ಕಸಾಪ ಪದಾಧಿಕಾರಿಗಳ ಸೇವಾದೀಕ್ಷೆ ಕಾರ್ಯಕ್ರಮ
ಚಿಕ್ಕಮಗಳೂರು ಕಸಾಪ ಸಂಸ್ಥಾಪನಾ ದಿನಾಚರಣೆ

ಚಿಕ್ಕಮಗಳೂರು, ಮೇ 28: ಕನ್ನಡ ಸಾಹಿತ್ಯ ಪರಿಷತ್‌ಗೂ ರಾಜಕಾರಣಿಗಳಿಗೂ ಏನು ನಂಟು ಎಂದು ಕೇಳುವುದರಲ್ಲಿ ಅರ್ಥವಿಲ್ಲ. ರಾಜಕಾರಣಿಗಳನ್ನೂ ಸಾಹಿತ್ಯ ಪರಿಷತ್ ಪದಾಧಿಕಾರಿಗಳಾಗಿ ನೇಮಕ ಮಾಡಿಕೊಳ್ಳುವುದು ಅಗತ್ಯವಾಗಿದೆ ಎಂದು ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಅಭಿಪ್ರಾಯಿಸಿದ್ದಾರೆ.
ಅವರು ತಾಲೂಕಿನ ಅಂಬಳೆ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ತಾಲೂಕು ಕಸಾಪ ಪದಾಧಿಕಾರಿಗಳ ಸೇವಾದೀಕ್ಷೆ ಹಾಗೂ 101ನೆ ಸಂಸ್ಥಾಪನಾ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿ, ರಾಜಕಾರಣಿಯನ್ನು ಸಾಹಿತ್ಯ ಪರಿಷತ್‌ನ ಪದಾಧಿಕಾರಿಯಾಗಿ ನೇಮಕ ಮಾಡಿಕೊಂಡ ಕೂಡಲೇ ಅದು ತಪ್ಪು ಎಂದು ಕೆಲವರು ಹೇಳುತ್ತಾರೆ. ಸಾಹಿತ್ಯ ಪರಿಷತ್‌ನ ಯಾವುದೇ ಕಾರ್ಯಕ್ರಮ ನಡೆದರೂ ಅದಕ್ಕೆ ರಾಜಕಾರಣಿಗಳ ಮತ್ತು ಸರಕಾರದ ನೆರವು ಕೇಳಲಾಗುತ್ತದೆ. ಆದರೆ ಪದಾಧಿಕಾರಿಯಾಗಿ ನೇಮಕ ಮಾಡಿಕೊಂಡಾಗ ಅಪಸ್ವರ ಹಾಡಲಾಗುತ್ತದೆ ಎಂದರು.
ಕಾರ್ಯಕ್ರಮವನ್ನು ಮಾಜಿ ಎಂಎಲ್ಸಿ ಎ.ವಿ.ಗಾಯತ್ರಿ ಶಾಂತೇಗೌಡ ಉದ್ಘಾಟಿಸಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಪರಿಷತ್‌ನ ಕಾರ್ಯಕ್ರಮಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ನಡೆಸುತ್ತಿರುವುದರಿಂದ ಪರಿಷತ್‌ನ ಬಗ್ಗೆ ಎಲ್ಲರಿಗೂ ಮನವರಿಕೆ ಮಾಡಿಕೊಟ್ಟಂತಾಗುತ್ತಿದೆ.ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಕನ್ನಡದ ಕಂಪು ಉಳಿದುಕೊಂಡಿದೆ ಎಂದು ಹೇಳಿದರು.
ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದ ಜಿಲ್ಲಾ ಕಸಾಪ ಅಧ್ಯಕ್ಷ ಕುಂದೂರು ಅಶೋಕ್ ಮಾತನಾಡಿ, ಕನಿಷ್ಠ 1ರಿಂದ 5ನೆ ತರಗತಿಯವರೆಗೆ ಪ್ರಾದೇಶಿಕ ಭಾಷೆಯಲ್ಲಿ ಅಧ್ಯಯನ ಮಾಡಬೇಕೆಂಬ ಕಾನೂನು ಅಗತ್ಯವಾಗಿದೆ ಎಂದರು.
ತಾಲೂಕು ಕಸಾಪ ಅಧ್ಯಕ್ಷ ಎಚ್.ಎಸ್.ಪುಟ್ಟಸ್ವಾಮಿ ಅಧಿಕಾರ ಸ್ವೀಕರಿಸಿ ಮಾತನಾಡಿದರು. ನಿಕಟಪೂರ್ವ ಅಧ್ಯಕ್ಷ ಬಿ.ಆರ್.ಜಗದೀಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಜಿಪಂ ಸದಸ್ಯೆ ಪ್ರೇಮಾಮಂಜುನಾಥ್, ಗ್ರಾಪಂ ಅಧ್ಯಕ್ಷ ಓಂಪ್ರಕಾಶ್, ಉಪಾಧ್ಯಕ್ಷೆ ರಾಧಾಕೃಷ್ಣಮೂರ್ತಿ, ಸಾಹಿತಿ ಬೆಳವಾಡಿ ಮಂಜುನಾಥ್, ಮಹಿಳಾ ಪ್ರತಿನಿಧಿ ಹೇಮಲತಾ, ತಾಲೂಕು ಸಂಘಟನಾ ಕಾರ್ಯದರ್ಶಿ ಎ.ಎನ್.ಪ್ರಸನ್ನ, ದೊಡ್ಡೇಗೌಡ, ಕನ್ನಡಸೇನೆ ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ, ನಿವೃತ್ತ ಉಪನ್ಯಾಸಕ ಎ.ಜಿ.ವಿಶ್ವಮೂರ್ತಿ, ಪ್ರಕಾಶ್, ಖಜಾಂಚಿ ಜಗದೀಶ್ ಮತ್ತಿತರರು ಉಪಸ್ಥಿತರಿದ್ದರು.







