ದೆಹಲಿಯ ಸುತ್ತ ಮುತ್ತ ಈ ಅನುಭವವನ್ನು ನೀವು ಪಡೆಯಲೇಬೇಕು

ದೆಹಲಿ ದೇಶದ ರಾಜಧಾನಿಯಾಗಿರುವ ಕಾರಣ ಜನರ ರಜಾ ಮಜಾದ ಪ್ರಿಯ ತಾಣವೂ ಆಗಿದೆ. ಉತ್ತರಾಂಚಲ ಮತ್ತು ಹಿಮಾಚಲ ಪ್ರದೇಶದ ನಡುವೆ ಇರುವ ದೆಹಲಿಗೆ ಭೇಟಿ ಕೊಡುವವರು ತ್ವರಿತವಾಗಿ ರಾಜಸ್ಥಾನಕ್ಕೂ ಒಂದು ಬಾರಿ ಭೇಟಿ ನೀಡಿ ಮರುಭೂಮಿ ಮತ್ತು ವನ್ಯಜೀವಿಗಳನ್ನು ನೋಡುತ್ತಾರೆ. ಆದರೆ ದೆಹಲಿಯ ಸುತ್ತಮುತ್ತ ಮಾಡಲೇಬೇಕಾದ ಕೆಲವು ವಿಷಯಗಳಿವೆ. ಅವುಗಳ ವಿವರ ಇಲ್ಲಿದೆ.
ಬೀರ್ ಬಿಲ್ಲಿಂಗ್‌ನಲ್ಲಿ ಪ್ಯಾರಾ ಗ್ಲೈಡಿಂಗ್

ಹಿಮಾಚಲ ಪ್ರದೇಶದ ಬೀರ್ ಬಿಲ್ಲಿಂಗ್‌ನಲ್ಲಿ ಆಳವಾದ ಕಣಿವೆ ಮತ್ತು ಪರ್ವತಗಳ ಮೇಲೆ ಪ್ಯಾರಾ ಗ್ಲೈಡಿಂಗ್ ಮಾಡುವುದು ಅದ್ಭುತ ಅನುಭವ. ತಂಪಾದ ಹವೆ ಮತ್ತು ಪ್ರಕೃತಿಯ ನಡುವೆ ಇದು ಮರೆಯದ ಅನುಭವ ನೀಡಲಿದೆ.
ರಾಫ್ಟಿಂಗ್

ಮಧ್ಯಪ್ರದೇಶದ ಶಿವಪುರಿಯಲ್ಲಿ ಗಂಗಾ ನದಿಯಲ್ಲಿ ರಾಫ್ಟಿಂಗ್ ಮಾಡಬಹುದು. ಕಲ್ಲುಗಳು ಮತ್ತು ಬಂಡೆಗಳ ನಡುವೆ ತೆರೆಗಳಲ್ಲಿ ಮೇಲೇಳುತ್ತಾ ಮಾಡುವ ರಾಫ್ಟಿಂಗ್ ಅನುಭವ ಜೀವನದಲ್ಲಿ ಮರೆಯಲು ಸಾಧ್ಯವೇ ಇಲ್ಲ.
ಚಾರಣ

ಚಾರಣ ಪ್ರಿಯರು ಉತ್ತರಖಂಡಕ್ಕೆ ಭೇಟಿ ನೀಡಲೇಬೇಕು. ಚೋಪ್ಟಾ-ಚಂದ್ರಶಿಲಾ ಚಾರಣವು ನಿಮಗೆ ಅರಣ್ಯದ ನಡುವೆ ಹಸಿರಿನ ಪ್ರದೇಶದಲ್ಲಿ ನಡೆಯುವ ಅವಕಾಶ ನೀಡಲಿದೆ. ಸ್ಥಳೀಯರ ಜೊತೆಗೆ ಕುಳಿತು ಚಹಾ ಸೇವಿಸುತ್ತಾ ಹಿಮಾಲಯದ ತಪ್ಪಲಲ್ಲಿ ನಡೆಯುವ ಅನುಭವ ಅದ್ಭುತ.
ಪಕ್ಷಿ ವೀಕ್ಷಣೆ

ರಾಜಸ್ಥಾನದ ಭರತ್‌ಪುರ ಪಕ್ಷಿ ಪ್ರಿಯರಿಗೆ ಉತ್ತಮ ಜಾಗ. ಕಿಯೋಲಾಡೊ ಹುಲ್ಲುಗಾವಲು, ಬೆಳಗಿನ ಸೂರ್ಯ ಮತ್ತು ಮರಗಿಡಗಳು, ಜೌಗು ಪ್ರದೇಶದಲ್ಲಿ ಹಲವು ಸ್ಥಳೀಯ ಮತ್ತು ವಿದೇಶಿ ಹಕ್ಕಿಗಳನ್ನು ವೀಕ್ಷಿಸಬಹುದು.
ಸಫಾರಿ

ಉತ್ತರಪ್ರದೇಶದ ಧುದ್ವಾದಲ್ಲಿ ಸಾಲ್ ಮರಗಳ ನಿಬಿಡ ಅರಣ್ಯದಲ್ಲಿ ಸಫಾರಿ ಹೋಗಬಹುದು. ಮರಗಳ ನಡುವಿನ ಮೌನ, ಕಾಡಿನ ಜೀವಿಗಳ ಚೀರಾಟ ಮತ್ತು ಘೇಂಡಾ ಮೃಗ, ಕಾಡುಕೋಣಗಳ ನಡುವೆ ಸಫಾರಿ ತೃಪ್ತಿ ನೀಡಲಿದೆ.
ಜಿಪ್ ಲೈನಿಂಗ್

ನೈನಿತಾಲ್‌ನ ಮುಕ್ತೇಶ್ವರದಲ್ಲಿ ಜಿಪ್ ಲೈನಿಂಗ್ ಸಾಹಸ ಕ್ರೀಡೆಯ ಅನುಭವ ಪಡೆಯಲೇಬೇಕು. ಎರಡು ಬೆಟ್ಟಗಳ ನಡುವೆ ಹಗ್ಗದಲ್ಲಿ ನೇತಾಡುತ್ತಾ ಈ ಬದಿಯಿಂದ ಮತ್ತೊಂದು ಬದಿಗೆ ಬರುವ ಅನುಭವ ಅದ್ಭುತ. ಪೈನ್, ದಿಯೋದಾರ್ ಮತ್ತು ಓಕ್ ಮರಗಳ ಮೇಲೆ ನೇತಾಡುತ್ತಾ ಸಾಗುವುದು ವಿಶೇಷ.
ಪ್ರಕೃತಿ

ಡೆಹ್ರಾಡೂನ್‌ನ ಚಕ್ರತಾ ಮಾಲಿನ್ಯಗಳಿಂದ ದೂರವಾಗಿರುವ ಪ್ರಕೃತಿಯ ಮಡಿಲು. ಶಾಂತವಾದ ಪರಿಸರದಲ್ಲಿ ಕೆಲ ದಿನಗಳನ್ನು ಕಳೆಯಲು ಬಯಸಿದರೆ ಚಕ್ರತಾಗೆ ಭೇಟಿ ಕೊಡಿ.
ಮರುಭೂಮಿ ಸಫಾರಿ

ರಾಜಸ್ಥಾನದಲ್ಲಿ ಸಫಾರಿಗೆ ಸಾಕಷ್ಟು ಅವಕಾಶವಿದೆ. ಒಂಟೆ ಸಫಾರಿಯನ್ನು ಮರುಭೂಮಿಯಲ್ಲಿ ನಡೆಸಿ ಮರಳ ದಿಣ್ಣೆಗಳ ಮೇಲೆ ಸೂರ್ಯಾಸ್ತ ನೋಡಬಹುದು. ಮರುಭೂಮಿಯ ಪ್ರಾಣಿಗಳನ್ನು ನೋಡಬೇಕಾದರೆ ರಾತ್ರಿ ಸಫಾರಿಯೂ ಹೋಗಬಹುದು.
ರೋಡ್ ಟ್ರಿಪ್

ಹಿಮಾಚಲ ಪ್ರದೇಶದ ಸ್ಪಿಟಿ ಪ್ರಕೃತಿ ಮತ್ತು ಶಾಂತವಾದ ಗ್ರಾಮಗಳು, ಭೋರ್ಗರೆಯುವ ನದಿಗಳು ಇರುವ ಪ್ರದೇಶ. ಇಲ್ಲಿನ ರಸ್ತೆಗಳಲ್ಲಿ ಸಾಗುವುದೇ ಅತ್ಯುತ್ತಮ ಅನುಭವ. ಕೆಳಗೆ ಕಡಿದಾದ ಕಣಿವೆಗಳಾಗಿದ್ದರೆ, ಮೇಲ್ಗಡೆ ಹೂಗಳು ತುಂಬಿದ ಗುಡ್ಡಗಳು.
ಕ್ಯಾಂಪ್

ಹಿಮಾಚಲ ಪ್ರದೇಶದ ಚಂದ್ರತಾಲದಲ್ಲಿ ಕ್ಯಾಂಪಿನಲ್ಲಿ ತಂಗಿ ಹುಣ್ಣಿಮೆಯ ಸೌಂದರ್ಯವನ್ನು ಅನುಭವಿಸಬಹುದು. ಹಿಮಾಲಯದ ಹಿಮದ ಬೆಟ್ಟಗಳ ಸೌಂದರ್ಯವನ್ನೂ ಸವಿಯಬಹುದು.







