ಫ್ರೆಂಚ್ ಓಪನ್ ಟೆನಿಸ್ ಟೂರ್ನಿ: ವಾವ್ರಿಂಕ ನಾಲ್ಕನೆ ಸುತ್ತಿಗೆ ಪ್ರವೇಶ

ಪ್ಯಾರಿಸ್, ಮೇ 28: ಹಾಲಿ ಚಾಂಪಿಯನ್ ಸ್ಟಾನ್ ವಾವ್ರಿಂಕ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ನಾಲ್ಕನೆ ಸುತ್ತಿಗೆ ಪ್ರವೇಶಿಸಿದ್ದಾರೆ.
ಶುಕ್ರವಾರ ನಡೆದ ಪುರುಷರ ಸಿಂಗಲ್ಸ್‌ನ ಮೂರನೆ ಸುತ್ತಿನ ಪಂದ್ಯದಲ್ಲಿ ಸ್ವಿಸ್‌ನ 3ನೆ ಶ್ರೇಯಾಂಕದ ಆಟಗಾರ ವಾವ್ರಿಂಕ ಅವರು ಬ್ರಿಟನ್‌ನ ಜೆರೆಮಿ ಚಾರ್ಡಿ ಅವರನ್ನು 6-4, 6-3, 7-5 ಸೆಟ್‌ಗಳ ಅಂತರದಿಂದ ಮಣಿಸಿದ್ದಾರೆ.
9 ಬಾರಿಯ ಚಾಂಪಿಯನ್ ರಫೆಲ್ ನಡಾಲ್ ಎಡಗೈ ಮಣಿಕಟ್ಟಿನ ನೋವಿನಿಂದಾಗಿ ಟೂರ್ನಿಯಿಂದ ಹಠಾತ್ತನೆ ಹಿಂದೆ ಸರಿದ ಕೆಲವೇ ಸಮಯದ ಬಳಿಕ ವಾವ್ರಿಂಕ ಟೆನಿಸ್ ಕೋರ್ಟ್‌ಗೆ ಇಳಿದರು.
ಪ್ರಶಸ್ತಿ ಫೇವರಿಟ್ ನಡಾಲ್ ಟೂರ್ನಿಯಿಂದ ಹಿಂದೆ ಸರಿದಿರುವ ಕಾರಣ ವಾವ್ರಿಂಕಗೆ ಈ ವರ್ಷ ಪ್ರಶಸ್ತಿಯನ್ನು ತನ್ನಲ್ಲೆ ಉಳಿಸಿಕೊಳ್ಳುವ ಅವಕಾಶ ಹೆಚ್ಚಾಗಿದೆ.
ಚಾರ್ಡಿ ಅವರನ್ನು ಸುಲಭವಾಗಿ ಮಣಿಸಿದ ವಾವ್ರಿಂಕ ವೃತ್ತಿಜೀವನದಲ್ಲಿ ಆರನೆ ಬಾರಿ ಅಂತಿಮ 16 ಹಂತವನ್ನು ತಲುಪಿದರು. ವಾವ್ರಿಂಕ ಮುಂದಿನ ಸುತ್ತಿನಲ್ಲಿ ಫ್ರಾನ್ಸ್‌ನ ಗಿಲ್ಲೆಸ್ ಸೈಮನ್ ಅಥವಾ ಸರ್ಬಿಯದ ವಿಕ್ಟರ್ ಟ್ರೊಸ್ಕಿ ಅವರನ್ನು ಎದುರಿಸಲಿದ್ದಾರೆ.
ಸೆರೆನಾ ಪ್ರಯಾಸದ ಗೆಲುವು
ಪ್ಯಾರಿಸ್, ಮೇ28: ಫ್ರೆಂಚ್ ಓಪನ್‌ನ ನಾಲ್ಕನೆ ಸುತ್ತಿನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಸೆರೆನಾ ವಿಲಿಯಮ್ಸ್ ಫ್ರಾನ್ಸ್‌ನ ಕ್ರಿಸ್ಟಿನಾ ಮ್ಲಾಡನೊವಿಕ್ ವಿರುದ್ಧ ಪ್ರಯಾಸದ ಗೆಲುವು ಸಾಧಿಸಿದರು.
ಶನಿವಾರ ಇಲ್ಲಿ ಎರಡೂವರೆ ಗಂಟೆಗಳ ಕಾಲ ನಡೆದ ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ ಅಮೆರಿಕದ ಸೆರೆನಾ ಫ್ರಾನ್ಸ್‌ನ ಕ್ರಿಸ್ಟಿನಾ ವಿರುದ್ಧ 6-4, 7-6(10) ಸೆಟ್‌ಗಳ ಅಂತರದಿಂದ ಗೆಲುವು ಸಾಧಿಸಿದರು.
ಸೆರೆನಾ ಮುಂದಿನ ಸುತ್ತಿನಲ್ಲಿ ಉಕ್ರೇನ್‌ನ 18ನೆ ಶ್ರೇಯಾಂಕದ ಎಲಿನಾ ಸ್ವಿಟೊಲಿನಾರನ್ನು ಎದುರಿಸಲಿದ್ದಾರೆ.
ಸಾನಿಯಾ-ಹಿಂಗಿಸ್ ಮೂರನೆ ಸುತ್ತಿಗೆ ಲಗ್ಗೆ
ಪ್ಯಾರಿಸ್, ಮೇ 28: ಅಗ್ರ ಶ್ರೇಯಾಂಕದ ಡಬಲ್ಸ್ ಆಟಗಾರ್ತಿರಾದ ಸಾನಿಯಾ ಮಿರ್ಝಾ ಹಾಗೂ ಮಾರ್ಟಿನಾ ಹಿಂಗಿಸ್ ಫ್ರೆಂಚ್ ಓಪನ್‌ನ ವನಿತೆಯರ ಡಬಲ್ಸ್ ಪಂದ್ಯದಲ್ಲಿ ಮೂರನೆ ಸುತ್ತಿಗೆ ತೇರ್ಗಡೆಯಾಗಿದ್ದಾರೆ.
ಇಲ್ಲಿ ಶುಕ್ರವಾರ ಏಕಪಕ್ಷೀಯವಾಗಿ ನಡೆದ ಎರಡನೆ ಸುತ್ತಿನ ಪಂದ್ಯದಲ್ಲಿ ಇಂಡೋ-ಸ್ವಿಸ್ ಜೋಡಿ ಸಾನಿಯಾ-ಹಿಂಗಿಸ್ ಜಪಾನ್‌ನ ನಾವೊ ಹಿಬಿನೊ ಹಾಗು ಎರಿ ಹೊಝುಮಿ ಅವರನ್ನು 6-2, 6-0 ನೇರ ಸೆಟ್‌ಗಳಿಂದ ಮಣಿಸಿದ್ದಾರೆ.
ಸಾನಿಯಾ ಹಾಗೂ ಹಿಂಗಿಸ್ ಮುಂದಿನ ಸುತ್ತಿನಲ್ಲಿ ಝೆಕ್ ಗಣರಾಜ್ಯದ ಬಾರ್ಬೊರ ಕ್ರೆಜ್‌ಸಿಕೊವಾ ಹಾಗೂ ಕಟೆರಿನ ಸಿನಿಯಾಕೊವಾರನ್ನು ಎದುರಿಸಲಿದ್ದಾರೆ.







