ಪಾಯಸ್ ಕಾಂಪೌಂಡ್ ರಸ್ತೆ ಅಭಿವೃದ್ಧಿಗೆ ಚಾಲನೆ

ಚಿಕ್ಕಮಗಳೂರು, ಮೇ 28: ಸ್ಥಳೀಯ ನಾಗರಿಕರ ಹಲವು ದಶಕಗಳ ಕನಸಾದ ಪಾಯಸ್ ಕಾಂಪೌಂಡ್ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ ಎಂದು ನಗರಸಭಾ ಅಧ್ಯಕ್ಷ ಎಂ.ಆರ್. ದೇವರಾಜಶೆಟ್ಟಿ ತಿಳಿಸಿದ್ದಾರೆ.
ಅವರು ರಸ್ತೆ ಅಗಲೀಕರಣ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ಈ ರಸ್ತೆ ಪಾಯಸ್ ಕಾಂಪೌಂಡ್‌ನಿಂದ ರಾಮಚಂದ್ರರವರ ಮನೆಯವರೆಗೂ ಕೇವಲ 12ಅಡಿ ಇಕ್ಕಾಟ್ಟಾದ ರಸ್ತೆಯಾಗಿತ್ತು. ಅಲ್ಲದೆ ಚಾನೆಲ್ ಏರಿ ಕಿರಿದಾಗಿದ್ದ ಕಾರಣ ಹಲವು ಬಾರಿ ವಾಹನಗಳು ಚಾನಲ್‌ಗೆ ಉರುಳಿ ಅಪಘಾತ ಸಂಭವಿಸಿತ್ತು. ಆದ ಕಾರಣ ಅಗಲೀಕರಣಕ್ಕಾಗಿ ನಾಗರಿಕರಿಂದ ಹಲವು ಬಾರಿ ಮನವಿ ಸಲ್ಲಿಸಿದ್ದರು.
ಒಂದು ಭಾಗದಲ್ಲಿ ಖಾಸಗಿ ಜಾಗವಾಗಿದ್ದರಿಂದ ಅಲ್ಲಿನ ಮಾಲಕರಾದ ರಾಮಚಂದ್ರರೊಂದಿಗೆ ಕುಳಿತು ಚರ್ಚೆ ನಡೆಸಿ ರಸ್ತೆಗೆ ಜಾಗ ಬಿಟ್ಟುಕೊಟ್ಟರೆ ಶಾಲಾ ಮಕ್ಕಳಿಗೆ ಹಾಗೂ ಸಹಸ್ರಾರು ಜನರಿಗೆ ಅನುಕೂಲವಾಗುತ್ತದೆ ಎಂದಾಗ ದಾನವಾಗಿ ಬಿಟ್ಟುಕೊಟ್ಟರು. 14 ಲಕ್ಷ ರೂ. ಎಸ್‌ಎಫ್‌ಸಿ ಹಾಗೂ 8 ಲಕ್ಷ ರೂ. ನಗರಸಭಾ ಅನುದಾನದಲ್ಲಿ ರಸ್ತೆ ಅಗಲೀಕರಣ ಸೇರಿದಂತೆ ತಡೆಗೋಡೆ ನಿರ್ಮಿಸಿ 30 ಅಡಿ ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಎಂಎಲ್ಸಿ ಗಾಯತ್ರಿ ಶಾಂತೇಗೌಡ, ಪೌರಾಯುಕ್ತೆ ಪಲ್ಲವಿ, ಎಇಇ ಆನಂದ್, ಇಂಜಿನಿಯರ್ ರಶ್ಮಿ, ವಸಂತರಾಮಚಂದ್ರ, ವಿಜಯಾ, ನಿವೃತ್ತ ಶಿಕ್ಷಕ ದೇಸಾಯಿ, ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.







