ಉಗ್ರರನ್ನು ಸದೆಬಡಿಯಿರಿ ಪಾಕ್‌ಗೆ ಅಮೆರಿಕ ತಾಕೀತು
ವಾಶಿಂಗ್ಟನ್,ಮೇ 28: ಭಯೋತ್ಪಾದಕರನ್ನು ಅದರಲ್ಲೂ ವಿಶೇಷವಾಗಿ ತಾಲಿಬಾನ್ ಬಂಡುಕೋರರನ್ನು ಸದೆಬಡಿಯಬೇಕೆಂದು ಅಮೆರಿಕವು ಪಾಕಿಸ್ತಾನಕ್ಕೆ ತಾಕೀತು ಮಾಡಿದೆ. ಪಾಕಿಸ್ತಾನದ ಪ್ರಕ್ಷುಬ್ಧ ಬಲೂಚಿಸ್ತಾನ್ ಪ್ರಾಂತದಲ್ಲಿ ತಾಲಿಬಾನ್ ವರಿಷ್ಠ ಮುಲ್ಲಾ ಅಖ್ತರ್ ಮನ್ಸೂರ್ ಅಮೆರಿಕದ ಡ್ರೋನ್ ದಾಳಿಗೆ ಬಲಿಯಾದ ಕೆಲವೇ ದಿನಗಳ ಆನಂತರ ಅಮೆರಿಕ ಈ ಸೂಚನೆಯನ್ನು ನೀಡಿದೆ.
ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರ ಮಾರ್ಕ್ ಟೋನರ್ ಶುಕ್ರವಾರ ವಾಶಿಂಗ್ಟನ್‌ನಲ್ಲಿ ಸುದ್ದಿಗಾರರ ಜೊತೆ ಮಾತನಾಡುತ್ತಾ, ‘‘ ಅಫ್ಘಾನಿಸ್ತಾನದೊಂದಿಗೆ ನಮ್ಮ ನಿಕಟ ಸಹಕಾರವನ್ನು ಮುಂದುವರಿಸಿದ್ದೇವೆ. ಆದರೆ ಇದೇವೇಳೆ ಪಾಕಿಸ್ತಾನ ಕೂಡಾ ಭಯೋತ್ಪಾದಕರನ್ನು ಅದರಲ್ಲೂ ವಿಶೇಷವಾಗಿ ತಾಲಿಬಾನ್ ನಾಯಕತ್ವವನ್ನು ಮಟ್ಟಹಾಕಬೇಕೆಂದು ನಾವು ಆಗ್ರಹಿಸುತ್ತಿದ್ದೇವೆಂದು ವಿದೇಶಾಂಗ ಇಲಾಖೆಯ ಉಪವಕ್ತಾರ ಮಾರ್ಕ್ ಟೋನರ್ ತಿಳಿಸಿದ್ದಾರೆ.
ಈ ನಡುವೆ, ಅಫ್ಘಾನಿಸ್ತಾನದಲ್ಲಿನ ಅಮೆರಿಕ ರಾಯಭಾರಿ ಜೇಮ್ಸ್ ಡಿಯ ಕನ್ನಿಂಗ್‌ಹ್ಯಾಂ ಹೇಳಿಕೆಯೊಂದನ್ನು ನೀಡಿ, ಪಾಕಿಸ್ತಾನದ ನೆಲದಲ್ಲಿ ತಾಲಿಬಾನ್ ನಾಯಕ ಮುಲ್ಲಾ ಮನ್ಸೂರ್‌ನನ್ನು ಹತ್ಯೆಗೈಯುವ ಮೂಲಕ ಅಮೆರಿಕವು ಭಯೋತ್ಪಾದಕರ ಸುರಕ್ಷಿತ ತಾಣಗಳನ್ನು ಇನ್ನು ಮುಂದೆ ಸಹಿಸಲಾರದೆಂಬ ಸ್ಪಷ್ಟ ಸಂದೇಶವನ್ನ್ನು ನೀಡಿದೆಯೆಂದು ಹೇಳಿದ್ದಾರೆ.
ಮನ್ಸೂರ್‌ನ ಹತ್ಯೆಯಲ್ಲಿ ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್‌ಐನ ಪಾತ್ರವಿದೆಯೆಂಬ ವರದಿಗಳನ್ನು ಅವರು ಅಲ್ಲಗಳೆದಿದ್ದಾರೆ. ವಾಸ್ತವಿಕವಾಗಿ ಕಾರ್ಯಾಚರಣೆ ಪೂರ್ತಿಗೊಂಡ ಬಳಿಕವಷ್ಟೇ ಪಾಕ್ ಸರಕಾರಕ್ಕೆ ಅಮೆರಿಕವು ಮಾಹಿತಿ ನೀಡಿತೆಂದು ಟೋನರ್ ಸ್ಪಷ್ಟಪಡಿಸಿದ್ದಾರೆ.







