ಜಾಗತೀಕರಣದಿಂದ ದಲಿತರ ಬದುಕು ದುಸ್ತರ: ಡಾ.ರಾಜೇಂದ್ರ ಚೆನ್ನಿ

ಬೆಂಗಳೂರು, ಮೇ 29: ಜಾಗತಿಕರಣದಿಂದ ದಲಿತರ ಬದುಕು ದುಸ್ತರ ಆಗುತ್ತಿದ್ದು, ಈ ಬಗ್ಗೆ ಚರ್ಚೆ ನಡೆಸುವ ಅವಶ್ಯಕತೆ ಇದೆ ಎಂದು ಕುವೆಂಪು ವಿಶ್ವ ವಿದ್ಯಾಲಯದ ಪ್ರಾಧ್ಯಾಪಕ ಡಾ.ರಾಜೇಂದ್ರ ಚೆನ್ನಿ ಅಭಿಪ್ರಾಯಪಟ್ಟಿದ್ದಾರೆ.
ಆಡಳಿತರೂಢ ಸರಕಾರಗಳು ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು, ಜಾಗತಿಕರಣದ ಬೆಂಬಲಕ್ಕೆ ನಿಲ್ಲುತ್ತವೆ. ಆದರೆ, ಈ ಸಮಯದಲ್ಲಿ ದಲಿತರ ವಸತಿ, ಆರೋಗ್ಯ ಹಾಗೂ ಶಿಕ್ಷಣದ ಹಿನ್ನೆಡೆಯನ್ನು ಪರಿಗಣಿಸುವುದಿಲ್ಲ. ಹೀಗಾಗಿ, ದಲಿತರ ಪರಿಸ್ಥಿತಿ ಇನ್ನು ದುಸ್ತರವಾಗಿದ್ದು, ಈ ಬಗ್ಗೆ ಚರ್ಚೆ ನಡೆಸುವ ಅವಶ್ಯಕತೆ ಇದೆ ಎಂದು ಅಭಿಪ್ರಾಯಿಸಿದರು.
ಮಾನವ ಅಭಿವೃದ್ಧಿ: ಸಮಸ್ಯೆಗಳು ಮತ್ತು ಪರಿಹಾರ ಮಾರ್ಗಗಳು ಕುರಿತು ಮಾತನಾಡಿದ ಹಂಪಿ ವಿವಿಯ ಅಭಿವೃದ್ಧಿ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ.ಎಂ. ಚಂದ್ರ ಪೂಜಾರಿ ಅವರು, ಸರಕಾರಗಳು ಅಭಿವೃದ್ಧಿಯನ್ನು ಪರಿಗಣಿಸುವಾಗ ಪ್ರದೇಶಗಳ ಅಭಿವೃದ್ಧಿಯನ್ನು ಪರಿಗಣಿಸುತ್ತವೇ ವಿನಹ ಯಾವುದೆ ಜಾತಿಗಳ ಆಧಾರದ ಮೇಲೇ ಅಭಿವೃದ್ಧಿಯನ್ನು ಪರಿಗಣಿಸುವುದಿಲ್ಲ. ಇದರಿಂದಾಗಿ, ದಲಿತರ ಬೆಳವಣಿಗೆ ಶೇ.8ರಷ್ಟು ಇರಬೇಕಾಗಿದ್ದು, ಬರೀ 0.3ರಷ್ಟು ಮಾತ್ರ ಇದೆ ಎಂದು ಬೇಸರ ವ್ಯಕ್ತಪಡಿಸಿದರು.
ರಾಜಕಾರಣಿಗಳು ಚುನಾವಣೆಗಳು ಬಂದಾಗ ನಾವು ನಿಮ್ಮ ಜಾತಿಯವರು ಹಾಗೂ ಜಾತ್ಯಾತೀತರು ಎಂದು ಹೇಳಿಕೊಂಡು ಮತಗಳನ್ನು ಪಡೆದು ಜಯಗಳಿಸುತ್ತಾರೆ. ಆದರೆ, ಅಭಿವೃದ್ಧಿ ವಿಚಾರ ಬಂದಾಗ ಮಾತ್ರ ಯಾವುದೇ ಜಾತಿಯನ್ನು ಪರಿಗಣಿಸದೆ ಬರೀ ಆರ್ಥಿಕ ಅಭಿವೃದ್ಧಿಯನ್ನು ಪರಿಗಣಿಸಿ ದಲಿತರು ಸೇರಿ ಇತರೆ ಹಿಂದುಳಿದ ಜಾತಿಗಳಿಗೆ ಅನ್ಯಾಯ ಮಾಡುತ್ತಾರೆ ಎಂದು ಕಿಡಿಕಾರಿದರು.
ಸರಕಾರಗಳು ದಲಿತರ ಅಭಿವೃದ್ಧಿಗೆ ್ಯಾಂಕ್‌ಗಳಿಂದ ಸಾಲ ನೀಡುವ ನೀತಿಯನ್ನು ಜಾರಿಗೆ ತಂದಿದ್ದರೂ ಬ್ಯಾಂಕ್‌ಗಳು ದಲಿತರ ಬಳಿ ಜಮೀನುಗಳು ಇಲ್ಲದ ಕಾರಣದಿಂದಾಗಿ ಸಾಲವನ್ನು ನೀಡುವುದಿಲ್ಲ. ಆದರೆ, ಸರಕಾರಗಳು ದಲಿತರ ಅಭಿವೃದ್ಧಿಗೆ ಬ್ಯಾಂಕ್‌ಗಳಿಂದ ಸಾಲ ನೀಡುವ ನೀತಿಯನ್ನು ಜಾರಿಗೆ ತಂದಿದ್ದೇವೆಯೆಂದು ಪ್ರಚಾರ ಮಾಡಿ, ದಲಿತರ ಮತಗಳನ್ನು ಪಡೆಯಲು ಇಚ್ಛಿಸುತ್ತವೆ ಎಂದು ಕಿಡಿಕಾರಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಇ.ವೆಂಕಟಯ್ಯ, ದಲಿತ ಹಕ್ಕುಗಳ ಸಮಿತಿಯ ರಾಜ್ಯಾಧ್ಯಕ್ಷ ನಿತ್ಯಾನಂದಸ್ವಾಮಿ, ದಲಿತ ಹಕ್ಕುಗಳ ಸಮಿತಿಯ ಸಹ ಸಂಚಾಲಕ ಮಾರುತಿ ಮಾನ್ಪಡೆ, ಯು.ಬಸವರಾಜ, ಸಮಿತಿಯ ರಾಜ್ಯ ಸಂಚಾಲಕ ಗೋಪಾಲಕೃಷ್ಣ ಅರಳಹಳ್ಳಿ ಮತ್ತಿತರರು ಉಪಸ್ಥಿತರಿದ್ದರು.







