ಇಂಡಿಯನ್ ಓಪನ್ ಸರ್ಫಿಂಗ್: 2ನೆ ದಿನ ಚೆನ್ನೈ ಸರ್ಫರ್‌ಗಳ ಪ್ರಾಬಲ್ಯ
ಮಂಗಳೂರು, ಮೇ 28: ರಾಜ್ಯ ಪ್ರವಾಸೋದ್ಯಮ ಇಲಾಖೆ, ಸರ್ಫಿಂಗ್ ಫೆಡರೇಶನ್ ಇಂಡಿಯಾ, ಮಂತ್ರ ಸರ್ಫ್ ಕ್ಲಬ್ ಹಾಗೂ ಆಲ್ ಕಾರ್ಗೋ ಪ್ರಾಯೋಜಕತ್ವದಲ್ಲಿ ಇಲ್ಲಿನ ಸಸಿಹಿತ್ಲು ಬೀಚ್‌ನಲ್ಲಿ ನಡೆಯುತ್ತಿರುವ ಮೊದಲ ಆವೃತ್ತಿಯ ಇಂಡಿಯನ್ ಓಪನ್ ಸರ್ಫಿಂಗ್‌ನ ಎರಡನೆ ದಿನವಾದ ಶನಿವಾರ ಚೆನ್ನೈ ಸರ್ಫರ್‌ಗಳು ಪ್ರಾಬಲ್ಯ ಮೆರೆದಿದ್ದಾರೆ.
ಕರ್ನಾಟಕದಲ್ಲಿ ಮೊದಲ ಬಾರಿ ತ್ರಿದಿನ ಸರ್ಫಿಂಗ್ ಸ್ಪರ್ಧೆ ನಡೆಯುತ್ತಿದ್ದು, ರವಿವಾರ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳು ನಡೆಯುತ್ತವೆ.
2ನೆ ದಿನ ಅಂಡರ್-16, ಜೂನಿಯರ್(17-22 ವರ್ಷ), ಸೀನಿಯರ್(23-28 ವರ್ಷ) ಹಾಗೂ ಮುಕ್ತ ವಿಭಾಗಗಳಲ್ಲಿ ಮೊದಲ ಸುತ್ತಿನ ಸ್ಪರ್ಧೆ ಏರ್ಪಡಿಸಲಾಗಿತ್ತು. ನಾಲ್ಕು ವಿಭಾಗದಲ್ಲಿ ಕೌಶಲ್ಯ ಪ್ರದರ್ಶಿಸುವ ಸರ್ಫರ್‌ಗಳು ಸೆಮಿಫೈನಲ್‌ಗೆ ತೇರ್ಗೆಡೆಯಾಗುತ್ತಾರೆ.
ಅಂಡರ್-16 ವಿಭಾಗದಲ್ಲಿ ಪಾಂಡಿಚೇರಿಯ ಪರ್ಸಿವಲ್ ಫಯೊನ್, ಡಿ. ಸಂಜಯ್, ಸಂತೋಷನ್, ಮಣಿಕಂಠನ್ ನಿತೀಶ್, ಸಂಜಯ್ ಸೆಲ್ವಮಣಿ ಹಾಗೂ ತಮಿಳುನಾಡಿನ ಮಣಿವನ್ನನ್, ಯುವರಾಜ್ ಸೆಮಿಫೈನಲ್‌ಗೆ ತಲುಪಿದರು. ಜೂನಿಯರ್(17-22ವರ್ಷ)ವಿಭಾಗದಲ್ಲಿ ಚೆನ್ನೈನ ಆರ್.ಗೋವಿಂದ್, ಅಜಿತ್ ಕುಮಾರ್, ಸತೀಶ್, ಮಣಿಮನ್ನನ್ ಹಾಗೂ ಸೂರ್ಯ ಪಿ., ಚಿನ್ನಕೊಂಡ(ವಿಝಾಗ್), ಸ್ವಪ್ನಿಲ್ ಭಿಂಗೆ(ಗೋವಾ), ಸ್ಥಳೀಯ ಸರ್ಫರ್ ದೀಕ್ಷಿತ್ ಕೆ. ಸುವರ್ಣ ಸೆಮಿಫೈನಲ್ ಸುತ್ತಿಗೆ ತಲುಪಿದ್ದಾರೆ.
ಸೀನಿಯರ್ ವಿಭಾಗದಲ್ಲಿ ವರ್ಗೀಸ್(ಕೇರಳ), ಧರಣಿ ಸೆಲ್ವಕುಮಾರ್, ವಿಕ್ಕಿ ವಿ, ರಘುಲ್ ಪನೀರ್, ರಾಜ್ ಸೇಕರ್, ಮಣಿಕಂಠನ್‌ಡಿ.(ಎಲ್ಲರೂ ಚೆನ್ನೈ) ಸೆಮಿ ಫೈನಲ್‌ಗೆ ತಲುಪಿದರು.
ಮುಕ್ತ ವಿಭಾಗದಲ್ಲಿ ಕೇರಳದ ಅರೊವಿಲ್ ಸಮೈ ರೆವೋಲ್ ಹಾಗೂ ವರ್ಗೀಸ್, ಆರ್.ಗೋವಿಂದ್, ಸೇಕರ್ ಪಚೈ, ಧರಿಣಿೆ(ಎಲ್ಲರೂ ಚೆನ್ನೈ), ಕಿರಣ್ ಕುಮಾರ್ (ಮಂಗಳೂರು),ಬೆಲಿಝ್ ಪಿನೆಲ್, ಡಿಲ್ಲನ್ ಇಂಹೊಫ್(ಫ್ರಾನ್ಸ್), ಮಾರ್ಸೆಲ್ಲೊ(ಬ್ರೆಝಿಲ್),ಡಸ್ಟಿನ್ ಎಲ್ಲಿಸನ್(ಕ್ಯಾಲಿಫೋರ್ನಿಯ), ಡೇವಿಡ್ ಹರ್ನ್(ಆಸ್ಟ್ರೇಲಿಯ) ರವಿವಾರ ನಡೆಯಲಿರುವ ಸೆಮಿ ಫೈನಲ್‌ಗೆ ತೇರ್ಗಡೆಯಾದರು.







