಂದು ಮನವಿ ಮಾಡಿದರು.
‘ಹೊರಗಿನ ವ್ಯಕ್ತಿಗಳ ಪ್ರಚೋದನೆಗೆ ಒಳಗಾಗಿ ಕೆಲ ಜಿಲ್ಲೆ, ಕೆಲ ಪೊಲೀಸ್ ಮತ್ತು ಕೇವಲ ಬೆರಳೆಣಿಕೆಯಷ್ಟು ಸಿಬ್ಬಂದಿ ಸಾಮೂಹಿಕ ರಜೆಗೆ ಅರ್ಜಿ ಸಲ್ಲಿಸಿದ್ದು, ಈಗಾಗಲೇ ಅವರೆಲ್ಲರ ಮನವೊಲಿಕೆ ಮಾಡಲಾಗಿದೆ. ಪೊಲೀಸ್ ಇಲಾಖೆ ನೀತಿಯನ್ವಯ ಪ್ರತಿಭಟನೆಗೆ ಅವಕಾಶವಿಲ್ಲ. ಒಂದು ವೇಳೆ ಪ್ರತಿಭಟನೆ ನಡೆಸಿದರೆ ಅಂತಹ ವ್ಯಕ್ತಿಗಳನ್ನು ಸೇವೆಯಿಂದಲೇ ವಜಾಗೊಳಿಸಲು ಕಾನೂನಿನಲ್ಲಿ ಅವಕಾಶವಿದೆ’
-ಡಾ.ಜಿ.ಪರಮೇಶ್ವರ್ ಗೃಹ ಸಚಿವ







