ಪುತ್ತೂರು: ‘ಬಲೆ ಬಲಿಪುಗ’ ಮಿನಿ ಮ್ಯಾರಾಥಾನ್ ಓಟ

ಪುತ್ತೂರು, ಮೇ 29: ‘ದ ಪುತ್ತೂರು ಕ್ಲಬ್ ಇದರ ಆಶ್ರಯದಲ್ಲಿ ನೇತ್ರಾವತಿ ಉಳಿವಿನ ಸದೇಶದೊಂದಿಗೆ ‘ಬಲೆ ಬಲಿಪುಗ’ ಮಿನಿ ಮ್ಯಾರಾಥಾನ್ ಓಟ ಸ್ಪರ್ಧೆಯು ರವಿವಾರ ಪುತ್ತೂರಿನಲ್ಲಿ ನಡೆಯಿತು.
ಕ್ರೀಡಾ ಸಚಿವ ಅಭಯಚಂದ್ರ ಜೈನ್ ಮ್ಯಾರಥಾನ್‌ಗೆ ದರ್ಬೆ ಸಂತ ಫಿಲೋಮಿನಾ ಕಾಲೇಜಿನಲ್ಲಿ ಬೆಳಗ್ಗೆ 7 ಗಂಟೆಗೆ ಚಾಲನೆ ನೀಡಿದರು.
ಸಂತ ಫಿಲೋಮಿನಾ ಕಾಲೇಜ್‌ನಿಂದ ಆರಂಭಗೊಂಡ ಓಟದ ಸ್ಪರ್ಧೆಯು ಬೈಪಾಸ್- ಮಂಜಲ್ಪಡ್ಪು ಬಳಿ ತಿರುಗಿ ಬೊಳುವಾರು- ದರ್ಬೆ ಮೂಲಕ 10 ಕಿ.ಮೀ ಸಾಗಿ ಪುತ್ತೂರು ಕ್ಲಬ್‌ನಲ್ಲಿ ಅಂತ್ಯಗೊಂಡಿತು.
ಪುರುಷರ ವಿಭಾಗದಲ್ಲಿ ಮೂಡುಬಿದರೆ ಆಳ್ವಾಸ್ ಕಾಲೇಜಿನ ದೇವಣ್ಣ ನಾಕ್ ಪ್ರಥಮ, ಉಜಿರೆ ಎಸ್‌ಡಿಎಂನ ಸಂದೀಪ್ ಎನ್. ದ್ವಿತೀಯ, ಆಳ್ವಾಸ್ ಕಾಲೇಜಿನ ಶಿವಾನಂದ ಎನ್.ಎಸ್. ತೃತೀಯ ಬಹುಮಾನ ಪಡೆದುಕೊಂಡರು.
ಮಹಿಳಾ ವಿಭಾಗದಲ್ಲಿ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳಾದ ಸೌಮ್ಯ ಕೆ ಪ್ರಥಮ, ಪ್ರಿಯಾಂಕಾ ಎಚ್.ಬಿ. ದ್ವಿತೀಯ, ಶ್ರದ್ಧಾ ತೃತೀಯ ಬಹುಮಾನ ಪಡೆದರು.
5 ಕಿ.ಮೀ. ಓಟ ಸಂತ ಫಿಲೋಮಿನಾದಿಂದ ಆರಂಭವಾಗಿ ಬೈಪಾಸ್- ಎಸಿ ಕ್ವಾರ್ಟ್ವಸ್- ದರ್ಬೆ- ಪುತ್ತೂರು ಕ್ಲಬ್‌ನಲ್ಲಿ ಅಂತ್ಯಗೊಂಡಿತು.
ಪುರುಷರ ವಿಭಾಗದಲ್ಲಿ ಆಳ್ವಾಸ್ ಕಾಲೇಜಿನ ಅನಿಲ್ ಕುಮಾರ್ ಪ್ರಥಮ, ಪ್ರಶಾಂತ್ ಕುಮಾರ್ ಎಂ.ಎಚ್. ದ್ವಿತೀಯ, ಶಿವಾನಂದ ತೃತೀಯ ಬಹುಮಾನ ಪಡೆದರು. ಮಹಿಳಾ ವಿಭಾಗದಲ್ಲಿ ಆಳ್ವಾಸ್ ಕಾಲೇಜಿನ ಹರ್ಷಿತಾ ಕೆ. ಪ್ರಥಮ, ದೀಕ್ಷಿತಾ ಬಿ. ದ್ವಿತೀಯ, ಶಾಲಿನಿ ಕೆ.ಎಸ್. ತೃತೀಯ ಬಹುಮಾನ ಪಡೆದರು.
1 ಕಿಲೋ ಮೀಟರ್ ಮ್ಯಾರಥಾನ್ ಸಂತ ಫಿಲೋಮಿನಾದಿಂದ ಆರಂಭವಾಗಿ ದರ್ಬೆ ವೃತ್ತದಿಂದ ಸ್ವಲ್ಪ ಮುಂದಕ್ಕೆ ಅಂತ್ಯಗೊಂಡಿತು. 10 ವರ್ಷದ ಒಳಗಿನ ಮಕ್ಕಳ ವಿಭಾಗದಲ್ಲಿ ಮುಹಮ್ಮದ್ ಫೈರೋಝ್ ಪ್ರಥಮ, ಹೃದಯ್ ಆರ್.ಕೆ. ದ್ವಿತೀಯ, ಅರ್ಘ್ಯನ್ ನಾಕ್ ಕೆ ತೃತೀಯ ಬಹುಮಾನ ಪಡೆದರು. 60 ವರ್ಷ ಮೇಲಿನವರ ವಿಭಾಗದಲ್ಲಿ ದರ್ಬೆಯ ಎ.ಜೆ.ರೈ ಪ್ರಥಮ, ಮಂಗಳೂರಿನ ಭಾಸ್ಕರ ಕೆ. ದ್ವಿತೀಯ, ಪುತ್ತೂರಿನ ಎನ್.ಕೆ.ಭಟ್ ತೃತೀಯ ಬಹುಮಾನ ಪಡೆದರು.
ಸಮಾರೋಪ:
ದ ಪುತ್ತೂರು ಕ್ಲಬ್‌ನಲ್ಲಿ ನಡೆದ ಸಮಾರೋಪದಲ್ಲಿ ಕ್ರೀಡಾ ಸಚಿವ ಅಭಯಚಂದ್ರ ಜೈನ್ ಮಾತನಾಡಿ ಮ್ಯಾರಥಾನ್ ಆಯೋಜಿಸಿರುವುದು ಉತ್ತಮ ಕಾರ್ಯ. ಮೊದಲು ಕ್ರೀಡಾ ಕ್ಷೇತ್ರದಲ್ಲಿ ಸಂತ ಫಿಲೋಮಿನಾ ಕಾಲೇಜಿನ ಹೆಸರು ಕೇಳಿಬರುತ್ತಿತ್ತು. ಇದೀಗ ಪುತ್ತೂರಿನ ಹೆಸರು ಮತ್ತೆ ಕೇಳಿ ಬರುವಂತಾಗಿದೆ ಎಂದರು.
ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿ ಇಂತಹ ಕಾರ್ಯಕ್ರಮ ಆಯೋಜಿಸಿರುವುದು ಬೆಳವಣಿಗೆ ಲಕ್ಷಣ. ರಾಜ್ಯ ಮಟ್ಟದಲ್ಲಿ ದಾಖಲಾಗುವ ಕಾರ್ಯಕ್ರಮವಾಗಿ ಮೂಡಿಬರಲಿ ಎಂದು ಹಾರೈಸಿದರು.
ಕರ್ನಾಟಕ ಅಥ್ಲೆಟಿಕ್ ಅಸೋಸಿಯೇಶನ್ ಕಾರ್ಯದರ್ಶಿ ಚಂದ್ರಶೇಖರ್ ರೈ ಮಾತನಾಡಿ ಕರಾವಳಿಯಲ್ಲಿ ಶಿಕ್ಷಣಕ್ಕೆ ಸಿಗುವ ಮಹತ್ವ ಕ್ರೀಡೆಗೆ ಸಿಗುತ್ತಿಲ್ಲ. ಆದ್ದರಿಂದ ಫಿಟ್ನೆಸ್ ಕಡಿಮೆಯಾಗುತ್ತಿದೆ. ಸದ್ಯ ಜಾಗೃತಿ ಮೂಡುತ್ತಿದೆ. ಮುಂದೆ ಮ್ಯಾರಥಾನ್ ಹಮ್ಮಿಕೊಳ್ಳುವಾಗ ಮೂರು ತಿಂಗಳ ಮೊದಲು ಆಯೋಜಿಸಬೇಕು. ಉಭಯ ಜಿಲ್ಲೆಗಳಿಗೂ ಆಹ್ವಾನ ನೀಡಬೇಕು ಎಂದರು.
ದ ಪುತ್ತೂರು ಕ್ಲಬ್‌ನ ಅಧ್ಯಕ್ಷ ಡಾ.ದೀಪಕ್ ರೈ ಸ್ವಾಗತಿಸಿ, ವಂದಿಸಿದರು.







