ಮುಂದಿನ ವರ್ಷದಿಂದ ‘ನೀಟ್’ ಕಡ್ಡಾಯ
ಹೊಸದಾಗಿ ಮೂರು ವೈದ್ಯಕೀಯ ಕಾಲೇಜು; ಹೆಚ್ಚುವರಿ 900 ವೈದ್ಯಕೀಯ ಸೀಟ್: ಶರಣ ಪ್ರಕಾಶ್ ಪಾಟೀಲ್

ಬೆಂಗಳೂರು, ಮೇ 28: ರಾಜ್ಯದಲ್ಲಿ ಪ್ರಸಕ್ತ ಸಾಲಿನಲ್ಲಿ ಚಾಮರಾಜನಗರ, ಕೊಡಗು, ಕಾರವಾರ ಜಿಲ್ಲೆಗಳಲ್ಲಿ ಹೊಸದಾಗಿ ವೈದ್ಯಕೀಯ ಕಾಲೇಜು ಆರಂಭಿಸಲಿದ್ದು, ಇದರಿಂದ 900 ಹೆಚ್ಚುವರಿ ವೈದ್ಯಕೀಯ ಸೀಟುಗಳು ಲಭ್ಯವಾಗುತ್ತದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ತಿಳಿಸಿದರು.
ಅವರು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಏರ್ಪಡಿಸಿದ್ದ ಪತ್ರಿಕಾಗ್ಠೋಯಲ್ಲಿ ಪಾಲ್ಗೊಂಡು ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸುತ್ತಾ ಈಗಿರುವ ನಿಯಮಾವಳಿಗಳೊಂದಿಗೆ ಪ್ರಾಧಿಕಾರವು ಮುಂದುವರಿಯುವುದು, ಶುಲ್ಕ, ಸೀಟ್ ಹಂಚಿಕೆ ಮತ್ತಿತರ ವಿಷಯಗಳಿಗೆ ಸಂಬಂಧಿಸಿದಂತೆ, ಸುಪ್ರಿಂ ಕೋರ್ಟ್ ನೀಡಿರುವ ಮಾರ್ಗದರ್ಶನದ ಜೊತೆಗೆ, ಕಾನೂನು ಇಲಾಖೆ ಮತ್ತು ಸಂಬಂಧಿಸಿದ ಮಂಡಳಿಗಳೊಂದಿಗೆ ಚರ್ಚಿಸಿ ಮುಂದುವರಿಸಲಾಗುವುದು.
ಮುಂಬರುವ ಶೈಕ್ಷಣಿಕ ವರ್ಷದಿಂದ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ನಡೆಸುವ ನೀಟ್ ಪರೀಕ್ಷೆಯನ್ನು ರಾಜ್ಯದ ಅಭ್ಯರ್ಥಿಗಳು ಕಡ್ಡಾಯವಾಗಿ ಬರೆಯಲೇಬೇಕು ಎಂದು ಸಚಿವರು, ಮುಂದಿನ ವರ್ಷದಿಂದ ವೈದ್ಯಕೀಯ ಕೋರ್ಸ್‌ಗಳಿಗೆ ಸಿಇಟಿ ಪರೀಕ್ಷೆ ಇರುವುದಿಲ್ಲ. ನೀಟ್ ಪರೀಕ್ಷೆಯ ಮುಖಾಂತರವೆ ಅಭ್ಯರ್ಥಿಗಳ ನೋಂದಣಿ ಪ್ರಕ್ರಿಯೆ ನಡೆಯುತ್ತದೆ. ಈ ಹಿನ್ನೆಲೆಯಲ್ಲಿ ‘ನೀಟ್’ ಪರೀಕ್ಷೆಯನ್ನು ಪ್ರತಿಯೊಬ್ಬರು ಬರೆಯಲೇಬೇಕು ಎಂದು ತಿಳಿಸಿದರು.





