ಪೊಲೀಸರ ಬೇಡಿಕೆಗಳ ಈಡೇರಿಕೆಗೆ ರಾಜ್ಯ ರಕ್ಷಾ ಸೇನೆ ಒತ್ತಾಯ

ಚಿಕ್ಕಮಗಳೂರು, ಮೇ 28: ಪೊಲೀಸರು ತಮ್ಮ ಹಕ್ಕುಗಳಿಗಾಗಿ ಸಂಘಟನೆ ಮಾಡಿಕೊಂಡು ಹೋರಾಟ ನಡೆಸುವ ಮೊದಲು ರಾಜ್ಯ ಸರಕಾರ ಎಚ್ಚೆತ್ತು ಪೊಲೀಸರ ವೇತನವನ್ನು ಪುನರ್ ರಚಿಸಿ, ಬೇಡಿಕೆಗಳನ್ನು ಪೂರೈಸಬೇಕೆಂದು ರಾಜ್ಯ ರಕ್ಷಾ ಸೇನೆಯು ಒತ್ತಾಯಿಸಿದೆ.
ಈ ಸಂಬಂಧ ಸೇನೆಯ ಜಿಲ್ಲಾಧ್ಯಕ್ಷ ಅಣ್ಣಪ್ಪ.ಎ.ಜಿ, ಶನಿವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಸಬ್‌ಇನ್‌ಸ್ಪೆಕ್ಟರ್ ಎನ್.ವಿರುಪಾಕ್ಷಪ್ಪರವರಿಗೆ ಮನವಿ ಸಲ್ಲಿಸಿ ಮಾತನಾಡಿ, ರಾಜ್ಯದ ಜನಸಂಖ್ಯೆಗೆ ಹೋಲಿಸಿದರೆ ಪೊಲೀಸರ ಸಂಖ್ಯೆ ಬಹಳಷ್ಟು ಕಡಿಮೆ ಇದ್ದು, ಪೊಲೀಸರ ಸಂಖ್ಯೆಯನ್ನು ಹೆಚ್ಚಿಸಿ ಪೊಲೀಸರ ಮೇಲಿರುವ ಹೆಚ್ಚಿನ ಒತ್ತಡವನ್ನು ಕಡಿಮೆಗೊಳಿಸಬೇಕೆಂದು ಆಗ್ರಹಿಸಿದ್ದಾರೆ.
ಹಗಲಿರುಳು ಎನ್ನದೇ ಸಾರ್ವಜನಿಕ ರಕ್ಷಣೆಗೆ ಶ್ರಮಿಸುತ್ತಿರುವ ಪೊಲೀಸರು ತಮ್ಮ ಜೀವನ ನಡೆಸಲು ಹೋರಾಟ ನಡೆಸುವಂತಾಗಿರುವುದು ನಿಜಕ್ಕೂ ವಿಷಾದನೀಯ ಎಂದ ಅವರು ರಾಜ್ಯದ ಪೊಲೀಸರು ಪ್ರತಿದಿನ 18ಗಂಟೆಗಳಿಗಿಂತ ಹೆಚ್ಚು ಕಾಲ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದಿದ್ದಾರೆ.
ನೆರೆಯ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಸಂಬಳ ಕಡಿಮೆ ಯಾಗಿದ್ದು, ಯಾವುದೇ ಹಬ್ಬ ಹರಿದಿನಗಳ ಆಚರಣೆಗೆ ಅವಕಾಶವಿಲ್ಲದೇ ಪೊಲೀಸರು ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಾರ್ವಜನಿಕ ರ ಸೇವೆ ಮಾಡುವ ಇವರಿಗೆ ತಮ್ಮ ಕುಟುಂಬದ ಜೊತೆ ಕಾಲಕಳೆಯಲು ಸಮಯ ಅವಕಾಶವೇಇಲ್ಲದಂತಾಗಿದೆ ಎಂದರು.
ಈ ಸಂದರ್ಭದಲ್ಲಿ ಸೇನೆಯ ನಗರ ಅಧ್ಯಕ್ಷ ಭರತ್, ಜಿಲ್ಲಾ ಸಂಚಾಲಕ ಗುರುಪ್ರಸಾದ್, ನಗರ ಉಪಾಧ್ಯಕ್ಷ ಮಹೇಶ್, ವಿದ್ಯಾರ್ಥಿಅಧ್ಯಕ್ಷ ಶಶಿಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.







