ಭೋಪಾಲ್ : ಖಾಲಿ ಕುರ್ಚಿಗಳಿಗೆ ಸಾಧನೆಯ ಭಾಷಣ ಮಾಡಿದ ಕೇಂದ್ರ ಸಚಿವ !

ಭೋಪಾಲ್, ಮೇ 28: ಬಿಜೆಪಿ ಆಡಳಿತವಿರುವ ಮಧ್ಯ ಪ್ರದೇಶದ ರಾಜಧಾನಿಯ ಕೇಂದ್ರ ಭಾಗದಲ್ಲೇ ಎನ್ ಡಿ ಎ ಸರಕಾರದ ಎರಡು ವರ್ಷಗಳ ಸಾಧನೆಯ ಕುರಿತ ಸಮಾವೇಶದಲ್ಲಿ ಕೇಂದ್ರ ಸಚಿವರು ಖಾಲಿ ಕುರ್ಚಿಗಳಿಗೆ ಭಾಷಣ ಮಾಡಬೇಕಾದ ಮುಜುಗರದ ಪರಿಸ್ಥಿತಿ ಉಂಟಾದ ಬಗ್ಗೆ ವರದಿಯಾಗಿದೆ.
ಇಲ್ಲಿನ ಹಿಂದಿ ಭವನ್ ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಚೌಧರಿ ಬಿರೇಂದ್ರ ಸಿಂಗ್ ಅವರು ಭಾಷಣಕ್ಕೆ ಬಂದಾಗ ಅವರ ಮುಂದೆ ಕೇವಲ ಖಾಲಿ ಕುರ್ಚಿಗಳು ಕಂಡವು. ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರ ಭಾಷಣ ಪ್ರಾರಂಭವಾಗುವುದು ಎರಡು ಗಂಟೆ ತಡವಾಯಿತು. ಆದರೆ ಇದನ್ನು ಸಹಿಸಿ ಕುಳಿತುಕೊಳ್ಳಲು ಮಹಿಳೆಯರು ಸಿದ್ದರಿರಲಿಲ್ಲ. ಹಾಗಾಗಿ ಸಚಿವರು ಭಾಷಣ ಪ್ರಾರಂಭಿಸುವ ಮೊದಲೇ ಮಹಿಳೆಯರು ಹೊರಟು ಬಿಟ್ಟರು.
ಸ್ಥಳೀಯ ಬಿಜೆಪಿ ಕಾರ್ಯಕರ್ತರು ಅವರ ಮನವೊಲಿಸಲು ಸಾಕಷ್ಟು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಆಗ ಭೋಪಾಲ್ ಮೇಯರ್ ಹಾಗು ಬಿಜೆಪಿ ಸಂಸದರು ಸಭಾಂಗಣ ಬಿಟ್ಟು ಹೋಗದಂತೆ ಮೈಕಿನಲ್ಲಿ ವಿನಂತಿ ಮಾಡಿಕೊಂಡರೂ ಪ್ರಯೋಜನವಾಗಲಿಲ್ಲ. ಕೊನೆಗೂ ಇದ್ದ ಕೆಲವೇ ಕೆಲವರಿಗೆ ಭಾಷಣ ಮಾಡಿ ಮುಗಿಸಿದರು ಕೇಂದ್ರ ಸಚಿವರು.








