ಓಎಲ್ಎಕ್ಸ್ ನಲ್ಲಿ ಕಾರು ಹುಡುಕುತ್ತಿದ್ದವನಿಗೆ ಸಿಕ್ಕಿತು, ತನ್ನದೇ ಕಳವಾದ ಕಾರು !

ನೋಯ್ಡ, ಮೇ 29: ಕಳೆದ ಆಗಸ್ಟ್‌ನಲ್ಲಿ ಕಳವಾಗಿದ್ದ ಹೋಂಡಾ ಸಿಟಿ ಕಾರನ್ನು ರಿಯಲ್ ಎಸ್ಟೇಟ್ ದಲ್ಲಾಳಿಯೊಬ್ಬ ಇ-ಕಾಮರ್ಸ್ ಜಾಲತಾಣದ ಮೂಲಕ ವಾಪಾಸು ಪಡೆದ ಕುತೂಹಲಕಾರಿ ಘಟನೆ ನಡೆದಿದೆ. ಜಾಹೀರಾತುದಾರನನ್ನು ಭೇಟಿಯಾಗುವ ಸಂದರ್ಭದಲ್ಲಿ ಪೊಲೀಸರಿಗೆ ಮಾಹಿತಿ ನೀಡಿ, ಆತನಿಗೆ ಬಲೆ ಬೀಸಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಬ್ಲ್ಯಾಕ್ ಸೆಡಾನ್ ಕಾರು, ಕಳುವಾಗುವಾಗ ಇದ್ದ ಸ್ಥಿತಿಯಲ್ಲೇ ಇತ್ತು. ಅದರ ನೋಂದಣಿ ಸಂಖ್ಯೆ ಕೂಡಾ ಬದಲಾಗಿರಲಿಲ್ಲ. ಡಿಎಲ್ 4ಸಿಆರ್ 0757 ರಿಜಿಸ್ಟ್ರೇಷನ್ ಸಂಖ್ಯೆ ಹೊಂದಿದ್ದ ಕಾರು, ಓಎಲ್‌ಎಕ್ಸ್ ವೆಬ್‌ಸೈಟ್‌ನಲ್ಲಿ ಕುಲವಂತ ಸಿಂಗ್ ಕಣ್ಣಿಗೆ ಬಿತ್ತು. ಸೆಕ್ಟರ್ 21ರ ಮನೆ ಮುಂದೆ ನಿಲ್ಲಿಸಿದ್ದ ಕಾರು ಕಳುವಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಲಾಗಿತ್ತು. ಕಾರು ವಾಪಸ್ ದೊರಕುವ ಸೂಚನೆ ಇಲ್ಲ ಎಂಬ ಕಾರಣಕ್ಕೆ ಸಿಂಗ್, ಬಳಕೆ ಮಾಡಿದ ಕಾರು ಖರೀದಿಸುವ ಪ್ರಯತ್ನಕ್ಕೆ ಮುಂದಾದರು. ಈ ವಾರ ಓಎಲ್‌ಎಕ್ಸ್‌ನಲ್ಲಿ ಜಾಹೀರಾತು ನೋಡಲು ಆರಂಭಿಸಿದರು. ಆಗ ಈ ಕಾರು ಮಾರಾಟಕ್ಕಿದೆ ಎಂಬ ಜಾಹೀರಾತು ಕಂಡರು. ಜತೆಗೆ ಜಾಹೀರಾತುದಾರನ ಮೊಬೈಲ್ ಸಂಖ್ಯೆ ಕೂಡಾ ಇತ್ತು ಎಂದು ಪೊಲೀಸ್ ಅಧೀಕ್ಷಕ ದಿನೇಶ್ ಯಾದವ್ ವಿವರಿಸಿದರು.
ಲೋನಿ ನಿವಾಸಿ ಅಹ್ಮದ್ ಎಂಬ ಹೆಸರಿನ ಆ ವ್ಯಕ್ತಿಯನ್ನು ಸಂಪರ್ಕಿಸಿ, ವ್ಯವಹಾರ ಕುದುರಿಸಿದರು. ಸೆಕ್ಟರ್ 21-25ರ ಸಂದಿಯಲ್ಲಿ ಭೇಟಿ ನಿಗದಿಯಾಯಿತು. ಮಫ್ತಿಯಲ್ಲಿದ್ದ ಪೊಲೀಸರು ಕಳ್ಳನನ್ನು ಬಂಧಿಸಿದರು. ಲೋನಿಯ ಮತ್ತೊಬ್ಬ ನಿವಾಸಿಯಿಂದ ಈ ಕಾರು ಖರೀದಿಸಿರುವುದಾಗಿ ಆತ ಹೇಳಿದ್ದಾನೆ. ಕೆಲ ತಿಂಗಳ ಕಾಲ ಕಾರನ್ನು ಬಳಸಿ, ಓಎಲ್‌ಎಕ್ಸ್‌ನಲ್ಲಿ ಮಾರಾಟ ಮಾಡಲು ಆತ ನಿರ್ಧರಿಸಿದ. ಮುಖ್ಯ ಆರೋಪಿ ಝುಲ್ಫಿಕರ್‌ನನ್ನು ಕೂಡಾ ಪತ್ತೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.





