ಮಂಗಳೂರು: ಕಟ್ಟಡ ಕಾರ್ಮಿಕರ ಸಮ್ಮಿಲನ 2016

ಮಂಗಳೂರು, ಮೇ 29: ಸದಾ ಅಪಾಯಕಾರಿಯಾಗಿರುವ ಮತ್ತು ಸಾಮಾಜಿಕ ಭದ್ರತೆಯಿಲ್ಲದೆ ಇರುವ ವೃತ್ತಿಯಾಗಿರುವ ಕಟ್ಟಡ ಕಾರ್ಮಿಕರಿಗೆ ಕಾಯ್ದೆಯ ಮೂಲಕ ಭದ್ರತೆ ಒದಗಿಸಲಾಗುತ್ತಿದ್ದರೂ ಅದು ಸಂಪೂರ್ಣವಾಗಿ ಅನುಷ್ಠಾನವಾಗಿಲ್ಲ ಎಂದು ದ.ಕ ಜಿಲ್ಲಾ ಕಾರ್ಮಿಕ ಆಯುಕ್ತ ಡಿ.ಜೆ ನಾಗೇಶ್ ಹೇಳಿದರು.
ಅವರು ನಗರದ ಪುರಭನದಲ್ಲಿ ಸಿಐಟಿಯು ನೇತೃತ್ವದ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ ನಿಂದ ಹೋರಾಟದ ಗೆಲುವಿಗೆ ಹತ್ತು ವರ್ಷಗಳಾಗಿರುವ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಕಟ್ಟಡ ಕಾರ್ಮಿಕರ ಸಮ್ಮಿಲನ 2016 ಉದ್ಘಾಟಿಸಿ ಮಾತನಾಡಿದರು.
ಕಟ್ಟಡ ಕಾರ್ಮಿಕರಿಗೆ ರೂಪಿಸಲಾದ ಕಾಯ್ದೆ ಹಲವಾರು ಸವಲತ್ತುಗಳನ್ನು ನೀಡುತ್ತಿದೆ. ಕಟ್ಟಡ ಕಾರ್ಮಿಕರಿಗೆ ಮತ್ತು ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ಬೇಕಾದ ಸವಲತ್ತುಗಳನ್ನು ನೀಡಲಾಗುತ್ತಿದೆ. ಇವುಗಳನ್ನು ಪಡೆಯಲು ಕಟ್ಟಡ ಕಾರ್ಮಿಕರು ನೊಂದಾವಣೆ ಮಾಡಬೇಕಾದದು ಅಗತ್ಯ . ಆದರೆ ಹೆಚ್ಚಿನ ಸಂಖ್ಯೆಯ ಕಟ್ಟಡ ಕಾರ್ಮಿಕರು ನೊಂದಾವಣೆ ಮಾಡದೆ ಇರುವುದರಿಂದ ಅವರಿಗೆ ಸವಲತ್ತುಗಳು ಸಿಗುತ್ತಿಲ್ಲ. ಕಾರ್ಮಿಕರ ಕನಿಷ್ಟ ಭದ್ರತೆಗಾಗಿ ಮತ್ತು ಆರೋಗ್ಯದ ದೃಷ್ಟಿಯಿಂದ ಕಟ್ಟಡ ಕಾರ್ಮಿಕರು ನೊಂದಾವಣೆ ಮಾಡಬೇಕಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಸಿಪಿಎಂ ದ.ಕ ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ ಅವರು ಕಟ್ಟಡಗಳನ್ನು ಕಟ್ಟುವ ಕಟ್ಟಡ ಕಾರ್ಮಿಕರಿಗೆ ಸ್ವಂತ ಮನೆ ನಿರ್ಮಿಸುವ ಆಸೆ ಈಗಿರುವ ವ್ಯವಸ್ಥೆಯಲ್ಲಿ ಸಾಧ್ಯವಿಲ್ಲ. ಸರಕಾರ ಕಟ್ಟಡ ಕಾರ್ಮಿಕರಿಗೆ 11 ಸವಲತ್ತುಗಳನ್ನು ನೀಡುತ್ತಿದೆ. ಇನ್ನು 25 ಸವಲತ್ತುಗಳನ್ನು ನೀಡಬೇಕೆಂಬುದು ನಮ್ಮ ಬೇಡಿಕೆ. ಅದರಲ್ಲಿಯೂ ಕಟ್ಟಡ ಕಾರ್ಮಿಕರಿಗೆ ಮನೆ ನಿರ್ಮಾಣವಾಗಬೇಕೆಂಬುದು ನಮ್ಮ ಮೊದಲ ಬೇಡಿಕೆ. ಅದಕ್ಕಾಗಿ ಹೋರಾಟವನ್ನು ರೂಪಿಸಲಾಗುತ್ತದೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ ರಾಜ್ಯ ಕಾರ್ಯದರ್ಶಿ ಮಹಾಂತೇಶ್ ಮಾತನಾಡಿ ಕಟ್ಟಡ ಕಾರ್ಮಿಕರು ಸುರಕ್ಷತೆಯಿಲ್ಲದೆ ಬದುಕುತ್ತಿದ್ದಾರೆ.ಸರಕಾರಿ ಅಂಕಿ ಅಂಶದ ಪ್ರಕಾರ ಅರ್ಧ ಗಂಟೆಗೊಮ್ಮೆ ಕಟ್ಟಡ ಕಾರ್ಮಿಕ ಕೆಲಸದ ಸ್ಥಳದಲ್ಲಿ ಅವಘಡ ವಾಗಿ ಸಾವನ್ನಪ್ಪುವ ಬಗ್ಗೆ ವರದಿ ಇದೆ. ಕಟ್ಟಡ ಕಾರ್ಮಿಕರಿಗೆ ಸುರಕ್ಷೆಯನ್ನು ನೀಡುವ ನಿಟ್ಟಿನಲ್ಲಿ ಸರಕಾರ ಮತ್ತು ಮಾಲೀಕರು ಮುಂದಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾರ್ಮಿಕ ಮುಖಂಡರುಗಳಾದ ಸುನಿಲ್ ಕುಮಾರ್ ಬಜಾಲ್, ಕೃಷ್ಣಪ್ಪ ಕೊಂಚಾಡಿ, ಯೋಗೀಶ್ ಜೆಪ್ಪಿನಮೊಗರು, ಸಂತೋಷ್ ಶಕ್ತಿನಗರ, ಅಶೋಕ್ ಸಾಲ್ಯಾನ್ ಉಪಸ್ಥಿತರಿದ್ದರು.







