ಮಂಗಳೂರು: ಜೂನ್ 1 ರಿಂದ ಜುಲೈ 31 ರವರೆಗೆ ಯಾಂತ್ರೀಕೃತ ಮೀನುಗಾರಿಕೆಗೆ ನಿಷೇಧ

ಮಂಗಳೂರು, ಮೇ 29: ಪಶ್ಚಿಮ ಕರಾವಳಿಯ ಪ್ರಮುಖ ವಹಿವಾಟು ನಡೆಯುವ ಮತ್ಸೋದ್ಯಮಕ್ಕೆ ಜೂನ್ 1 ರಿಂದ ಕಡ್ಡಾಯ 61 ದಿನಗಳ ರಜೆ ಆರಂಭವಾಗಲಿದೆ. ಜೂನ್ 1 ರಿಂದ ಜುಲೈ 31 ರವರೆಗೆ ಯಾಂತ್ರೀಕೃತ ಮೀನುಗಾರಿಕೆಗೆ ನಿಷೇಧವನ್ನು ವಿಧಿಸಲಾಗಿದೆ. ಇನ್ನು ಈ ಅವಧಿಯಲ್ಲಿ ಮೀನುಗಾರಿಕೆಗೆ ತೆರಳಲು ಸಾಧ್ಯವಾಗದೆ ಇರುವುದರಿಂದ ಯಾಂತ್ರೀಕೃತ ಬೋಟುಗಳು ಮಂಗಳೂರು ಬಂದರಿನಲ್ಲಿ ಲಂಗರು ಹಾಕಲಿವೆ.
ಮುಂಗಾರು ಮಳೆ ಆರಂಭವಾಗುತ್ತಿದ್ದಂತೆ ಪ್ರತಿವರ್ಷವು ಪಶ್ಚಿಮ ಕರಾವಳಿಯಲ್ಲಿ ಯಾಂತ್ರಿಕ ಮೀನುಗಾರಿಕೆ ಸ್ಥಗಿತಗೊಳುತ್ತದೆ. 2015 ರ ಹಿಂದೆ ಜೂನ್ 15 ರಿಂದ ಆಗಷ್ಟ್ 10 ರವರೆಗೆ ಕರ್ನಾಟಕದ ಕರಾವಳಿಯಲ್ಲಿ ಮೀನುಗಾರಿಕೆಗೆ ನಿಷೇಧವಿತ್ತು. ಆದರೆ 2015 ರಿಂದ ಜೂನ್ 1 ರಿಂದ ಜುಲೈ 31 ರವರೆಗೆ ಎಂದು ಯಾಂತ್ರಿಕೃತ ಮೀನುಗಾರಿಕೆಯನ್ನು ನಿಷೇಧಿಸಲಾಗಿದೆ. ಇದು ದೇಶದ ಪಶ್ಚಿಮ ಕರಾವಳಿಗೆ ಏಕರೂಪದಲ್ಲಿ ಕೇಂದ್ರ ಸರಕಾರ ಮಾಡಿರುವ ಆದೇಶವಾಗಿದೆ. ಜೂನ್ 1ರಿಂದಲೆ ಯಾಂತ್ರೀಕೃತ ಮೀನುಗಾರಿಕೆಗೆ ನಿಷೇಧವಿರುವುದರಿಂದ ಮೇ 31ರ ಮಧ್ಯರಾತ್ರಿ 12 ಗಂಟೆಯೊಳಗೆ ಎಲ್ಲ ಮೀನುಗಾರಿಕಾ ಬೋಟ್ ಗಳು ದಡ ಸೇರಬೇಕಾಗಿವೆ.
ಜಿಲ್ಲೆಯಲ್ಲಿ 21 ಮೀನುಗಾರಿಕಾ ಗ್ರಾಮಗಳಿದ್ದು, ಸುಮಾರು 55 ಸಾವಿರ ಮೀನುಗಾರರು ವಾಸವಾಗಿದ್ದಾರೆ. ಈ ಪೈಕಿ 30 ಸಾವಿರ ಮೀನು ಗಾರರು ವೃತ್ತಿನಿರತರಾಗಿದ್ದು, ಸದ್ಯ ಜಿಲ್ಲೆಯಲ್ಲಿ 1011 ಯಾಂತ್ರೀಕೃತ ದೋಣಿಗಳು ಇವೆ. ಇವುಗಳಲ್ಲಿ 65 ಪರ್ಸಿನ್ ಬೋರ್ಟ್‌ಗಳಿವೆ. 1358 ಗಿಲ್‌ನೆಟ್ ಸಾಂಪ್ರದಾಯಿಕ ದೋಣಿಗಳಿವೆ. ಮಳೆಗಾಲದ ಸಮಯದಲ್ಲಿ ಮೀನುಗಳು ಸಂತಾನೋತ್ಪತ್ತಿ ಮಾಡುವ ಅವಧಿಯಾಗಿರುವುದರಿಂದ ಹಿಂದಿನಿಂದಲೂ ಮೀನುಗಾರಿಕೆಯನ್ನು ಈ ಸಂದರ್ಭದಲ್ಲಿ ಮಾಡುವುದಿಲ್ಲ. ಈ ಸಂದರ್ಭದಲ್ಲಿ ನಡೆಯುವ ಮೀನುಗಾರಿಕೆಯಿಂದ ಮೀನುಗಳ ಕ್ಷಾಮಕ್ಕೆ ಕಾರಣವಾಗಬಹುದು. ಈ ಹಿನ್ನೆಲೆಯಲ್ಲಿ ಮೀನುಗಾರರು ಸ್ವಯಂಪ್ರೇರಿತರಾಗಿಯೆ ಮೀನುಗಾರಿಕೆಗೆ ಹಿಂದಿನಿಂದಲೆ ತೆರಳುತ್ತಿಲ್ಲ. ಮತ್ತೊಂದೆಡೆ ಮಳೆಗಾಲದ ಈ ಅವಧಿಯಲ್ಲಿ ಸಮುದ್ರದಲ್ಲಿ ತೂಫಾನ್‌ಗಳು ಕಾಣಿಸಿಕೊಳ್ಳುವುದರಿಂದ ಆಳಸಮುದ್ರದಲ್ಲಿ ಮೀನುಗಾರಿಕೆಗೆ ತೆರಳುವ ಬೋಟುಗಳು ಅಪಾಯಕ್ಕೆ ಸಿಲುಕಿಕೊಳ್ಳುವ ಸಾಧ್ಯತೆಯಿದೆ. ಈ ಕಾರಣದಿಂದ ಮುಂಜಾರುಕತೆಯಾಗಿ ಈ ಅವಧಿಯಲ್ಲಿ ಮೀನುಗಾರಿಕೆ ಸ್ಥಗಿತಗೊಳ್ಳುತ್ತದೆ.
ಇತ್ತೀಚೆಗೆ ಸರಕಾರಗಳು ಇದಕ್ಕೆ ಕಾನೂನು ರೂಪ ನೀಡಿದ್ದು ಕಡ್ಡಾಯವಾಗಿ ಈ ಸಂದರ್ಭದಲ್ಲಿ ಮೀನುಗಾರಿಕೆಯನ್ನು ನಡೆಸುವಂತಿಲ್ಲ. ಆಳಸಮುದ್ರ ಮೀನುಗಾರಿಕೆಗೆ ನಿಷೇಧವಿರುವ ಈ ಸಂದರ್ಭದಲ್ಲಿ ನಾಡದೋಣಿ ಮೀನುಗಾರಿಕೆಗೆ ಅವಕಾಶವಿದೆ. ಶ್ರಮಜೀವಿ ಮೀನುಗಾರರು ಈ ಸಂಧರ್ಭದಲ್ಲಿ ನಾಡದೋಣಿ ಮೀನುಗಾರಿಕೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಸಮುದ್ರ ತೀರದಲ್ಲಿ ನಡೆಯುವ ಈ ಮೀನುಗಾರಿಕೆಯಿಂದ ತಮ್ಮ ಜೀವನವನ್ನು ಸಾಗಿಸುತ್ತಾರೆ. 10 ಅಶ್ವಶಕ್ತಿ ಇಂಜಿನ್ ಬಳಸಿದ ದೋಣಿಗಳಲ್ಲಿ ಸಮುದ್ರ ತೀರದಲ್ಲಿ ಮೀನುಗಾರಿಕೆ ನಡೆಸುತ್ತಾರೆ.
ಜೂನ್ 1 ರಿಂದ ಜುಲೈ 31 ರವರೆಗೆ 61 ದಿನಗಳ ಕಾಲ ಆಳಸಮುದ್ರ ಮೀನುಗಾರಿಕೆಗೆ ನಿಷೇಧವಿದೆ. ಈ ಸಂದರ್ಭದಲ್ಲಿ ನಿಷೇಧ ಉಲ್ಲಂಘಿಸಿ ಮೀನುಗಾರಿಕೆ ನಡೆಸಿದರೆ ಕ್ರಮಕೈಗೊಳ್ಳಲಾಗುವುದು.
-ಕೆ.ಗಣೇಶ್, ಪ್ರಭಾರ ಉಪನಿರ್ದೇಶಕರು, ಮೀನುಗಾರಿಕೆ ಇಲಾಖೆ







