ಸಸಿಹಿತ್ಲು ಬೀಚ್‌ನಲ್ಲಿ ಸಾಹಸ ಕ್ರೀಡಾ ಚಟುವಟಿಕೆ ಅಭಿವೃದ್ಧಿಗೆ 1 ಕೋಟಿ ರೂ.: ಸಚಿವ ಜೈನ್

ಮಂಗಳೂರು, ಮೇ 29: ಸಸಿಹಿತ್ಲು ಬೀಚ್‌ನಲ್ಲಿ ಸಾಹಸ ಕ್ರೀಡಾಚಟುವಟಿಕೆ ಅಭಿವೃದ್ಧಿಗೆ ಪ್ರವಾಸೋದ್ಯಮ ಮತ್ತು ಕ್ರೀಡಾ ಇಲಾಖೆಯಿಂದ ಒಂದು ಕೋಟಿ ರೂ. ಅನುದಾನ ಒದಗಿಸಿಕೊಡಲಾಗುವುದು ಹಾಗೂ ಇತರ ಮೂಲಭೂತ ಸೌಕರ್ಯಗಳು ಅಭಿವೃದ್ಧಿಯನ್ನು ಕೈಗೆತ್ತಿಕೊಳ್ಳಲಾಗುವುದು.ಮುಂದಿನ ವರ್ಷವೂ ರಾಷ್ಟ್ರಮಟ್ಟದ ಸರ್ಪಿಂಗ್ ಸ್ಪರ್ಧೆಯನ್ನು ಮಾರ್ಚ್ 2017ರ ಕೊನೆಯ ವಾರದಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ರಾಜ್ಯ ಯುವಜನಸೇವೆ, ಕ್ರೀಡೆ ಹಾಗೂ ಮೀನುಗಾರಿಕಾ ಸಚಿವ ಅಭಯ ಚಂದ್ರ ಜೈನ್ ಹೇಳಿದ್ದಾರೆ.
ಅವರು ಇಂದು ಸಸಿಹಿತ್ಲು ಬೀಚ್‌ನಲ್ಲಿ ರಾಜ್ಯ ಪ್ರವಾಸೋದ್ಯಮ ಇಲಾಖೆ, ಸರ್ಫಿಂಗ್ ಫೆಡರೇಶನ್ ಆಫ್ ಇಂಡಿಯಾ, ಮಂತ್ರ ಸರ್ಫ್ ಕ್ಲಬ್ ಹಾಗೂ ಅಲ್ ಕಾರ್ಗೋ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡ ಮೂರು ದಿನಗಳ ಇಂಡಿಯನ್ ಓಪನ್ ಸರ್ಪಿಂಗ್ ಸ್ಫರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಮಾದರಿ ಬೀಚ್ ಆಗಿ ಅಭಿವೃದ್ಧಿ
ಸಸಿ ಹಿತ್ಲು ಬೀಚ್ ನಂದಿನಿ ಹಾಗೂ ಶಾಂಭವಿ ನದಿಗಳು ಒಟ್ಟಾಗಿ ಸಮುದ್ರ ಸೇರುವ ಮಂಗಳೂರಿನ ಅಂಚಿನಲ್ಲಿರುವ ಸುಂದರ ಪ್ರದೇಶ. ಈ ಪ್ರದೇಶದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಸರಕಾರದಿಂದ ಇನ್ನಷ್ಟು ಅನುದಾನ ಬಿಡುಗಡೆಮಾಡಲಿದೆ. 50 ಲಕ್ಷ ರೂ. ವೆಚ್ಚದಲ್ಲಿ ತಡೆಗೋಡೆ ನಿರ್ಮಾಣ, ಸಸಿ ಹಿತ್ಲು ಪ್ರದೇಶದ ಮುಖ್ಯ ರಸ್ತೆ ಬದಿಯಲ್ಲಿ ಹೈ ಮಾಸ್ಟ್ ದೀಪಗಳು ದೀಪ ಅಳವಡಿಕೆ ಹಾಗೂ ಇನ್ನಿತರ ಮೂಲಭೂತ ಸೌಕರ್ಯಗಳ ಅಭಿವೃದ್ಧಿಯೊಂದಿಗೆ ಜಿಲ್ಲೆಯ ಮಾದರಿ ಬೀಚ್ ಆಗಿ ಪರಿವರ್ತಿಸಲು ಆಸಕ್ತಿ ಹೊಂದಿರುವುದಾಗಿ ಸಚಿವ ಅಭಯ ಚಂದ್ರ ಜೈನ್ ತಿಳಿಸಿದರು.
ಮುಂದಿನ ವರ್ಷ ಮಾರ್ಚ್ 27, 28, 29ರಂದು ರಾಷ್ಟ್ರಮಟ್ಟದ ಸರ್ಫಿಂಗ್
ಈ ಬಾರಿ ದೇಶದಲ್ಲಿ ಪ್ರಥಮ ಬಾರಿಗೆ ರಾಷ್ಟ್ರಮಟ್ಟದ ಸರ್ಫಿಂಗ್ ಉತ್ಸವ ಹಮ್ಮಿಕೊಂಡ ಹಿರಿಮೆ ಜಿಲ್ಲೆಯದ್ದಾಗಿದೆ. ಮುಂದಿನ ವರ್ಷ ಮಾರ್ಚ್ 27,28,29ರಂದು ರಾಷ್ಟ್ರಮಟ್ಟದ ಸರ್ಫಿಂಗ್ ಸ್ಪರ್ಧೆಯನ್ನು ಸಸಿಹಿತ್ಲು ಬೀಚ್‌ನಲ್ಲಿ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ತಿಳಿಸಿದರು.ಸಸಿಹಿತ್ಲು ಪ್ರಾಕೃತಿಕ ಸೌಂದರ್ಯವನ್ನು ಹೊಂದಿರುವ ಬೀಚ್. ಅದನ್ನು ಉತ್ತಮ ರೀತಿಯಲ್ಲಿ ಅಭಿವೃದ್ಧಿಪಡಿಸಲು ಸ್ಥಳೀಯರ ಸಹಕಾರ ಅಗತ್ಯ. ಈ ನಿಟ್ಟಿನಲ್ಲಿ ಸ್ಥಳೀಯ ಸಂಘ ಸಂಸ್ಥೆಗಳ ಸಹಭಾಗಿತ್ವವನ್ನು ಪಡೆಯಲಾಗಿದೆ. ಜನರು ಉತ್ತಮ ರೀತಿಯಲ್ಲಿ ಉತ್ಸವದಲ್ಲಿ ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದಾರೆ. ವಾರದ ಕೊನೆಯಲ್ಲಿ ಈ ಬೀಚ್‌ಗೆ ಜನ ಭೇಟಿ ನೀಡಲು ಇಲ್ಲಿನ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಮೊದಲು ಗಮನ ಹರಿಸಲಾಗುವುದು ಎಂದು ಇಬ್ರಾಹೀಂ ತಿಳಿಸಿದರು.
ಸಸಿಹಿತ್ಲುವಿಗೆ ಬಂದ ಸ್ಟಾರ್‌ಗಳು
ಸಸಿಹಿತ್ಲು ಸರ್ಫಿಂಗ್ ಸ್ಪರ್ಧೆಯ ಸಮಾರೋಪದಲ್ಲಿ ನಟಿ ಎಲಿಯಾನ ಡಿಕ್ರೂಸ್, ಯುವ ನಟ ವಿನಯ ರೈ, ಕ್ರಿಕೆಟ್ ಆಟಗಾರ ಸಂಜು ಸಾಮ್ಸನ್ ಭಾಗವಹಿಸಿ ಮೆರುಗು ನೀಡಿದರು.
ಇದೇ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್, ಹಳೆಯಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಜಲಜಾ, ಕೆಸಿಸಿಐ ಅಧ್ಯಕ್ಷ ರಾಮ್‌ಮೋಹನ್ ಪೈ ಮಾರೂರು, ಮೂಡಾ ಆಯುಕ್ತ ಮುಹಮ್ಮದ್ ನಝೀರ್, ಸಂಘಟನಾ ಸಮಿತಿಯ ಗಣ್ಯರಾದ ಅಮೃತ್ ಕುಂದರ್, ಗೌರವ್ ಹೆಗ್ಡೆ, ಸರ್ಫಿಂಗ್ ಸ್ವಾಮಿ, ರಾಮ್ ಮೋಹನ್ ಮೊದಲಾದವರು ಉಪಸ್ಥಿತರಿದ್ದರು.
ಸಸಿಹಿತ್ಲು ಬಗ್ಗೆ ಮೆಚ್ಚುಗೆ
ಈ ರೀತಿಯ ಸರ್ಫಿಂಗ್ ಸ್ಪರ್ಧೆಯಿಂದ ಬೆಳಕಿಗೆ ಬಾರದ ಹಲವು ಪ್ರತಿಭೆಗಳು ಬೆಳಕಿಗೆ ಬರಲು ಸಹಾಯವಾಗುತ್ತದೆ. ನಾನು ಸರ್ಫಿಂಗ್‌ನ್ನು ನನ್ನ ಎರಡನೆ ಕ್ರೀಡೆಯಾಗಿ ಮೆಚ್ಚುತ್ತೇನೆ
ಸಂಜು ಸ್ಯಾಮ್ಸನ್, ಭಾರತ ಕ್ರಿಕೆಟ್ ಆಟಗಾರ.
ಸಸಿಹಿತ್ಲು ಸುಂದರ ಬೀಚ್. ಮುಂದಿನ ವರ್ಷವೂ ಬರುತ್ತೇನೆ.
ಎಲಿಯಾನಾ ಡಿಕ್ರೂಸ್, ಚಲನಚಿತ್ರ ನಟಿ
ಕಳೆದ ಮೂರು ವರ್ಷಗಳಿಂದ ಬೀಚ್‌ಗೆ ಬರುತ್ತಿದ್ದೇನೆ. ಇದೊಂದು ಸುಂದರ ಸಾಹಸ ಕ್ರೀಡೆ. ಸರ್ಫಿಂಗ್‌ಗೆ ಸೂಕ್ತ ಬೀಚ್.
ವಿನಯ ರೈ, ಚಲನ ಚಿತ್ರ ನಟ.
ಸಸಿಹಿತ್ಲು ಬೀಚ್‌ನಲ್ಲಿ ಕಿಕ್ಕಿರಿದ ಜನಸಂದಣಿ
ರವಿವಾರ ರಜಾ ದಿನವಾಗಿದ್ದ ಕಾರಣ ಸಸಿಹಿತ್ಲು ತೀರದಲ್ಲಿ ಸಾಕಷ್ಟು ಜನ ಸರ್ಫಿಂಗ್ ಉತ್ಸವದಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ಕರಾವಳಿಯ ವಿವಿಧ ತಿನಿಸುಗಳ, ಮೀನು ಖಾದ್ಯಗಳ ಸ್ಟಾಲ್‌ಗಳು, ಗಾಳಿಪಟ ಬಿಡುವ ಮಕ್ಕಳ ದಂಡು, ಸಮುದ್ರದ ಅಲೆಯ ಬಳಿ ಸೆಲ್ಪಿ ತೆಗೆದುಕೊಳ್ಳುವ ಪ್ರವಾಸಿಗರು, ತೀರದ ಮರಳಿನಲ್ಲಿ ಆಟವಾಡುವ ಮಕ್ಕಳು, ಮರಳು ಶಿಲ್ಪ ರಚಿಸಿದ ಶಿಲ್ಪಿಗಳು ಸರ್ಫಿಂಗ್ ಸ್ಪರ್ಧೆಗೆ, ಉತ್ಸವಕ್ಕೆ ಕಳೆ ನೀಡಿದ್ದರು.







