ಮೆಡಿಟರೇನಿಯನ್ ಸಮುದ್ರದಲ್ಲಿ ವಲಸಿಗರ ದೋಣಿಗಳ ಜಲಸಮಾಧಿ
ಹಲವರ ಸಾವಿನ ಶಂಕೆ; ಎರಡು ಸಾವಿರಕ್ಕೂ ಅಧಿಕ ಜನರ ರಕ್ಷಣೆ
ರೋಮ್, ಮೇ 28: ಮೆಡಿಟರೇನಿಯನ್ ಸಮುದ್ರದಲ್ಲಿ ವಲಸಿಗರು ಪ್ರಯಾಣಿಸುತ್ತಿದ್ದ ಹಲವಾರು ದೋಣಿಗಳು ಜಲಸಮಾಧಿಯಾಗಿದ್ದು, 2 ಸಾವಿರಕ್ಕೂ ಅಧಿಕ ಮಂದಿಯನ್ನು ರಕ್ಷಿಸಲಾಗಿದೆಯೆಂದು ಇಟಲಿಯ ತಟರಕ್ಷಣಾದಳದ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಈ ದುರಂತದಲ್ಲಿ ಹಲವಾರು ಮಂದಿ ಸಮುದ್ರಪಾಲಾಗಿರುವ ಸಾಧ್ಯತೆಯಿದೆಯೆಂದು ಅವರು ಹೇಳಿದ್ದಾರೆ. ಸುಮಾರು 14 ಸಾವಿರ ಮಂದಿ ವಲಸಿಗರು ದುರ್ಬಲವಾದ ದೋಣಿಗಳಲ್ಲಿ ಪ್ರಯಾಣಿಸುತ್ತಿದ್ದಾಗ, ಶುಕ್ರವಾರ ಇಟಲಿ ಸಮೀಪದ ಮೆಡಿಟರೇನಿಯನ್ ಸಾಗರದಲ್ಲಿ ಜಲಸಮಾಧಿಯಾದರೆಂದು ವಿಶ್ವಸಂಸ್ಥೆ ಹಾಗೂ ತಟರಕ್ಷಣಾ ದಳದ ಅಧಿಕಾರಿಗಳು ತಿಳಿಸಿದ್ದಾರೆ. ಸಮುದ್ರದಲ್ಲಿ ಅರ್ಧದಷ್ಟು ಮುಳುಗಡೆಯಾಗಿದ್ದ ದೊಡ್ಡ ಗಾತ್ರದ ರಬ್ಬರ್ ದೋಣಿಯಿಂದ 130 ಮಂದಿಯನ್ನು ಇಟಲಿಯ ನೌಕಾಪಡೆಯ ಹಡಗು ವೇಗಾ ರಕ್ಷಿಸಿದೆ. ಆದರೆ ಆ ದೋಣಿಯಲ್ಲಿ ಎಷ್ಟು ಮಂದಿ ಪ್ರಯಾಣಿಕರಿದ್ದರೆಂಬ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ದೊರೆತಿಲ್ಲ.
ಹವಾಮಾನ ಬೆಚ್ಚಗಿರುವುದು ಹಾಗೂ ಸಮುದ್ರ ಶಾಂತವಾಗಿರುವ ಕಾರಣ ಲಿಬಿಯ ಮಾರ್ಗವಾಗಿ ಯುರೋಪ್‌ಗೆ ವಲಸೆ ಬರಲು ಯತ್ನಿಸುತ್ತಿರುವ ಜನರ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗಿದೆಯೆಂದು ತಟರಕ್ಷಣಾ ದಳದ ಅಧಿಕಾರಿಗಳು ತಿಳಿಸಿದ್ದಾರೆ. ಜೀವರಕ್ಷಕ ಜಾಕೆಟ್‌ಗಳನ್ನು ಧರಿಸದೆ ದೋಣಿಗಳಲ್ಲಿ ಪ್ರಯಾಣಿಸುವ ಈ ವಲಸಿರು ಜೀವದ ಹಂಗು ತೊರೆದು ಪ್ರತಿಕೂಲ ವಾತಾವರಣದಲ್ಲಿಯೂಸಾಗರದಲ್ಲಿ ಪ್ರಯಾಣಿಸುತ್ತಿದ್ದಾರೆಂದು ಅವರು ಹೇಳಿದ್ದಾರೆ.2014 ಹಾಗೂ 2015ರ ನಡುವೆ 3.20 ಲಕ್ಷಕ್ಕೂ ಅಧಿಕ ವಲಸಿಗರು ಇಟಲಿಯ ಸಮುದ್ರತೀರವನ್ನು ಪ್ರವೇಶಿಸಿದ್ದಾರೆ. ಯುರೋಪ್‌ಗೆ ಪ್ರವೇಶಿಸುವ ಪ್ರಯತ್ನದಲ್ಲಿ 4 ಸಾವಿರಕ್ಕೂ ಅಧಿಕ ಮಂದಿ ಸಮುದ್ರಪಾಲಾಗಿದ್ದಾರೆಂದು ಅಂತಾರಾಷ್ಟ್ರೀಯ ವಲಸೆ ಸಂಸ್ಥೆಯು ತಿಳಿಸಿದೆ.







