ಮಕ್ಕಳ ರಕ್ಷಣಾ-ಮಹಿಳಾ ನೀತಿ ಶೀಘ್ರ ಜಾರಿ: ಉಮಾಶ್ರೀ
ಉಡುಪಿ, ಮೇ 28: ಶಿಕ್ಷಣ ಸಂಸ್ಥೆಗಳಲ್ಲಿ ಮಕ್ಕಳ ರಕ್ಷಣಾ ನೀತಿಯನ್ನು ಜಾರಿಗೆ ತರುವ ಬಗ್ಗೆ ಈಗಾಗಲೇ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಅದೇ ರೀತಿ ಮಹಿಳಾ ನೀತಿಯನ್ನು ಸರಕಾರ ಜಾರಿಗೆ ತರಲು ಉದ್ದೇಶಿಸಿದೆ ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವೆ ಉಮಾಶ್ರೀ ತಿಳಿಸಿದ್ದಾರೆ.
ಉಡುಪಿ ಜಿಲ್ಲಾಡಳಿತ, ಜಿಪಂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಕೇಂದ್ರ ಸರಕಾರದ ಯೋಜನೆ ಸಖಿ(ಒನ್ ಸ್ಟಾಪ್ ಸೆಂಟರ್) ಕಟ್ಟಡದ ಶಂಕುಸ್ಥಾಪನೆಯನ್ನು ಶನಿವಾರ ನಿಟ್ಟೂರು ಸೀ ಸೇವಾ ನಿಕೇತನ ಸಂಸ್ಥೆಯ ಆವರಣದಲ್ಲಿ ನೆರವೇರಿಸಿ ಅವರು ಮಾತನಾಡುತ್ತಿದ್ದರು.
ಆ್ಯಸಿಡ್ ದಾಳಿಗೆ ಒಳಗಾದ ಮಹಿಳೆಯರಿಗೆ 3 ಸಾವಿರ ರೂ. ಮಾಶಾಸನ ನೀಡಲಾಗುತ್ತಿದೆ. ಇವರಿಗೆ ಮಹಿಳಾ ಆಯೋಗದಿಂದ ನೀಡಲಾಗುತ್ತಿದ್ದ 2 ಲಕ್ಷ ರೂ. ಪರಿಹಾರವನ್ನು 3 ಲಕ್ಷ ರೂ.ಗೆ ಏರಿಸಲಾಗಿದೆ. ಅಲ್ಲದೆ ಇವರಿಗೆ ಮಲ್ಟಿ ಸ್ಪೆಶಲ್ ಆಸ್ಪತ್ರೆಗಳಲ್ಲಿ 20 ಲಕ್ಷ ರೂ.ವರೆಗಿನ ವೈದ್ಯಕೀಯ ಚಿಕಿತ್ಸೆಯ ನೆರವನ್ನು ಸರಕಾರ ಭರಿಸುತ್ತದೆ ಎಂದು ಅವರು ಹೇಳಿದರು.
ಈಗಾಗಲೇ ರಾಜ್ಯ ಸರಕಾರ ರಾಜ್ಯದ ಎಲ್ಲ ಜಿಲ್ಲಾಸ್ಪತ್ರೆಗಳಲ್ಲಿ ಅತ್ಯಾಚಾರ ಹಾಗೂ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಒಂದೇ ಸೂರಿನಡಿ ನೆರವು ದೊರೆಯುವ ವಿಶೇಷ ಚಿಕಿತ್ಸಾ ಘಟಕವನ್ನು ಆರಂಭಿಸಿದೆ. ಇದರಲ್ಲಿ ಈವರೆಗೆ 93 ಮಂದಿ ಮಹಿಳೆಯರಿಗೆ ನೆರವು ನೀಡಲಾಗಿದೆ. ಇಂತಹ ಮಹಿಳೆಯರಿಗೆ ಜಿಲ್ಲಾಕಾರಿಗಳ ನೇತೃತ್ವದಲ್ಲಿ ರಚಿಸಿರುವ ಸಮಿತಿಯಿಂದ ತಕ್ಷಣಕ್ಕೆ 25 ಸಾವಿರ ರೂ. ಹಾಗೂ ಮರಣ ಹೊಂದಿದರೆ ಒಂದು ಲಕ್ಷ ರೂ. ಪರಿಹಾರ ನೀಡಲು ಅವಕಾಶ ಕಲ್ಪಿಸಲಾಗಿದೆ. ಇದಕ್ಕಾಗಿ ನಿ ಸ್ಥಾಪಿಸಿ 5 ಕೋಟಿ ರೂ. ಮೀಸಲಿರಿಸಲಾಗಿದೆ ಎಂದರು.
ಸಖಿ ಯೋಜನೆಯಡಿ ಕಟ್ಟಡ ನಿರ್ಮಾಣಕ್ಕಾಗಿ 37.68ಲಕ್ಷ ರೂ. ಮತ್ತು ಆಡಳಿತ ಹಾಗೂ ಇತರೆ ವೆಚ್ಚಕ್ಕಾಗಿ 8.19ಲಕ್ಷ ರೂ. ಅನುದಾನ ಕೇಂದ್ರ ಸರಕಾರದಿಂದ ಬಿಡುಗಡೆಯಾಗಿದೆ. ಈ ಕೇಂದ್ರದಲ್ಲಿ ಮಹಿಳೆಯರಿಗೆ ಒಂದೇ ಸೂರಿನಡಿ ವೈದ್ಯಕೀಯ, ಪೊಲೀಸ್, ಕಾನೂನು ನೆರವು, ವಸತಿ ವ್ಯವಸ್ಥೆ, ಆಪ್ತ ಸಮಾಲೋಚನೆಯನ್ನು ನೀಡಲಾಗುತ್ತದೆ ಎಂದು ಸಚಿವರು ತಿಳಿಸಿದರು.
ಶಾಸಕ ಪ್ರಮೋದ್ ಮಧ್ವರಾಜ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ, ಜಿಪಂ ಅಧ್ಯಕ್ಷ ದಿನಕರ ಬಾಬು, ಸಾಬೂನು ಮತ್ತು ಮಾರ್ಜಕ ಮಂಡಳಿ ಅಧ್ಯಕ್ಷೆ ವೆರೋನಿಕಾ ಕರ್ನೆಲಿಯೊ, ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಉಪಾಧ್ಯಕ್ಷೆ ಸಂಧ್ಯಾ, ರಾಜ್ಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಭಂಡಾರಿ, ಜಿಪಂ ಸಿಇಒ ಪ್ರಿಯಾಂಕಾ ಮೇರಿ ್ರಾನ್ಸಿಸ್ ಮುಖ್ಯ ಅತಿಥಿಗಳಾಗಿದ್ದರು.
ಮಹಿಳಾ ರಕ್ಷಣಾ ಸಮಿತಿಯ ಜಂಟಿ ನಿರ್ದೇಶಕಿ ನರ್ಮದಾ ಆನಂದ್, ರಾಮಮೂರ್ತಿ, ಸರಳಾ ಕಾಂಚನ್, ಯುವರಾಜ್, ಗೀತಾ ವಾಗ್ಳೆ, ಡಾ. ಸುನೀತಾ ಶೆಟ್ಟಿ, ಜಾನಕಿ ಶೆಟ್ಟಿಗಾರ್, ಹಸನ್ ಮೊದಲಾದವರು ಉಪಸ್ಥಿತರಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಗ್ರೇಸಿ ಗೋನ್ಸಾಲ್ವಿಸ್ ಸ್ವಾಗತಿಸಿದರು. ವೀಣಾ ವಿವೇಕಾನಂದ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.







