ಕ್ರೀಡಾಪಟುಗಳಿಗೆ ಪ್ರೋತ್ಸಾಹ ಅಗತ್ಯ
ಕೋಟಿ ಚೆನ್ನಯ ಕ್ರೀಡಾಕೂಟ

ಮಡಿಕೇರಿ, ಮೇ 28: ಯುವ ಸಮೂಹಕ್ಕೆ ಅಗತ್ಯ ಪ್ರೋತ್ಸಾಹ ಮತ್ತು ಬೆಂಬಲವನ್ನು ನೀಡುವ ಮೂಲಕ ಉತ್ತಮ ಕ್ರೀಡಾಪಟುಗಳನ್ನು ರೂಪಿಸುವ ಅಗತ್ಯವಿದೆ ಎಂದು ಅಂತಾರಾಷ್ಟ್ರೀಯ ಅಥ್ಲೀಟ್ ಬಿ.ಸಿ. ತಿಲಕ್ ತಿಳಿಸಿದ್ದಾರೆ.
ಮಡಿಕೇರಿ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ವತಿಯಿಂದ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 14ನೆ ವರ್ಷದ ಜಿಲ್ಲಾ ಮಟ್ಟದ ಕೋಟಿ ಚೆನ್ನಯ ಕ್ರೀಡಾಕೂಟ ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪೋಷಕರು ತಮ್ಮ ಮಕ್ಕಳ ಕ್ರೀಡಾ ಚಟುವಟಿಕೆಗಳಿಗೆ ಅಗತ್ಯ ಪ್ರೋತ್ಸಾಹ ನೀಡಿ ಕ್ರೀಡಾಸ್ಫೂರ್ತಿಯನ್ನು ತುಂಬುವ ಮೂಲಕ ಕ್ರೀಡಾ ಕ್ಷೇತ್ರದಲ್ಲಿ ಕೀರ್ತಿಯನ್ನು ಗಳಿಸಲು ಬೆಂಬಲ ನೀಡಬೇಕೆಂದು ಕರೆ ನೀಡಿದರು.
ಕೊಡಗು ಜಿಲ್ಲಾ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಬಿ.ವೈ. ಆನಂದ ರಘು ಮಾತನಾಡಿ, ಜಿಲ್ಲಾ ಮಟ್ಟದ ಕ್ರೀಡಾಕೂಟದ ಮೂಲಕ ಬಿಲ್ಲವ ಸಮಾಜದ ಬಂಧುಗಳು ಒಗ್ಗೂಡಿ ಇತರ ಸಮಾಜಕ್ಕೆ ಮಾದರಿಯಾಗಿರುವುದು ಶ್ಲಾಘನೀಯವೆಂದರು. ನಗರಸಭಾ ಅಧ್ಯಕ್ಷೆ ಶ್ರೀಮತಿ ಬಂಗೇರ ಮಾತನಾಡಿದರು. ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಬಿ.ಎಂ. ರಾಜಶೇಖರ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕ್ರೀಡಾ ಕೂಟದ ಯಶಸ್ಸಿಗೆ ಶುಭ ಹಾರೈಸಿದರು. ಸಂಘದ ಕಾನೂನು ಸಲಹೆಗಾರರಾದ ರಮೇಶ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಸಂಘದ ಮಹಿಳಾ ಘಟಕದ ಬಿ.ಎಸ್.ಲೀಲಾವತಿ, ಸಮಾಜದ ಪ್ರಮುಖರಾದ ಅರುಣ ಆನಂದ್, ಜಯಪ್ಪ ಹಾಗೂ ಖಜಾಂಚಿ ಮಹೇಶ್ ಉಪಸ್ಥಿತರಿದ್ದರು.







