ಹಾಡಹಗಲೇ ಗ್ರಾಮ ಪ್ರಧಾನನ ಹತ್ಯೆ!

ಕಾನ್ಪುರ. ಮೇ 29: ಚುನಾವಣಾ ದ್ವೇಷದ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತ್ ಪ್ರಧಾನರೊಬ್ಬರನ್ನು ಹಾಡಹಗಲೇ ಗುಂಡು ಹಾರಿಸಿ ಕೊಂದು ಹಾಕಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದ ಚೌಬೆಪುರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪೊಲೀಸ್ ಮೂಲಗಳ ಪ್ರಕಾರ ಹೋರಿಕಾ ಪುರ್ ಗ್ರಾಮಪ್ರಧಾನ ಅನೂಪ್ ಕುಮಾರ್ ತರಕಾರಿ ಖರೀದಿಸಲು ಮಾರ್ಕೆಟ್‌ಗೆ ಬಂದಿದ್ದಾಗ ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ. ಗುಂಡೇಟಿಗೀಡಾದ ಅನೂಪ್ ಕುಮಾರ್ ಸ್ಥಳದಲ್ಲೇ ಕುಸಿದು ಬಿದ್ದು ಮೃತರಾಗಿದ್ದಾರೆ.
ಗುಂಡು ಹಾರಾಟದ ಸದ್ದು ಕೇಳಿಸಿದಾಗ ಸ್ಥಳದಲ್ಲಿದ್ದವರು ಅತ್ತ ಧಾವಿಸಿ ಬಂದಿದ್ದು ಪೊಲೀಸರಿಗೆ ಫೋನ್ ಮಾಡಿದ್ದಾರೆ. ಕೂಡಲೇ ಧಾವಿಸಿ ಬಂದ ಪೊಲೀಸರು ಪ್ರಧಾನರನ್ನು ಸ್ಥಳೀಯ ಸಮುದಾಯ ಚಿಕಿತ್ಸಾ ಕೇಂದ್ರಕ್ಕೆ ತಲುಪಿಸಿದ್ದರು. ಅಲ್ಲಿ ಪ್ರಧಾನರನ್ನು ಮೃತರಾಗಿದ್ದಾರೆಂದು ವೈದ್ಯರು ಘೋಷಿಸಿದರು. ಅನೂಪ್ ಕುಮಾರ್ ದಲಿತ ವ್ಯಕ್ತಿಯಾಗಿದ್ದು, ದಲಿತ ಪ್ರಧಾನ್‌ನ ಕೊಲೆಯಿಂದ ಆಕ್ರೋಶಿತರಾದ ಗ್ರಾಮಸ್ಥರುಪೊಲೀಸರ ವಿರುದ್ಧ ಘೋಷಣೆ ಕೂಗಿ ಪ್ರತಿಭಟಿಸಿದ್ದಾರೆ. ಪರಿಸ್ಥಿತಿ ಉದ್ವಿಗ್ನಗೊಳ್ಳುವುದನ್ನು ಕಂಡು ಹೆಚ್ಚುವರಿ ಪೊಲೀಸ್ ಪಡೆಗಳನ್ನು ಸ್ಥಳಕ್ಕೆ ಕರೆಯಿಸಿ ಗಸ್ತು ಏರ್ಪಡಿಸಲಾಗಿದೆ. ಕೊಲೆಗಡುಕರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.





