ಜೂನ್ 4ರಿಂದ ಪ್ರಧಾನಿ ಮೋದಿ ಪಂಚರಾಷ್ಟ್ರ ಪ್ರವಾಸ ಆರಂಭ

ಹೊಸದಿಲ್ಲಿ,ಮೇ 29: ಪ್ರಧಾನಿ ನರೇಂದ್ರ ಮೋದಿಯವರು ಅಫಘಾನಿಸ್ತಾನ್, ಕತಾರ್,ಸ್ವಿಟ್ಜರ್‌ಲ್ಯಾಂಡ್,ಅಮೆರಿಕ ಮತ್ತು ಮೆಕ್ಸಿಕೋ ಸೇರಿದಂತೆ ಐದು ರಾಷ್ಟ್ರಗಳ ತನ್ನ ಪ್ರವಾಸವನ್ನು ಜೂ.4ರಿಂದ ಆರಂಭಿಸಲಿದ್ದಾರೆ.
ಅಫಘಾನಿಸ್ತಾನಕ್ಕೆ ಮೊದಲು ತೆರಳಲಿರುವ ಮೋದಿ ಭಾರತದ ಆರ್ಥಿಕ ನೆರವಿನೊಂದಿಗೆ ಸುಮಾರು 1,400 ಕೋ.ರೂ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಸಲ್ಮಾ ಅಣೆಕಟ್ಟನ್ನು ಉದ್ಘಾಟಿಸಲಿದ್ದಾರೆ. ಬಳಿಕ ಕತಾರ್‌ಗೆ ಎರಡು ದಿನಗಳ ಭೇಟಿ ನೀಡಲಿರುವ ಅವರು,ಹಲವಾರು ದ್ವಿಪಕ್ಷೀಯ ವಿಷಯಗಳ ಕುರಿತು ಅಲ್ಲಿಯ ಎಮಿರ್ ಶೇಖ್ ತಮೀಂ ಬಿನ್ ಹಮಾದ್ ಅಲ್-ಥಾನಿ ಅವರೊಂದಿಗೆ ಮಾತುಕತೆಗಳನ್ನು ನಡೆಸಲಿದ್ದಾರೆ.
ಬಳಿಕ ಸ್ವಿಟ್ಜರ್‌ಲ್ಯಾಂಡ್‌ಗೆ ತೆರಳಲಿರುವ ಪ್ರಧಾನಿ ಅಧ್ಯಕ್ಷ ಜೋಹಾನನ್ ಷ್ನೀಡರ್-ಅಮ್ಮಾನ್ ಸೇರಿದಂತೆ ಆ ರಾಷ್ಟ್ರದ ಉನ್ನತ ನಾಯಕರೊಡನೆ ಮಾತುಕತೆ ನಡೆಸಲಿದ್ದಾರೆ. ಸ್ವಿಸ್ ಬ್ಯಾಂಕುಗಳಲ್ಲಿ ಭಾರತೀಯರು ಹೊಂದಿರುವ ಕಪ್ಪುಹಣವನ್ನು ಪತ್ತೆ ಹಚ್ಚಲು ಸಹಕರಿಸುವಂತೆ ಅವರು ಕೋರುವ ಸಾಧ್ಯತೆಯಿದೆ.
ತೆರಿಗೆ ಸಂಬಂಧಿತ ವಿಷಯಗಳಲ್ಲಿ ಸ್ವಯಂಚಾಲಿತ ಮಾಹಿತಿ ವಿನಿಮಯಕ್ಕೆ ಅವಕಾಶ ಕಲ್ಪಿಸುವ ವ್ಯವಸ್ಥೆಯೊಂದನ್ನು ಅಂತಿಮಗೊಳಿಸುವಲ್ಲಿ ಉಭಯ ರಾಷ್ಟ್ರಗಳ ಅಧಿಕಾರಿಗಳು ತೊಡಗಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಧ್ಯಕ್ಷ ಬರಾಕ್ ಒಬಾಮಾರ ಆಹ್ವಾನದ ಮೇರೆಗೆ ಜೂ.7ರಂದು ಅಮೆರಿಕವನ್ನು ತಲುಪಲಿರುವ ಮೋದಿಯವರು ಅವರೊಂದಿಗೆ ರಕ್ಷಣೆ,ಭದ್ರತೆ ಮತು ಶಕ್ತಿಯಂತಹ ಪ್ರಮುಖ ಕ್ಷೇತ್ರಗಳಲ್ಲಿ ಆಗಿರುವ ಪ್ರಗತಿಯನ್ನು ಪುನರ್‌ಪರಿಶೀಲಿಸಲಿದ್ದಾರೆ. ತನ್ನ ವಾಸ್ತವ್ಯದ ಅವಧಿಯಲ್ಲಿ ಅಮೆರಿಕ ಕಾಂಗ್ರೆಸ್‌ನ ಜಂಟಿ ಸಮಾವೇಶವನ್ನುದ್ದೇಶಿಸಿ ಮೋದಿ ಮಾತನಾಡಲಿದ್ದಾರೆ.
ಅಮೆರಿಕದಿಂದ ಮರಳುವ ಮಾರ್ಗದಲ್ಲಿ ಅವರು ಮೆಕ್ಸಿಕೋಕ್ಕೆ ಭೇಟಿ ನೀಡಲಿದ್ದಾರೆ. ಈ ರಾಷ್ಟ್ರದೊಂದಿಗೆ ವ್ಯಾಪಾರ ಮತ್ತು ಹೂಡಿಕೆ ಸಹಭಾಗಿತ್ವದಲ್ಲಿ ಭಾರತವು ಆಸಕ್ತಿ ಹೊಂದಿದೆ. ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ನ್ಯೂಯಾಕ್‌ಗೆ ತನ್ನ ವಿಶ್ವಸಂಸ್ಥೆ ಭೇಟಿ ಸಂದರ್ಭದಲ್ಲಿ ಮೆಕ್ಸಿಕೋ ಅಧ್ಯಕ್ಷ ಎನ್ರಿಕ್ ಪೆನಾ ನೀಟೊ ಅವರೊಂದಿಗೆ ಮೋದಿ ಮಾತುಕತೆಗಳನ್ನು ನಡೆಸಿದ್ದರು.







