ತಮ್ಮ ಯೋಗಕ್ಷೇಮದ ಬಗ್ಗೆ ಭಾರತೀಯ ಉದ್ಯೋಗಿಗಳು ವಿಶ್ವದಲ್ಲೇ ಹೆಚ್ಚು ಸಂತೃಪ್ತರು

ಮುಂಬೈ,ಮೇ 29: ವಿಶ್ವದ ಇತರೆಡೆಗಳ ಉದ್ಯೋಗಿಗಳಿಗೆ ಹೋಲಿಸಿದರೆ ಭಾರತೀಯ ಉದ್ಯೋಗಿಗಳು ತಮ್ಮ ಯೋಗಕ್ಷೇಮದ ಬಗ್ಗೆ ಅತ್ಯಂತ ಹೆಚ್ಚು ಧನಾತ್ಮಕವಾಗಿದ್ದಾರೆ ಎಂದು ಉದ್ಯೋಗಿಗಳ ಯೋಗಕ್ಷೇಮ ಕುರಿತು 11ನೇ ಎಡೆನ್ರೆಡ್-ಇಪ್ಸೋಸ್ ಬ್ಯಾರೋಮಿಟರ್ ಕೈಗೊಂಡ ಸಮೀಕ್ಷೆಯು ತಿಳಿಸಿದೆ.
ಪ್ರತಿ 10 ಭಾರತೀಯ ಉದ್ಯೋಗಿಗಳ ಪೈಕಿ ಹೆಚ್ಚುಕಡಿಮೆ 9 ಜನರು(ಶೇ.88) ತಮ್ಮ ಯೋಗಕ್ಷೇಮದ ಬಗ್ಗೆ ಸಂತೃಪ್ತ ಭಾವನೆಯನ್ನು ಹೊಂದಿದ್ದಾರೆ ಎಂದಿರುವ ಸಮೀಕ್ಷಾ ವರದಿಯು, ನೌಕರರ ಕೆಲಸದಲ್ಲಿ ನೆಮ್ಮದಿಗೆ ಸಂಬಂಧಿಸಿದ ಎಲ್ಲ ವಿಷಯಗಳಲ್ಲಿ ಭಾರತ,ಮೆಕ್ಸಿಕೋ,ಬ್ರಾಜಿಲ್ ಮತ್ತು ಚಿಲಿ ಅತ್ಯಂತ ಹೆಚ್ಚಿನ ಅಂಕಗಳನ್ನು ಗಳಿಸಿವೆ ಎಂದಿದೆ.
ಭಾರತ,ಚೀನಾ,ಮೆಕ್ಸಿಕೋ,ಅಮೆರಿಕ,ಜರ್ಮನಿ,ಇಟಲಿ ಮತ್ತು ಸ್ಪೇನ್ ಯುವಜನರ ವೈವಿಧ್ಯತೆ ಮತ್ತು ಸಮನ್ವಯದತ್ತ ಕಡಿಮೆ ಗಮನವನ್ನು ನೀಡುತ್ತಿವೆಯಾದರೂ ಕೌಶಲಾಭಿವೃದ್ಧಿ ಮತ್ತು ಹಿರಿಯರ ನಿರ್ವಹಣೆಗೆ ಸಂಬಂಧಿಸಿದಂತೆ ಸಕ್ರಿಯ ನೀತಿಗಳನ್ನೂ ಹೊಂದಿವೆ ಎಂದು ಸಮೀಕ್ಷೆಯು ಬೆಟ್ಟು ಮಾಡಿದೆ.
2016,ಜನವರಿಯಲ್ಲಿ ನಡೆಸಲಾದ ಸಮೀಕ್ಷೆಯಲ್ಲಿ ಬೆಲ್ಜಿಯಂ, ಫ್ರಾನ್ಸ್, ಜರ್ಮನಿ, ಇಟಲಿ, ಪೋಲಂಡ್, ಸ್ಪೇನ್, ಟರ್ಕಿ, ಬ್ರಿಟನ್ ಮತ್ತು ಮೊದಲ ಬಾರಿಗೆ ಈ ವರ್ಷ ಬ್ರಾಜಿಲ್, ಚಿಲಿ, ಚೀನಾ, ಭಾರತ, ಜಪಾನ್, ಮೆಕ್ಸಿಕೋ ಮತ್ತು ಅಮೆರಿಕಗಳ 14,400 ಉದ್ಯೋಗಿಗಳು ಭಾಗಿಯಾಗಿದ್ದರು.







