ಬ್ಲ್ಯಾಕ್‌ಮೇಲ್: ಬಜರಂಗದಳದ ಐವರು ಕಾರ್ಯಕರ್ತರಿಗೆ ನ್ಯಾಯಾಂಗ ಬಂಧನ

ಮೂಡುಬಿದಿರೆ, ಮೇ 29: ಇಲ್ಲಿಗೆ ಸಮೀಪದ ಪುತ್ತಿಗೆ ಗುಡ್ಡೆಯಂಗಡಿಯ ಪುರೋಹಿತ ರಾಘವೇಂದ್ರ ಪೂಜಾರಿ ಎಂಬವರಿಗೆ 2 ಲಕ್ಷ ರೂ.ಗಾಗಿ ಬ್ಲ್ಯಾಕ್ ಮೇಲ್ ಮಾಡಿ ಜೀವ ಬೆದರಿಕೆಯೊಡ್ಡಿ ಪೊಲೀಸರಿಗೆ ರೆಡ್‌ಹ್ಯಾಂಡಾಗಿ ಸಿಕ್ಕಿಬಿದ್ದ ಬಜರಂಗದಳದ ಐವರು ಕಾರ್ಯಕರ್ತರಿಗೆ ಮೂಡುಬಿದಿರೆ ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದೆ.
ಮೂಡುಬಿದಿರೆ ಬಜರಂಗದಳದ ಸಹಸಂಚಾಲಕ ಸಂತೋಷ್ ಪೂಜಾರಿ, ಮಂಗಳೂರಿನ ವಿಶ್ವನಾಥ್ ಮತ್ತು ರೋಹಿತ್ ಕುಮಾರ್, ಬೆಳ್ತಂಗಡಿ ಶಿಶಿಲದ ರೋಹಿತ್ ಹಾಗೂ ಬಂಟ್ವಾಳದ ಗುರುರಾಜ ಬಂಧಿತ ಆರೋಪಿಗಳು.
ಆರೋಪಿಗಳು ಪುರೋಹಿತ ವೃತ್ತಿಯ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ರಾಘವೇಂದ್ರ ಅವರ ಮೊಬೈಲ್‌ಗೆ ಕರೆ ಮಾಡಿ ರೂ 2 ಲಕ್ಷ ರೂ. ನೀಡುವಂತೆ ಬೆದರಿಕೆ ಹಾಕಿದ್ದರೆನ್ನಲಾಗಿದೆ. ಇದಕ್ಕೆ ಹೆದರಿದ ರಾಘವೇಂದ್ರ ಹಣಕೊಡಲು ಒಪ್ಪಿಕೊಂಡು ಆರೋಪಿಗಳನ್ನು ತನ್ನ ಮನೆಗೆ ಬರುವಂತೆ ತಿಳಿಸಿದ್ದರೆನ್ನಲಾಗಿದೆ. ಶನಿವಾರ ಸಂಜೆ ಆರೋಪಿಗಳು ರಿಟ್ಸ್ ಕಾರಿನಲ್ಲಿ ರಾಘವೇಂದ್ರ ಅವರ ಮನೆಗೆ ಬಂದಿದ್ದರು. ಆರೋಪಿಗಳು ಬರುವ ಮಾಹಿತಿಯನ್ನು ಮೊದಲೆ ಸಂಗ್ರಹಿಸಿದ್ದ ಪೊಲೀಸರು ಪುರೋಹಿತರ ಮನೆಯಲ್ಲಿ ಕಾದು ಕುಳಿತಿದ್ದು ಆರೋಪಿಗಳು ಸ್ಥಳಕ್ಕೆ ಬಂದಾಗ ಅವರನ್ನು ವಶಕ್ಕೆ ಪಡಕೊಂಡರೆನ್ನಲಾಗಿದೆ.
ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.





