ಸರ್ವೇ ಕಾರ್ಯಕ್ಕೆ ಅಡ್ಡಿ ಆರೋಪ: ಇತ್ತಂಡಗಳ ವಿರುದ್ಧ ಪ್ರಕರಣ
ಪುತ್ತೂರು, ಮೇ 29: ಸರ್ವೇ ಕಾರ್ಯಕ್ಕೆ ತೆರಳಿದ್ದ ಪುತ್ತೂರು ನಗರಸಭಾ ಪೌರಾಯುಕ್ತರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವಬೆದರಿಕೆ ನೀಡಿರುವ ಬಗ್ಗೆ ಇಬ್ಬರ ವಿರುದ್ಧ ಪುತ್ತೂರು ನಗರ ಪೊಲೀಸರಿಗೆ ದೂರು ನೀಡಲಾಗಿದ್ದು, ಇದೇ ಪ್ರಕರಣಕ್ಕೆ ಸಂಬಂಧಿಸಿ ಪೌರಾಯುಕ್ತರು ಹಾಗೂ ಇಂಜಿನಿಯರ್ ವಿರುದ್ದ ಪ್ರತಿದೂರು ನೀಡಿದ ಪ್ರಕರಣ ರವಿವಾರ ಪುತ್ತೂರು ನಗರದಲ್ಲಿ ನಡೆದಿದೆ.
ಪುತ್ತೂರು ನಗರಸಬಾ ವ್ಯಾಪ್ತಿಯ ನೆಲ್ಲಿಕಟ್ಟೆ ಎಂಬಲ್ಲಿ ಸರ್ವೆ ಕಾರ್ಯಕ್ಕೆ ತೆರಳಿದ ಪುತ್ತೂರು ನಗರಸಭಾ ಪೌರಾಯುಕ್ತೆ ರೇಖಾ ಜೆ. ಶೆಟ್ಟಿ ಅವರಿಗೆ ಸ್ಥಳೀಯ ನಿವಾಸಿ ಶೇಖ್ ಇಸಾಕ್ ಮತ್ತು ಶೇಖ್ ಜೈನುದ್ದೀನ್ ಎಂಬವರು ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿರುವುದಾಗಿ ಪ್ರಕರಣ ದಾಖಲಾಗಿದೆ.
ಇದೇ ಪ್ರಕರಣದಲ್ಲಿ ಶೇಖ್ ಇಸಾಕ್ ಅವರು ಪೊಲೀಸರಿಗೆ ದೂರು ನೀಡಿ ನಗರಸಬಾ ಪೌರಾಯುಕ್ತೆ ರೇಖಾ ಜೆ. ಶೆಟ್ಟಿ, ಇಂಜಿನಿಯರ್ ತುಳಸಿದಾಸ್ ಮತ್ತಿತರರು ತಮ್ಮ ಮನೆಗೆ ಅಕ್ರಮ ಪ್ರವೇಶ ಮಾಡಿ ಜೀವ ಬೆದರಿಕೆ ಒಡ್ಡಿದ್ದಾರೆ. ಪೌರಾಯುಕ್ತೆ ರೇಖಾ ಜೆ. ಶೆಟ್ಟಿ ತಮ್ಮ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ ವಿಚಾರವನ್ನು ನೋಡಿಕೊಳ್ಳುವುದಾಗಿ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿದ್ದಾರೆ.
ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಎರಡೂ ಪ್ರಕರಣ ದಾಖಲಾಗಿದೆ.







