ರೈತರು ಕೃ ಷಿ ಅಭಿಯಾನದ ಮಾಹಿತಿಗಳನ್ನು ಸದ್ಬಳಕೆ ಮಾಡಿಕೊಳಿ: ಸಚಿವ ಕಿಮ್ಮನೆ ರತ್ನಾಕರ

ತೀರ್ಥಹಳ್ಳಿ, ಮೇ 28: ಕೃಷಿ ಅಭಿಯಾನದ ಈ ಕಾರ್ಯಕ್ರಮದಲ್ಲಿ ಇಲಾಖೆಗಳ ನಡಿಗೆ ರೈತರ ಮನೆ ಬಾಗಿಲಿಗೆ ಸಾಗುತ್ತಿರುವುದು ರೈತರಿಗೆ ಸಹಕಾರಿಯಾಗುತ್ತದೆ. ರೈತರು ಈ ಅಭಿಯಾನದ ಮಾಹಿತಿಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಸಚಿವ ಕಿಮ್ಮನೆ ರತ್ನಾಕರ್ ಹೇಳಿದ್ದಾರೆ.
ಪಟ್ಟಣದ ತಾಪಂ ಕಚೇರಿಯ ಸಮೀಪ ತೀರ್ಥಹಳ್ಳಿಯ ಕೃಷಿ ಇಲಾಖೆ, ತೋಟಗಾರಿಕಾ ವಿ.ವಿ., ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಪ್ರಗತಿಬಂಧು ಸ್ವಸಹಾಯ ಸಂಘಗಳ ಸ್ಥಳೀಯ ಒಕ್ಕೂಟ ಸಹಯೋಗದೊಂದಿಗೆ ಕೃಷಿ ಅಭಿಯಾನ 2016-17ರ ಕಸಬಾ ಹೋಬಳಿಯ ಕಾರ್ಯಕ್ರಮದ ಅಭಿಯಾನದ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದರು.
ಕೃಷಿ ಅಭಿಯಾನದ ಮಾಹಿತಿ ಕೈಪಿಡಿಯನ್ನು ಬಿಡುಗಡೆಗೊಳಿಸಿದ ಇವರು, ಕೃಷಿಯನ್ನು ಹೆಚ್ಚು ಲಾಭದಾಯಕವನ್ನಾಗಿ ಮಾಡಲು ಮತ್ತು ಹೆಚ್ಚುತ್ತಿರುವ ಜನಸಂಖ್ಯೆಗೆ ಆಹಾರ ಭದ್ರತೆ ನೀಡಲು ಲಭ್ಯವಿರುವ ಸಾಗುವಳಿ ಜಮೀನಿನಲ್ಲಿ ಗರಿಷ್ಠ ಕೃಷಿ ಉತ್ಪಾದನೆ ಪಡೆಯುವುದು ಅತ್ಯವಶ್ಯಕ ಎಂದರು.
ಬೆಳೆ ವೈವಿಧ್ಯೀಕರಣ, ವ್ಯವಸಾಯ ವೆಚ್ಚದಲ್ಲಿ ಕಡಿತ, ಕೃಷಿಯೊಂದಿಗೆ ಪೂರಕ ಉಪಕಸುಬುಗಳಾದ ಪಶು ಸಂಗೋಪನೆ, ರೇಷ್ಮೆ ಕೃಷಿ, ಮೀನುಗಾರಿಕೆ ಮುಂತಾದ ಸಮಗ್ರ ಕೃಷಿ ಚಟುವಟಿಕೆಗಳನ್ನು ರೈತರು ಅಳವಡಿಸಿಕೊಳ್ಳುವುದು ಅನಿವಾರ್ಯವಾಗಿದ್ದು, ಸರಕಾರ ರೈತರ ಪರ ನೀಡಿದ ಹಲವಾರು ಯೋಜನೆಗಳು ಯಶಸ್ಸಿನ ಹಾದಿಯಲ್ಲಿ ಸಾಗಿದೆ ಎಂದರು.
ಈ ಸಂದರ್ಭದಲ್ಲಿ ಸಹಾಯಕ ಕೃಷಿ ನಿರ್ದೇಶಕ ಬೀರಪ್ಪ, ಜಿಪಂ ಸದಸ್ಯ ಕಲ್ಪನಾ ಪದ್ಮನಾಭ್, ತಾಪಂ ಅಧಿಕಾರಿ ಲಕ್ಷ್ಮಣ್, ಕೃಷಿ ಜಲಾನಯನ ಇಲಾಖೆಯ ಧರ್ಮಣ್ಣ,ಕೃಷಿ ಅಧಿಕಾರಿ ಕೌಶಿಕ್ ಮತ್ತಿತರರು ಉಪಸ್ಥಿತರಿದ್ದರು.







