ರಾಜ್ಯಸಭೆಗೆ ಕರ್ನಾಟಕದಿಂದ ನಿರ್ಮಲಾ ಸೀತಾರಾಮ್, ಮೇಲ್ಮನೆಗೆ ಸೋಮಣ್ಣ
ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

ವೆಂಕಯ್ಯನಾಯ್ಡು ರಾಜಸ್ಥಾನಕ್ಕೆ ವರ್ಗಾ
ಬೆಂಗಳೂರು, ಮೇ 29: ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಗೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ವಿಧಾನ ಪರಿಷತ್‌ಗೆ ಮಾಜಿ ಸಚಿವ ಸೋಮಣ್ಣ ಅವರನ್ನು ಅಭ್ಯರ್ಥಿಗಳನ್ನಾಗಿ ಬಿಜೆಪಿ ಪ್ರಕಟಿಸಿದೆ.
ಕಳೆದ ಬಾರಿ ಕರ್ನಾಟಕ ರಾಜ್ಯದಿಂದ ಆಯ್ಕೆಯಾಗಿದ್ದ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ರಾಜಸ್ಥಾನದಿಂದ ಸ್ಪರ್ಧೆಗೆ ಇಳಿಸಲಾಗಿದೆ. ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಓಂ ಪ್ರಕಾಶ್ ಮತ್ತೂರ್, ಹರ್ಷವರ್ಧನ್ ಸಿಂಗ್, ರಾಮ್ ಕುಮಾರ್ ವರ್ಮ ರಾಜಸ್ಥಾನದಿಂದ ಅಭ್ಯರ್ಥಿಗಳನ್ನಾಗಿಸಿದೆ.
ಅಲ್ಲದೆ, ಹರಿಯಾಣ-ಕೇಂದ್ರ ಸಚಿವ ಚೌದರಿ ಬೀರೆಂದ್ರ ಸಿಂಗ್, ಮಹಾರಾಷ್ಟ್ರ- ಪಿಯೂಸ್ ಗೊಯೆಲ್, ಜಾರ್ಖಂಡ್-ಮುಖ್ತಾರ್ ಅಬ್ಬಾಸ್ ನಕ್ವಿ, ಗುಜರಾತ್- ಪುರುಷೊತ್ತಮ್ ರೂಪಲಾ, ಮಧ್ಯಪ್ರದೇಶ-ಅನಿಲ್ ಮಧವ್ ದೇವ್, ಛತ್ತೀಸ್‌ಘಡ -ರಾಮ್‌ವಿಚಾರ್ ನೇತಮ್ ಹಾಗೂ ಬಿಹಾರದಿಂದ ಗೋಪಾಲ್ ನಾರಾಯಣ್ ಸಿಂಗ್ ಅವರನ್ನು ಆಭ್ಯರ್ಥಿಗಳನ್ನಾಗಿ ಪ್ರಕಟಿಸಿದೆ.
------------------------------------------------------------------------------------------------
ರಾಜ್ಯಸಭೆ ಚುನಾವಣೆ : ತಂತ್ರ-ಪ್ರತಿತಂತ್ರ
ವಿಧಾನಸಭೆಯಿಂದ ರಾಜ್ಯಸಭೆ ಹಾಗೂ ಮೇಲ್ಮನೆಗೆ ನಡೆಯಲಿರುವ ದ್ವೈವಾರ್ಷಿಕ ಚುನಾವಣೆ ನಾಮಪತ್ರ ಸಲ್ಲಿಸಲು ಮೇ 31 ಕೊನೆಯ ದಿನವಾಗಿದೆ. ಆ ಹಿನ್ನೆಲೆಯಲ್ಲಿ ನಾಳೆ(ಮೇ 30) ಪ್ರಮುಖ ರಾಜಕೀಯ ಪಕ್ಷಗಳ ಘಟಾನುಘಟಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಸಾಧ್ಯತೆಗಳಿವೆ.
ಆಡಳಿತಾರೂಢ ಕಾಂಗ್ರೆಸ್ ರಾಜ್ಯಸಭೆಗೆ ಆಸ್ಕರ್ ಫೆರ್ನಾಂಡಿಸ್ ಮತ್ತು ಜೈರಾಂ ರಮೇಶ್ ಅವರನ್ನು ಕಣಕ್ಕಿಳಿಸಿದೆ. ಅದೇ ರೀತಿಯಲ್ಲಿ ವಿಧಾನ ಪರಿಷತ್‌ಗೆ ಆರ್.ಬಿ. ತಿಮ್ಮಾಪುರ್, ರಿಝ್ವಾನ್ ಅರ್ಶದ್, ಅಲ್ಲಂ ವೀರಭದ್ರಪ್ಪ ಹಾಗೂ ವೀಣಾ ಅಚ್ಚಯ್ಯ ಅವರನ್ನು ಅಭ್ಯರ್ಥಿಗಳನ್ನಾಗಿ ಪ್ರಕಟಿಸಿದೆ.
ವಿಪಕ್ಷ ಬಿಜೆಪಿ ರಾಜ್ಯಸಭೆಗೆ ನಿರ್ಮಲಾ ಸೀತಾರಾಮ್ ಹಾಗೂ ಮೇಲ್ಮನೆಗೆ ಸೋಮಣ್ಣ ಅವರನ್ನು ಅಭ್ಯರ್ಥಿಗಳನ್ನಾಗಿ ಪ್ರಕಟಿಸಿದೆ. ಜೆಡಿಎಸ್ ತಮ್ಮ ಅಭ್ಯರ್ಥಿಯನ್ನಾಗಿ ಬ್ಯಾರೀಸ್ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಹಾಗೂ ಉದ್ಯಮಿ ಬಿ.ಎಂ.ಫಾರೂಖ್‌ಗೆ ಅವರನ್ನು ಕಣಕ್ಕಿಳಿಸಲು ಸಿದ್ಧತೆ ನಡೆಸಿದೆ.
ಈ ಮಧ್ಯೆ ಆಡಳಿತಾರೂಢ ಕಾಂಗ್ರೆಸ್ ಪಕ್ಷೇತರ ಶಾಸಕರು ಹಾಗೂ ಜೆಡಿಎಸ್‌ನ ಬಂಡಾಯ ಶಾಸಕರ ಬೆಂಬಲದೊಂದಿಗೆ ರಾಜ್ಯಸಭೆಗೆ ಮೂರನೆ ಅಭ್ಯರ್ಥಿಯನ್ನಾಗಿ ನಿವೃತ್ತ ಪೊಲೀಸ್ ಅಧಿಕಾರಿ ಕೆ.ಸಿ.ರಾಮಮೂರ್ತಿ ಅವರನ್ನು ಕಣಕ್ಕಿಳಿಸಲು ಇನ್ನಿಲ್ಲದ ಕಸರತ್ತು ಆರಂಭಿಸಿದೆ.
ತಂತ್ರ-ಪ್ರತಿತಂತ್ರ: ಕಾಂಗ್ರೆಸ್ ಮೂರನೆ ಅಭ್ಯರ್ಥಿಯನ್ನಾಗಿ ರಾಮಮೂರ್ತಿ ಅವರನ್ನು ಅಖಾಡಕ್ಕಿಳಿಸಿದರೆ ಜೆಡಿಎಸ್ ಅಭ್ಯರ್ಥಿ ಬಿ.ಎಂ.ಫಾರೂಕ್ ಅವರಿಗೆ ಸಂಕಷ್ಟ ಎದುರಾಗುವುದು ನಿಶ್ಚಿತ. ಹೀಗಾಗಿ ಆಡಳಿತ ಮತ್ತು ವಿಪಕ್ಷಗಳು ತಂತ್ರ-ಪ್ರತಿತಂತ್ರ ಹೆಣೆಯುವುದಲ್ಲಿ ತೊಡಗಿವೆ.
ಪಕ್ಷೇತರ ಶಾಸಕರು ಜೆಡಿಎಸ್‌ನ ರಾಜ್ಯಸಭಾ ಅಭ್ಯರ್ಥಿಗೆ ಸೂಚಕರಾಗಿ ಸಹಿ ಹಾಕಿದ ಬೆನ್ನೆಲ್ಲೆ, ಆ ಎಲ್ಲ ಶಾಸಕರು ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಮೂರನೆ ಅಭ್ಯರ್ಥಿಗೆ ಬೆಂಬಲ ನೀಡಲಿದ್ದಾರೆಂಬ ಸುದ್ಧಿ ಜೆಡಿಎಸ್‌ಗೆ ತೀವ್ರ ತಲೆನೋವಾಗಿದೆ. ಆ ಹಿನ್ನೆಲೆಯಲ್ಲಿ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಪಕ್ಷದ ಶಾಸಕರು ನಗರದ ಹೊರವಲಯದ ರೆರ್ಸಾಟ್‌ನಲ್ಲಿ ಬೀಡುಬಿಟ್ಟಿದ್ದಾರೆ.
ಕಾಂಗ್ರೆಸ್‌ಗೆ ಸ್ಪೀಕರ್ ಕಾಗೋಡು ತಿಮ್ಮಪ್ಪ ಸೇರಿ ಒಟ್ಟು 124 ಶಾಸಕರ ಬಲವಿದೆ. ರಾಜ್ಯಸಭೆಯ ಓರ್ವ ಅಭ್ಯರ್ಥಿ ಗೆಲುವಿಗೆ 45ಮತಗಳು ಅಗತ್ಯ. ಇಬ್ಬರು ಅಭ್ಯರ್ಥಿಗಳಿಗೆ 90 ಮತಗಳನ್ನು ಹಾಕಿದರೆ ಇನ್ನೂ 34 ಮತಗಳು ಹೆಚ್ಚುವರಿಯಾಗಿ ಉಳಿಯುತ್ತವೆ. 10ಮಂದಿ ಪಕ್ಷೇತರರು ಹಾಗೂ ಜೆಡಿಎಸ್‌ನ ನಾಲ್ಕೈದು ಮಂದಿ ಶಾಸಕರು ಬೆಂಬಲ ನೀಡದರೆ ಮೂರನೆ ಅಭ್ಯರ್ಥಿಯ ಗೆಲುವು ಕಾಂಗ್ರೆಸ್ ಪಕ್ಷಕ್ಕೆ ಸಿಗಲಿದೆ.







