ಇಲ್ಲೊಬ್ಬ ‘ಗೋಲ್ಡನ್ ಬಾಬಾ’ಗೆ ಬೇಕಂತೆ ಪೊಲೀಸ್ ಭದ್ರತೆ!

ಆಗ್ರಾ, ಮೇ 29: ಇಲ್ಲೊಬ್ಬನಿದ್ದಾನೆ ಸಾಧು. ಆದರೆ,ಆತನಿಗೆ ಚಿನ್ನವೆಂದರೆ ಪಂಚಪ್ರಾಣ. ಮೈತುಂಬಾ ಸುಮಾರು 3 ಕೋಟಿ ರೂ. ಚಿನ್ನ ಧರಿಸಿರುವ ಈ ಸಾಧುವನ್ನು ಎಲ್ಲರೂ ‘ಗೋಲ್ಡನ್ ಬಾಬಾ’ ಎಂದು ಕರೆಯುತ್ತಾರೆ. ವಿಷಯವೇನೆಂದರೆ, ಊರೆಲ್ಲಾ ಸುತ್ತುವ ಈ ಸಾಧುವನ್ನು ಕಾಯಲು ಪೊಲೀಸರ ಭದ್ರತೆ ಬೇಕೆಂತೆ...
ಹರಿದ್ವಾರದ ಪ್ರಸಿದ್ಧ ಜುನಾ ಅಖಾಡದ ತಪಸ್ವಿಯಾಗಿರುವ ಈ ಸಾಧು ತಾನು ಹೋದಲೆಲ್ಲಾ ಬಿಗಿ ಭದ್ರತೆ ನೀಡುವಂತೆ ಆಗ್ರಾದ ಉನ್ನತ ಪೊಲೀಸ್ ಅಧಿಕಾರಿಯನ್ನು ಭೇಟಿಯಾಗಲು ಹೊರಟಿದ್ದಾರೆ.
ಈ ಸಾಧು ಮೇ 21 ರಂದು ಮಧ್ಯಪ್ರದೇಶದ ಉಜ್ಜೈನಿಯಲ್ಲಿ ಕೊನೆಗೊಂಡ ಸಿಂಹಸ್ಥ ಕುಂಭ ಮೇಳದಿಂದ ಬರೇಲಿಗೆ ತೆರಳುವ ಮಾರ್ಗಮಧ್ಯದಲ್ಲಿ ಆಗ್ರಾ ಪೊಲೀಸರನ್ನು ಭೇಟಿಯಾಗಲು ತೆರಳಿದ್ದಾರೆ. 11.5 ಕೆಜಿ ಚಿನ್ನವನ್ನು ಧರಿಸಿರುವ ಈ ಸಾಧು ತನಗೆ ಹಾಗೂ ತನ್ನ ಕಾರಿನಲ್ಲಿರುವ ಲೋಹದ ವಿಗ್ರಹಗಳಿಗೆ ಭದ್ರತೆ ನೀಡಬೇಕೆಂದು ಎಸ್‌ಎಸ್‌ಪಿ ಡಾ. ಪ್ರೀತಿಂದರ್ ಸಿಂಗ್‌ರನ್ನು ಕೇಳಿಕೊಂಡಿದ್ದಾರೆ.
ನಾನು ಆಗ್ರಾದ ಗಡಿಯ ತನಕ ಭದ್ರತೆ ನೀಡುವೆ. ಉತ್ತರ ಪ್ರದೇಶದ ಇತರ ಜಿಲ್ಲೆಗಳಲ್ಲಿ ಭದ್ರತೆಯ ಅಗತ್ಯವಿದ್ದರೆ, ಉನ್ನತ ಅಧಿಕಾರಿಗಳಲ್ಲಿ ಕೋರಿಕೆ ಸಲ್ಲಿಸುವುದಾಗಿ ಸಾಧುವಿಗೆ ತಾನು ತಿಳಿಸಿದ್ದೇನೆ ಎಂದು ಸಿಂಗ್ ಹೇಳಿದ್ದ್ದಾರೆ.
‘‘ನನ್ನ ಪಾಲಿಗೆ ಚಿನ್ನ ಎಂದರೆ ದೇವತೆ ಇದ್ದಂತೆ. ಚಿನ್ನವನ್ನು ಧರಿಸಿದರೆ ನನಗೆ ಶಾಂತಿ ಸಿಗುತ್ತದೆ. ನಾನು 1972ರಿಂದ ಚಿನ್ನವನ್ನು ಧರಿಸುತ್ತಿದ್ದೇನೆ’’ ಎಂದು ಸದ್ಯ ಕುತ್ತಿಗೆಯಲ್ಲಿ ದೊಡ್ಡ ಚೈನ್ ಹಾಗೂ ಎರಡೂ ಕೈಗಳಲ್ಲಿ ದಪ್ಪದ ಬ್ರಾಸ್‌ಲೇಟ್ ಧರಿಸಿರುವ ಸಾಧು ಹೇಳಿದ್ದಾರೆ.







