ಕಥೆ ತಾನಾಗೇ ಹುಟು್ಟವ ಕಲಾಕೃತಿ: ಸಾಹಿತಿ ಡಾ. ನಾ.ಡಿಸೋಜ
ಕೃತಿ ಬಿಡುಗಡೆ ಸಮಾರಂಭ
.jpg)
ಸಾಗರ, ಮೇ 28: ಕಥೆಯನ್ನು ಲೇಖಕ ಹುಟ್ಟಿಸುವುದಿಲ್ಲ. ಕಥೆ ತಾನಾಗೆ ಹುಟ್ಟುವ ಕಲಾಕೃತಿ. ಮನಸಿನ ಹಲವು ಭಾವನೆಗಳನ್ನು ಸ್ಫುರಿಸುವ, ಚಿಂತನೆ ಹುಟ್ಟುಹಾಕುವ ಕೆಲಸವನ್ನು ಕಥೆ ಮಾಡುತ್ತದೆ ಎಂದು ಸಾಹಿತಿ ಡಾ. ನಾ.ಡಿಸೋಜ ಹೇಳಿದರು. ಇಲ್ಲಿನ ಸರಕಾರಿ ನೌಕರರ ಭವನದಲ್ಲಿ ಶುಕ್ರವಾರ ಜಿಲ್ಲಾ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ, ಡಾ. ಎಚ್.ಗಣಪತಿಯಪ್ಪ ಸೇವಾ ಟ್ರಸ್ಟ್, ಸಹೃದಯ ಬಳಗ ಹಾಗೂ ವೀತರಾಗ ಟ್ರಸ್ಟ್ ವತಿಯಿಂದ ಲೇಖಕ ಪ್ರಕಾಶ್ ಆರ್.ಕಮ್ಮಾರ್ ಬರೆದ ‘ಸುರಗಿ’ ಕಥಾ ಸಂಕಲನ ಹಾಗೂ ಸಾಹಿತಿ ವಿ. ಗಣೇಶ್ ಬರೆದ ‘ಕನ್ನಡದ ಪರಿಚಾರಕ ಪ್ರಕಾಶ್ ಕಮ್ಮಾರ್’ ಕೃತಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡುತ್ತಿದ್ದರು. ಮನುಷ್ಯನ ಜೊತೆ ಕಥೆಯೂ ಹುಟ್ಟುತ್ತದೆ. ಹೇಗೆ ದೀಪವಿಲ್ಲದ ಮನೆ ಇರುವುದಿಲ್ಲವೋ, ಅದೇ ರೀತಿ ಕಥೆ ಇಲ್ಲದ ಮನೆ ಇರುವುದಿಲ್ಲ. ಒಬ್ಬ ಮನುಷ್ಯ ಸತ್ತರೆ 10 ಕಥೆಗಳು ಅವನ ಜೊತೆ ಸಾಯುತ್ತದೆ. ಕಥೆಯ ಶಕ್ತಿಯೆ ಅಂತಹದ್ದಾಗಿದ್ದು, ಸಾಹಿತ್ಯದ ಇತರೇ ಪ್ರಕಾರಗಳಿಗಿಂತ ಕಥೆ ಅತ್ಯಂತ ಪರಿಣಾಮಕಾರಿ ಮಾಧ್ಯಮವಾಗಿದೆ ಎಂದರು. ಸಾಹಿತಿ ವಿ.ಗಣೇಶ್ ತನ್ನ ಕೃತಿಯಲ್ಲಿ ಪ್ರಕಾಶ್ ಆರ್. ಕಮ್ಮಾರ್ ಅವರ ಸಾಹಿತ್ಯ ಪರಿಚಾರಿಕೆಯನ್ನು ಸ್ಥೂಲವಾಗಿ ವಿವರಿಸಿದ್ದಾರೆ. ಪ್ರಕಾಶ್ ಕಮ್ಮಾರ್ ಶಿಕ್ಷಕರಾಗಿ, ಸಂಘಟಕರಾಗಿ, ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ನಡೆಸಿದ ಕಾರ್ಯಚಟುವಟಿಕೆ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಅದೇ ರೀತಿ ಪ್ರಕಾಶ್ ತನ್ನ ‘ಸುರಗಿ’ ಕಥಾ ಸಂಕಲನದಲ್ಲಿ ಮಲೆನಾಡಿನ ಪರಿಸರ, ಜನಜೀವನ ಕುರಿತು 15ಕ್ಕೂ ಹೆಚ್ಚು ಕಥೆಗಳನ್ನು ರಚಿಸಿದ್ದಾರೆ. ಅದರಲ್ಲಿ ಶಿರವಾಳದ ಕನ್ನ, ರೇಖೆಗಳು, ನೂರು ನಿಮಿಷದಂತಹ ಕಥೆಗಳು ಅತ್ಯಂತ ಮನೋಜ್ಞವಾದದ್ದು ಎಂದರು. ಪ್ರತಿವರ್ಷ ಸಾವಿರಾರು ಪುಸ್ತಕಗಳು ಲೋಕಾರ್ಪಣೆಗೊಳ್ಳುತ್ತಿದೆ. ಆದರೆ ಓದುಗರ ಸಂಖ್ಯೆ ಮಾತ್ರ ಹೆಚ್ಚುತ್ತಿಲ್ಲ. ಜನರಿಗೆ ಪುಸ್ತಕವನ್ನು ಕೊಂಡು ಓದುವ ಅಭಿರುಚಿ ಕಡಿಮೆಯಾಗುತ್ತಿದೆ. ಜನರಿಗೆ ಪುಸ್ತಕ ಬೇಡವೆ ಎನ್ನುವ ಪ್ರಶ್ನೆ ಲೇಖಕರನ್ನು ಸಹಜವಾಗಿ ಕಾಡುತ್ತಿದೆ. ಈ ಪರಿಸ್ಥಿತಿ ಬದಲಾಗಬೇಕು. ನಮ್ಮ ಲೇಖಕರು ಬರೆದ ಕೃತಿಗಳನ್ನು ಖರೀದಿಸಿ ಓದುವತ್ತ ಸಾಹಿತ್ಯಾಸಕ್ತರು ಗಮನ ಹರಿಸಬೇಕು ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಡಿ.ಮಂಜುನಾಥ್, ಪ್ರತಿವರ್ಷ 8 ಸಾವಿರಕ್ಕೂ ಅಧಿಕ ಕೃತಿಗಳು ಬಿಡುಗಡೆಗೊಳ್ಳುತ್ತಿದೆ. ಓದುಗರು ಇಷ್ಟಪಡುವ ಕೃತಿಗಳನ್ನು ರಚಿಸಿದಾಗ ಸಹಜವಾಗಿ ಹೆಚ್ಚು ಪ್ರಸರಣವಾಗುತ್ತದೆ. ಈ ನಿಟ್ಟಿನಲ್ಲಿ ಲೇಖಕರು ಗಮನ ಹರಿಸಬೇಕು. ಬಿಡುಗಡೆಯಾದ ಪುಸ್ತಕವನ್ನು ಓದುಗರಿಗೆ ತಲುಪಿಸುವ ಹೊಣೆಗಾರಿಕೆ ನಮ್ಮಂತಹ ಸಾಹಿತ್ಯ ಸಂಘಟನೆ ಮೇಲೆ ಇದೆ ಎಂದರು. ಈ ಸಂದರ್ಭದಲ್ಲಿ ಲೇಖಕರಾದ ಪ್ರಕಾಶ್ ಆರ್.ಕಮ್ಮಾರ್, ಸಾಹಿತಿ ವಿ.ಗಣೇಶ್, ಡಾ. ಎಚ್.ಗಣಪತಿಯಪ್ಪ, ಸೇವಾ ಟ್ರಸ್ಟ್ ಅಧ್ಯಕ್ಷ ಉಮೇಶ್ ಹಿರೇನೆಲ್ಲೂರು ಉಪಸ್ಥಿತರಿದ್ದರು.





