ತೊಕ್ಕೊಟ್ಟು : ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ, ಕಂಬ ಮುರಿದು ಬಿದ್ದರೂ ಅದೃಷ್ಟವಶಾತ್ ಪಾರಾದ ಪ್ರಯಾಣಿಕರು

ಉಳ್ಳಾಲ: ತೊಕ್ಕೊಟ್ಟು ಸಮೀಪದ ಓವರ್‌ಬ್ರಿಡ್ಜ್ ಬಳಿ ಕೇರಳದಿಂದ ಅತೀ ವೇಗದಲ್ಲಿ ಪಡುಬಿದ್ರಿಗೆ ತೆರಳುತ್ತಿದ್ದ ಸ್ವಿಪ್ಟ್ ಕಾರೊಂದು ಹೆದ್ದಾರಿಯ ಬಲಭಾಗದ ವಿಭಜಕದ ಅಂಚಿನಲ್ಲಿದ್ದ ಅವಳಿ ವಿದ್ಯುತ್ ಕಂಬಕ್ಕೆ ರಭಸದಲ್ಲಿ ಢಿಕ್ಕಿ ಹೊಡೆದ ಪರಿಣಾಮ ಕಂಬಗಳು ಮುರಿದು ಕಾರಿನ ಮೇಲೆ ಬಿದ್ದು, ಕಾರಿನ ಚಾಲಕ ಸ್ವಲ್ಪ ಗಾಯಗೊಂಡು, ಅದರಲ್ಲಿದ್ದ ಮೂರು ಸವಾರರು ಅದೃಷ್ಟವಶಾತ್ ಪಾರಾಗಿರುವ ಘಟನೆ ಶನಿವಾರ ಮುಂಜಾನೆ 3 ಗಂಟೆಗೆ ನಡೆದಿದೆ.
ಘಟನೆಯಲ್ಲಿ ಚಾಲಕ ಕೇರಳ ಮೂಲದ ಇಸ್ಮಾಯಿಲ್(20) ಅವರಿಗೆ ಕಾಲಿಗೆ ಸ್ವಲ್ಪ ಗಾಯವಾಗಿದೆ.
ಸಾಹಸ ಮೆರೆದ ಪೊಲೀಸರು
ಘಟನೆಯಿಂದ ಎರಡು ವಿದ್ಯುತ್ ಕಂಬಗಳು ಮುರಿದು ಬೀಳುವಾಗ ತಂತಿಗಳ ಸಂಪರ್ಕ ಹೊಂದಿದ್ದ ರಸ್ತೆಯ ಮತ್ತೊಂದು ಅಂಚಿನ ಕಂಬವು ಮುರಿದು ರಸ್ತೆಗೆ ವಾಳಿದ ಪರಿಣಾಮ ತಂತಿಗಳು ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ತಾಗುವ ಮಟ್ಟಕ್ಕೆ ಇಳಿದಿತ್ತು. ಸ್ಥಳಕ್ಕೆ ಬಂದ ಪೊಲೀಸ್ ಕಾನ್‌ಸ್ಟೇಬಲ್‌ಗಳಾದ ಶಶಿಧರ್ ಮತ್ತು ರವಿ ಯವರು ಹತ್ತಿರದ ಚೆಂಬುಗುಡ್ಡೆ ಮೆಸ್ಕಾಂ ಕಛೇರಿಯ ಸ್ಥಿರ ದೂರವಾಣಿಗೆ ಅನೇಕ ಬಾರಿ ಕರೆ ಮಾಡಿದರೂ ಯಾರೂ ಕರೆ ಸ್ವೀಕರಿಸಿಲ್ಲ. ತಕ್ಷಣ ಸಮಯ ಪ್ರಜ್ನೆ ಮೆರೆದ ಶಶಿಧರ್ ಅವರು ಮರದ ಫಾಲ್ಸ್‌ನ ಸಹಾಯದಿಂದ ಮಾರ್ಗದ ಮಧ್ಯೆ ನೇತಾಡುತ್ತಿದ್ದ ವಿದ್ಯುತ್ ಹರಿದಾಡುತ್ತಿದ್ದ ತಂತಿಯನ್ನು ಜೀವದ ಹಂಗು ತೊರೆದು ಎತ್ತಿ ಹಿಡಿದು ವಾಹನಗಳ ಸುಗಮ ಸಂಚಾರಕ್ಕೆ ಅನುವು ಕೊಟ್ಟರು. ಘಟನೆಯಿಂದ ಧಿಡೀರನೆ ಟ್ರಾನ್ಸ್‌ಫಾರಂ ಟ್ರಿಪ್ ಹೊಡೆದ ಪರಿಣಾಮ ಸ್ಥಳೀಯರ ಅಮೂಲ್ಯವಾದ ಗೃಹೋಪಯೋಗಿ ಇಲೆಕ್ಟ್ರಾನಿಕ್ ವಸ್ತುಗಳು ಸುಟ್ಟುಹೋಗಿದ್ದು, ಶುಕ್ರವಾರ ದಿನವಿಡೀ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಘಟನೆ ಕುರಿತಂತೆ ಪ್ರಕರಣ ದಾಖಲಾಗಿದೆ.
ತೊಕ್ಕೊಟ್ಟು ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿಯ ಅಗಲೀಕರಣ ಕಾಮಗಾರಿ ಪ್ರಗತಿಯಲ್ಲಿರುವುದರಿಂದ ರಸ್ತೆಯ ತಿರುವುಗಳು ಗಮನಕ್ಕೆ ಬಾರದೆ ಮತ್ತು ಕಾರಿನ ಅತೀ ವೇಗದ ಚಾಲನೆಯಿಂದ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.







