ಸಕಲೇಶಪುರ: ಎಸ್ಕೆಎಸ್ಸೆಸ್ಸೆಫ್ ವತಿಯಿಂದ ಸಾಮೂಹಿಕ ವಿವಾಹ

ಸಕಲೇಶಪುರ, ಮೇ 29: ಪಟ್ಟಣದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮೈದಾನದಲ್ಲಿ ಅಲ್-ಮಿಸ್ಬಾಹ್ ಫೌಂಡೇಷನ್ ಮತ್ತು ಎಸ್ಕೆಎಸ್ಸೆಸ್ಸೆಫ್ ಸಹಯೋಗದಲ್ಲಿ ರವಿವಾರ ಬಡ ಕುಟುಂಬಕ್ಕೆ ಸೇರಿದ ಐದು ಜೋಡಿಗಳಿಗೆ ಸರಳ ಸಾಮೂಹಿಕ ವಿವಾಹ ನೆರವೇರಿಸಲಾಯಿತು.
ಸಂಘಟನೆ ವತಿಯಿಂದ ವಧುವಿಗೆ 40 ಗ್ರಾಂ ಚಿನ್ನ, 25 ಸಾವಿರ ರೂ.ನಗದು ಹಾಗೂ ವರನಿಗೆ 10,000 ರೂ.ನಗದು ನೀಡಲಾಯಿತು. ವರದಕ್ಷಿಣೆ ಬೇಗೆಯಿಂದ ಬಳಲಿ ಮದುವೆಯಾಗದೆ ಉಳಿದ ಐದು ಹೆಣ್ಣು ಮಕ್ಕಳಿಗೆ ಈ ಕಾರ್ಯಕ್ರಮದ ಮೂಲಕ ಕಂಕಣ ಭಾಗ್ಯ ಲಭಿಸಿತು.
ಈ ಸಂದರ್ಭ ಮುಖ್ಯ ಭಾಷಣಗೈದ ಸಮಸ್ತ ಕನಾಟಕ ಸುನ್ನಿ ಸ್ಟುಡೆಂಟ್ ಫೆಡರೇಷನ್‌ನ ರಾಜ್ಯಾಧ್ಯಕ್ಷ ಅನೀಸ್ ಕೌಸರಿ, ಮದುವೆಗಳು ಸರಳವಾಗಿರಬೇಕೆ ಹೊರತು ಆಡಂಬರ, ಅನಾಚಾರಗಳಿಂದ ಕೂಡಿದ ನಾಟಕವಾಗಬಾರದು. ಹೊಸ ಕುಟುಂಬ ನಿರ್ಮಾಣದ ಆರಂಭಿಕ ಆಚರಣೆಯಾದ ವಿವಾಹ ಪವಿತ್ರ ಕಾರ್ಯವಾಗಿದ್ದು ಇದರಲ್ಲಿ ಕಲಬೆರಕೆ ಮಾಡಬಾರದು. ಕ್ಯಾಮರಾಮ್ಯಾನ್‌ನ ನಿರ್ದೇಶನದಂತೆ ನಡೆಯುವ ನಾಟಕೀಯ ಮದುವೆಗೆ ಅಂತ್ಯ ಹಾಡಬೇಕಾದರೆ ಸರಳ ಸಾಮೂಹಿಕ ವಿವಾಹಗಳು ಹೆಚ್ಚಾಗಬೇಕು ಎಂದರು.
ಧರ್ಮಗುರು ಇಬ್ರಾಹೀಂ ಮುಸ್ಲಿಯಾರ್ ಮಾತನಾಡಿ, ಸಂಪ್ರದಾಯ, ಧರ್ಮದ ಚೌಕಟ್ಟು ಮೀರಿ ಪ್ರೇಮ ವಿವಾಹವಾಗುವ ಪ್ರಕರಣಗಳು ಹೆಚ್ಚಾಗಿರಲು ಬಡತನ ಮೂಲ ಕಾರಣವಾಗಿದೆ. ಕೆಲ ಮುಗ್ದ ಹೆಣ್ಣು ಮಕ್ಕಳು ವರದಕ್ಷಿಣೆ ಸಂಸ್ಕೃತಿಗೆ ತಮ್ಮ ಪೋಷಕರನ್ನು ತಳ್ಳಲು ಬಯಸದೆ ತಾವು ಸಮಾಜಕ್ಕೆ ಭಾರ ಎಂಬ ತೀರ್ಮಾನಕ್ಕೆ ಬಂದು ಆತ್ಮಹತ್ಯೆ ಮಾಡಿಕೊಂಡಿರುವ ಉದಾಹರಣೆಗಳೂ ಇವೆ. ಇದನ್ನೆಲ್ಲಾ ತಡೆಗಟ್ಟಬೇಕಾದರೆ ಬಡವರ ಮನೆಯ ಹೆಣ್ಣು ಮಕ್ಕಳಿಗೆ ಸರಳವಾಗಿ ಮದುವೆ ಮಾಡಿಸಿ ಹೊಸ ಜೀವನ ಕಟ್ಟಿಕೊಡಲು ನೆರವಾಗುವ ಕಾರ್ಯಕ್ರಮಗಳನ್ನು ಹೆಚ್ಚಾಗಿ ನಡೆಸಬೇಕು ಎಂದರು.
ಶಾಸಕ ಎಚ್.ಕೆ.ಕುಮಾರಸ್ವಾಮಿ ಮಾತನಾಡಿ, ಸರಳ ವಿವಾಹದ ಮಹತ್ವದ ಬಗ್ಗೆ ಗ್ರಾಮೀಣ ಹಂತದಿಂದಲೂ ಅರಿವು ಮೂಡಿಸಿ ಜನರನ್ನು ಜಾಗೃತಗೊಳಿಸುವ ಮೂಲಕ ವರದಕ್ಷಿಣೆ ಎಂಬ ಮಹಾ ಮಾರಿಯನ್ನು ಹೊಡೆದೋಡಿಸುವ ಕೆಲಸವಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್, ಶಾಫಿ ಅಹ್ಮದ್ ಮುಸ್ಲಿಯಾರ್, ಮೂಡಿಗೆರೆ ತಾಲೂಕು ಸಂಯುಕ್ತ ಶಾಫಿ ಎಂ.ಎ.ಖಾಸೀಂ ಮುಸ್ಲಿಯಾರ್, ಸರಳ ಸಾಮೂಹಿಕ ವಿವಾಹ ಸಮಿತಿ ಅಧ್ಯಕ್ಷ ಕೊಲ್ಲಹಳ್ಳಿ ಸಲೀಂ ಅಬ್ದುಲ್ಲಾ, ಗೌರವಾಧ್ಯಕ್ಷ ಕೆ.ಎ.ಅಬ್ಬಾಸ್, ಸುಂಡೇಕೆರೆ ಜುಮ್ಮಾ ಮಸೀದಿಯ ಅಬ್ಬಾಸ್, ಅಲ್-ಮಿಸ್ಬಾಹ್ ಫೌಂಡೇಷನ್ ಅಧ್ಯಕ್ಷ ಹಬೀಬ್, ಆನೆಮಹಾಲ್ ಜುಮ್ಮಾ ಮಸೀದಿ ಅಧ್ಯಕ್ಷ ಅಬ್ದುರ್ರಶೀದ್, ಗುಳಗಳಲೆ ಮಸೀದಿ ಅಧ್ಯಕ್ಷ ಅಬ್ಬು ಮೊದಲಾದವರಿದ್ದರು.







