ಬಜರಂಗದಳದ ಶಿಬಿರಗಳಿಂದ ಯುವಕರ ಚಾರಿತ್ರ್ಯ ನಿರ್ಮಾಣ: ಪ್ರವೀಣ್ ತೊಗಾಡಿಯಾ
ನೋಯಿಡ, ಮೇ 29: ವಿವಾದಾಸ್ಪದವಾದ ಬಜರಂಗದಳದ ಶಸ್ತ್ರಾಸ್ತ್ರ ತರಬೇತಿ ಶಿಬಿರದ ಕುರಿತು ಈ ಕ್ಯಾಂಪ್ ಒಂದೆರೆಡು ದಿನಗಳಿಂದ ನಡೆಯುತ್ತಿರುವುದಲ್ಲ. ಬದಲಾಗಿ ಕಳೆದ 25ವರ್ಷಗಳಿಂದ ನಡೆಯುತ್ತಿದೆ ಎಂದು ವಿಶ್ವಹಿಂದೂ ಪರಿಷತ್‌ನ ಅಂತಾರಾಷ್ಟ್ರೀಯ ಕಾರ್ಯಕಾರಿ ಸಮಿತಿ ಅಧ್ಯಕ್ಷ ಪ್ರವೀಣ್ ತೊಗಾಡಿಯಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ಹೇಳಿದ್ದಾರೆ. ಭಾರತದ ನೂರಿಪ್ಪತ್ತೈದು ಕೋಟಿ ಜನರಲ್ಲಿ ನಲ್ವತ್ತು ಕೋಟಿಗೂ ಹೆಚ್ಚು ಜನರು ರೋಗಿಷ್ಠರು. ಆದ್ದರಿಂದ ಯುವಕರನ್ನು ಶಾರೀರಿಕವಾಗಿ ಬಲಿಷ್ಠಗೊಳಿಸುವುದು ಇಂದಿನ ಅಗತ್ಯವಾಗಿದೆ. ಪ್ರಾಣಾಯಾಮ,ಯೋಗ ಮತ್ತು ದಿನನಿತ್ಯದ ವ್ಯಾಯಾಮದಿಂದ ರೋಗಗಳಿಂದ ದೂರವಿರಬಹುದಾಗಿದೆ. ತರಬೇತಿಯಿಂದಾಗಿ ಯುವಕರಲ್ಲಿ ರೋಗಗಳ ವಿರುದ್ಧ ಹೋರಾಡುವ ಶಕ್ತಿ ಉತ್ಪತ್ತಿಯಾಗಲಿದೆ. ಮತ್ತೆ ಅವರೆಂದೂ ರೋಗಿಗಳಾಗಲಾರರು. ನಾವಿಲ್ಲಿ ಯುವಕರ ಚಾರಿತ್ರ್ಯ ನಿರ್ಮಾಣ ಮಾಡುತ್ತಿದ್ದೇವೆ ಎಂದು ತೊಗಾಡಿಯಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಎಲ್ಲವೂ ಕಾನೂನು ಪ್ರಕಾರವೇ ತರಬೇತಿ
ಇಂತಹ ಕಾರ್ಯಕ್ರಮಗಳಲ್ಲಿ ಯಾವುದೇ ರೀತಿಯ ಕಾನೂನು ಉಲ್ಲಂಘಿಸುವುದಿಲ್ಲ. ಎಲ್ಲವೂ ಕಾನೂನಿನ ಪ್ರಕಾರವೇ ನಡೆಯುತ್ತದೆ. ಈ ಮೂಲಕ ಯುವಕರನ್ನು ದೇಶಕ್ಕಾಗಿ ರೂಪಿಸಲಾಗುತ್ತದೆ. ಕಾನೂನು ಉಲ್ಲಂಘಿಸುವುದು ಹಾಗೂ ಕಾನೂನಿನ ವಿರುದ್ಧ ಎಂಬ ಮಾತುಗಳು ಇದರಲ್ಲಿಲ್ಲ ಎಂದು ತೊಗಾಡಿಯಾ ಹೇಳಿದ್ದಾರೆ.
ತಲವಾರು ಪ್ರಯೋಗ ಆತ್ಮರಕ್ಷಣೆಯ ತಂತ್ರ
ಶಿಬಿರದಲ್ಲಿ ತಲವಾರು ಪ್ರಯೋಗ ಮತ್ತು ಬಂದೂಕು ಚಲಾವಣೆಯನ್ನು ಕಲಿಸಲಾಗುತ್ತಿಲ್ಲ. ತಾನು ಈವರೆಗೂ ಇಲ್ಲಿ ತಲವಾರು ಪ್ರಯೋಗವನ್ನು ನೋಡಿಲ್ಲ.ಇಲ್ಲಿ ಸ್ವರಕ್ಷಣೆಯ ತಂತ್ರಗಳನ್ನು ಕಲಿಸಲಾಗುತ್ತದೆ. ಅದು ರಾಷ್ಟ್ರಕ್ಕೆ ಉಪಯುಕ್ತವಾಗಲಿದೆ ಎಂದು ತೊಗಾಡಿಯಾ ತಿಳಿಸಿದ್ದಾರೆ. ಮಾಧ್ಯಮಗಳಿಗೆ ಪ್ರವೇಶವಿಲ್ಲ":
ಕಾರ್ಯಕ್ರಮದ ಬಗ್ಗೆ ವಿವಾದ ಎದ್ದಿರುವುದರಿಂದ ಮಾಧ್ಯಮಗಳಿಗೆ ಪ್ರವೇಶ ನಿರಾಕರಿಸಲಾಗಿದೆ, ಅಲ್ಲಿದ್ದ ಜನರ ಮೊಬೈಲ್ ಫೋನ್ ಬಂದ್ ಮಾಡಿಸಲಾಗಿತ್ತು. ಪ್ರವೀಣ್ ತೊಗಾಡಿಯಾ ಭಾಷಣದ ಬಳಿಕ ಶಿಬಿರದ ಸಮಾರೊಪಗೊಂಡಿದೆ. ಇಲ್ಲಿ ಪಾಸಾದ ಯುವಕರಿಗೆ ಸರ್ಟಿಫಿಕೇಟ್ ವಿತರಿಸಲಾಗಿದ್ದು ಸಮಾರಂಭದಲ್ಲಿ ಪ್ರವೀಣ್ ತೊಗಾಡಿಯಾರಲ್ಲದೆ, ಕಾರ್ಯಕ್ರಮದ ಅಧ್ಯಕ್ಷ ಸುಶೀಲ್ ರಾಜಪೂತ್, ಹಿರಿಯ ಅತಿಥಿ ಶ್ರವಣ್ ಕುಮಾರ್, ತರಗತಿ ಪ್ರಮುಖ್ ಸಹಪ್ರಾಂತ ಸಂಯೋಜಕ ಭರತ್ ಸಿಂಗ್, ಬಜರಂಗದಳದ ಮೀರತ್ ಪ್ರಾಂತ ಸಂಯೋಜಕ್ ಬಲರಾಜ್ ಡುಂಗರ್ ಉಪಸ್ಥಿತರಿದ್ದರು ಎಂದು ವರದಿಯಾಗಿದೆ.