ವೆನ್ಲಾಕ್ ಆಸ್ಪತ್ರೆಯಲ್ಲಿ ಮತ್ತೆ ಮೀನು ಊಟ!

ಸಾಂದರ್ಭಿಕ ಚಿತ್ರ
ಮಂಗಳೂರು, ಮೇ 28: ಜಿಲ್ಲಾಸ್ಪತ್ರೆಯಾದ ವೆನ್ಲಾಕ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ಕಳೆದ ಮೂರು ವರ್ಷಗಳಿಂದ ಸ್ಥಗಿತಗೊಂಡಿದ್ದ ಮೀನಿನ ಊಟ ಮತ್ತೆ ಲಭ್ಯವಾಗಲಿದೆ.
ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅಧ್ಯಕ್ಷತೆಯಲ್ಲಿ ಇಂದು ನಡೆದ ವೆನ್ಲಾಕ್ ಆರೋಗ್ಯ ಸುರಕ್ಷಾ ಸಮಿತಿಯ ಮಹಾಸಭೆಯಲ್ಲಿ ಆಸ್ಪತ್ರೆಯಲ್ಲಿ ಮೀನಿನ ಊಟ ಸ್ಥಗಿತಗೊಳಿಸಲಾಗಿರುವ ಬಗ್ಗೆ ಚರ್ಚೆ ನಡೆಯಿತು.
ಆರೋಗ್ಯ ಮಿಷನ್ ಯೋಜನೆಯ ಮಾರ್ಗದರ್ಶನ ಮೇರೆಗೆ ಮೀನಿನ ಊಟವನ್ನು ಸ್ಥಗಿತಗೊಳಿಸಲಾಗಿದ್ದು, ಅದಕ್ಕೆ ವೆಚ್ಚ ಅಧಿಕವಾಗುತ್ತದೆ. ಸರ್ಕಾರದಿಂದ ಅಷ್ಟೊಂದು ಹಣಕಾಸಿನ ನೆರವು ಲಭಿಸದ ಕಾರಣ ಸ್ಥಗಿತಗೊಳಿಸಲಾಗಿದೆ ಎಂದು ಆಸ್ಪತ್ರೆಯ ಅಧೀಕ್ಷಕಿ ಡಾ.ರಾಜೇಶ್ವರಿ ದೇವಿ ಸಭೆಯಲ್ಲಿ ಸಮಜಾಯಿಷಿ ನೀಡಿದರು. ಇದನ್ನು ಒಪ್ಪದ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ, ಹಲವು ವರ್ಷಗಳಿಂದ ಚಾಲ್ತಿಯಲ್ಲಿದ್ದ ಮೀನಿನ ಊಟವನ್ನು ರದ್ದುಪಡಿಸಿರುವುದು ಸರಿಯಲ್ಲ. ಅದನ್ನು ಪುನರಾರಂಭಿಸುವಂತೆ ಸೂಚಿಸಿದರು.
ಆದರೆ ಹಣಕಾಸಿನ ಕೊರತೆಯನ್ನು ಅಧೀಕ್ಷಕಿ ಪ್ರಸ್ತಾಪಿಸಿದಾಗ ಆಸ್ಪತ್ರೆಯ ಸುರಕ್ಷಾ ನಿಧಿಯಿಂದ ಬಳಸಿಕೊಳ್ಳುವಂತೆ ಸಲಹೆ ಮಾಡಿದರು.
ಲೇಡಿಗೋಷನ್ ಆಸ್ಪತ್ರೆಯಲ್ಲಿ ಕೆಎಂಸಿ ಜೊತೆಗಿನ ಒಪ್ಪಂದದ ಪ್ರಕಾರ 50 ಸಾವಿರ ಚದರ ಅಡಿ ವಿಸ್ತೀರ್ಣದ ಕಟ್ಟಡ ನಿರ್ಮಾಣಕ್ಕೆ ಮುಂದಾಗುವಂತೆ ದ.ಕ.ಉಸ್ತುವಾರಿ ಸಚಿವ ರಮಾನಾಥ ರೈ ಸೂಚಿಸಿದರು.
ಈ ಹಿಂದಿನ ಒಪ್ಪಂದದ ಪ್ರಕಾರ, ಕ್ಲಿನಿಕಲ್ ಶುಲ್ಕದಲ್ಲಿ ಶೇ.75 ಮೊತ್ತವನ್ನು ಮುಂಗಡವಾಗಿ ಪಾವತಿಸಬೇಕು. ಆ ಮೊತ್ತದಿಂದ ಲೇಡಿಗೋಷನ್ ಆಸ್ಪತ್ರೆಗೆ 50 ಸಾವಿರ ಚದರ ಅಡಿ ಕಟ್ಟಡ ನಿರ್ಮಿಸುವಂತೆ ಲಿಖಿತವಾಗಿ ನೀಡಿದ್ದಾರೆ. ಆದರೆ ಆ ಬಗ್ಗೆ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಹೇಳಿದರು. ಈ ನಿಟ್ಟಿನಲ್ಲಿ ಶೀಘ್ರವೇ ಕಾಮಗಾರಿ ಕೈಗೊಳ್ಳುವಂತೆ ಸಚಿವ ರಮಾನಾಥ ರೈ ಹೇಳಿದರು.
ವೆನ್ಲಾಕ್- ಕೆಎಂಸಿ ವೈದ್ಯರ ಹೊಂದಾಣಿಕೆ ಕೊರತೆಯಿಂದ ಹೆರಿಗೆ ಸಾವು!
ದ.ಕ.ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಕಳೆದ ವರ್ಷ 22 ಮಂದಿಗರ್ಭಿಣಿಯರು ಸಾವಿಗೀಡಾದ ಪ್ರಕರಣ ಸಂಭವಿಸಿದೆ. ಇದರಲ್ಲಿ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸದೆ ಬೇರೆ ಆಸ್ಪತ್ರೆಗೆ ತೆರಳುವ ಮಧ್ಯೆ ಮೃತಪಟ್ಟ ಪ್ರಕರಣಗಳು ಇವೆ. ಇದು ಗಂಭೀರ ವಿಚಾರವಾಗಿದೆ. ಇದಕ್ಕೆ ಕೆಎಂಸಿ ಮತ್ತು ವೆನ್ಲಾಕ್ ಆಸ್ಪತ್ರೆಯ ವೈದ್ಯರ ನಡುವೆ ಹೊಂದಾಣಿಕೆಯ ಕೊರತೆ ಕಾರಣ ಎಂದು ಜಿಲ್ಲಾಧಿಕಾರಿ ಇಬ್ರಾಹಿಂ ಹೇಳಿದರು. ಮುಂದೆ ಇಂತಹ ಪ್ರಕರಣ ನಡೆಯದಂತೆ ಎಚ್ಚರಿಕೆ ವಹಿಸುವಂತೆ ಸಚಿವ ರಮಾನಾಥ ರೈ ಸೂಚಿಸಿದರು.
ಎಂಆರ್ಪಿಎಲ್ ನೆರವಿನಲ್ಲಿ ಸಿದ್ಧಗೊಳ್ಳುತಿತಿರುವ ಲೇಡಿಗೋಷನ್ ಆಸ್ಪತ್ರೆಯ ಹೊಸ ಕಟ್ಟಡದ ಮೊದಲ ಅಂತಸ್ತಿನ ಕಾಮಗಾರಿ ಅಂತಿಮ ಹಂತದಲ್ಲಿದೆ. ಮೊದಲ ಹಂತದ ಪೂರ್ಣ ಕಾಮಗಾರಿಗೆ 9.50 ಕೋಟಿ ಬೇಕು. ಆಸ್ಪತ್ರೆಯ ಸುರಕ್ಷಾ ಸಮಿತಿಯಲ್ಲಿ 4 ಕೋಟಿ ಇದೆ ಎಂದು ಆಸ್ಪತ್ರೆಯ ಅಧೀಕ್ಷಕಿ ಡಾ.ಸವಿತಾ ಹೇಳಿದರು.
ಈ ಅಂತಸ್ತನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲು ಬೇಕಾದ ವ್ಯವಸ್ಥೆ ಮಾಡುವಂತೆ ಜಿಲ್ಲಾಧಿಕಾರಿ ಇಬ್ರಾಹಿಂ ಆಸ್ಪತ್ರೆಯ ಅಧೀಕ್ಷಕಿಗೆ ಸೂಚಿಸಿದರು.
ಜಿಲ್ಲೆಯ ಕೊಕ್ಕಡ ಮತ್ತು ಆಲಂಕಾರಿನಲ್ಲಿ ಎಂಡೋ ಸಂತ್ರಸ್ತ ಕೇಂದ್ರವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದ್ದು, ಮೇ 30ರಿಂದ ಕೇಂದ್ರವನ್ನು ಕಾರ್ಯಾರಂಭಿಸುವಂತೆ ಆರೋಗ್ಯ ಇಲಾಖೆಗೆ ಜಿಲ್ಲಾಧಿಕಾರಿ ತಾಕೀತು ಮಾಡಿದರು.
ವೆನ್ಲಾಕ್ ಜಿಲ್ಲಾ ಆಸ್ಪತ್ರೆಗೆ ಸರ್ಕಾರಿ ಮೆಡಿಕಲ್ ಕಾಲೇಜು ಆರಂಭಿಸಲು ಕ್ರಮ ಕೈಗೊಳ್ಳುವಂತೆ ಆಸ್ಪತ್ರೆಯ ಅಧೀಕ್ಷಕಿ ಡಾ.ರಾಜೇಶ್ವರಿ ದೇವಿ ಆಗ್ರಹಿಸಿದರು. ವಾಮಂಜೂರಿನಲ್ಲಿ 10 ಎಕರೆ ಜಾಗ ಗುರುತಿಸಲಾಗಿದೆ. ಆದಷ್ಟು ಶೀಘ್ರ ಕಾಲೇಜಿಗೆ ಮಂಜೂರಾತಿ ದೊರಕಿಸಿಕೊಡಬೇಕೆಂದು ಅವರು ಸಚಿವರಲ್ಲಿ ವಿನಂತಿಸಿದರು.







