ಜಾಟ್ ನಾಯಕ ಮತ್ತು ಇತರರ ವಿರುದ್ಧ ದೇಶದ್ರೋಹ ಪ್ರಕರಣ
ಜಿಂದ್,ಮೇ 28: ಹೊಸದಾಗಿ ಮೀಸಲಾತಿ ಚಳವಳಿಯನ್ನು ಆರಂಭಿಸಲು ಜನರನ್ನು ಪ್ರಚೋದಿಸುವ ಮೂಲಕ ಹರ್ಯಾಣದಲ್ಲಿ ಶಾಂತಿ ಮತ್ತು ಕೋಮು ಸೌಹಾರ್ದತೆಗೆ ಬೆದರಿಕೆಯೊಡ್ಡಿದ್ದಕ್ಕಾಗಿ ಜಾಟ್ ಸಂಘರ್ಷ ಸಮಿತಿಯ ಮುಖ್ಯಸ್ಥ ಯಶಪಾಲ ಮಲಿಕ್ ಮತ್ತು ಇತರ 125 ಜನರ ವಿರುದ್ಧ ಶುಕ್ರವಾರ ದೇಶದ್ರೋಹ ಪ್ರಕರಣ ದಾಖಲಾಗಿದೆ.
ಬುಧವಾರ ಸ್ಥಳೀಯ ಜಾಟ್ ಧರ್ಮಶಾಲೆಯೊಂದರಲ್ಲಿ ಸಭೆಯೊಂದನ್ನು ಕರೆದಿದ್ದ ಮಲಿಕ್ ಜಾಟ್ ಸಮುದಾಯಕ್ಕೆ ಮೀಸಲಾತಿ, ಹಿಂದಿನ ಪ್ರತಿಭಟನೆಗಳ ಸಂದರ್ಭ ದಾಖಲಿಸಲಾಗಿದ್ದ ಪ್ರಕರಣಗಳ ಹಿಂದೆಗೆತ ಮತ್ತು ಫೆಬ್ರವರಿಯಲ್ಲಿ ಚಳವಳಿ ಸಂದರ್ಭ ಕೊಲ್ಲಲ್ಪಟ್ಟವರಿಗೆ ಪರಿಹಾರ ನೀಡಿಕೆಗಾಗಿ ಆಗ್ರಹಿಸಿ ಜೂ.5ರಂದು ಇನ್ನೊಂದು ಚಳವಳಿಯನ್ನು ಆರಂಭಿಸುವುದಾಗಿ ಪ್ರಕಟಿಸಿದ್ದರು.
ಸರಕಾರಿ ಉದ್ಯೋಗಗಳಲ್ಲಿ ಮೀಸಲಾತಿಗೆ ಆಗ್ರಹಿಸಿ ಜಾಟ್ ಸಮುದಾಯವು ಈ ಹಿಂದೆ ನಡೆಸಿದ್ದ ಮುಷ್ಕರದ ಸಂದರ್ಭ 30 ಜನರು ಹಿಂಸಾಚಾರಕ್ಕೆ ಬಲಿಯಾಗಿದ್ದು, ಭಾರೀ ಪ್ರಮಾಣದ ಆಸ್ತಿ ಹಾನಿಯುಂಟಾಗಿತ್ತು.
ಇತರ ರಾಜ್ಯಗಳಲ್ಲಿಯೂ ಪ್ರತಿಭಟನೆ ನಡೆಸುವುದಾಗಿ ಮಲಿಕ್ ಬೆದರಿಕೆಯೊಡ್ಡಿದ್ದರು ಎಂದು ಪೊಲೀಸರು ತಿಳಿಸಿದರು.





