ರಾಜ್ಯಸಭೆಗೆ ಬಿಜೆಪಿಯ 12 ಅಭ್ಯರ್ಥಿಗಳ ಪಟ್ಟಿಯಲ್ಲಿ ವೆಂಕಯ್ಯ ನಾಯ್ಡು,ನಕ್ವಿ ಮತ್ತು ಗೋಯಲ್‌ಗೆ ಸ್ಥಾನ

ಹೊಸದಿಲ್ಲಿ,ಮೇ 29: ಜೂ.11ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಗೆ ಕರ್ನಾಟಕದಿಂದ ತನ್ನ ನಾಮಕರಣಕ್ಕೆ ರಾಜ್ಯದ ಜನರಿಂದ ಭಾರೀ ಪ್ರತಿರೋಧದಿಂದಾಗಿ ಬೆಂಗಳೂರಿಗೆ ತೆರಳಿದ್ದರೂ ತನ್ನ ನಾಮಪತ್ರ ಸಲ್ಲಿಸದೆ ದಿಲ್ಲಿಗೆ ವಾಪಸಾಗಿದ್ದ ಆಂಧ್ರಪ್ರದೇಶದ ಬಿಜೆಪಿಯ ಹಿರಿಯ ನಾಯಕ ಹಾಗೂ ಕೇಂದ್ರ ಸಚಿವ ಎಂ.ವೆಂಕಯ್ಯ ನಾಯ್ಡು ಅವರು ಕೊನೆಗೂ ರಾಜಸ್ಥಾನದಿಂದ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಬಿಜೆಪಿಯು ರವಿವಾರ ಬಿಡುಗಡೆಗೊಳಿಸಿರುವ ತನ್ನ 12 ಅಭ್ಯರ್ಥಿಗಳ ಪಟ್ಟಿಯಲ್ಲಿ ನಾಯ್ಡು ಜೊತೆಗೆ ಕೇಂದ್ರ ಸಚಿವರಾದ ಬೀರೇಂದ್ರ ಸಿಂಗ, ನಿರ್ಮಲಾ ಸೀತಾರಾಮನ್, ಪಿಯೂಷ್ ಗೋಯಲ್ ಮತ್ತು ಮುಖ್ತಾರ್ ಅಬ್ಬಾಸ್ ನಕ್ವಿ ಅವರು ಸ್ಥಾನ ಪಡೆದಿದ್ದಾರೆ.
ಮೇಲ್ಮನೆಗೆ ನಡೆಯುತ್ತಿರುವ ದ್ವೈವಾರ್ಷಿಕ ಚುನಾವಣೆಗೆ ಬಿಜೆಪಿಯ ಉಮೇದುವಾರರಲ್ಲಿ ಪಕ್ಷದ ಉಪಾಧ್ಯಕ್ಷರಾದ ಓಂ ಪ್ರಕಾಶ ಮಾಥೂರ್ ಮತ್ತು ಪುರುಷೋತ್ತಮ ರೂಪಾಲಾ ಅವರೂ ಸೇರಿದ್ದಾರೆ. ಇವರನ್ನು ಅನುಕ್ರಮವಾಗಿ ರಾಜಸ್ಥಾನ ಮತ್ತು ಗುಜರಾತ್‌ಗಳಿಂದ ನಾಮಕರಣಗೊಳಿಸಲಾಗಿದೆ.
ಬಿಹಾರದಿಂದ ತನ್ನ ಅಭ್ಯರ್ಥಿಯಾಗಿ ಪಕ್ಷದ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಗೋಪಾಲ ನಾರಾಯಣ ಸಿಂಗ್ ಅವರನ್ನು ಬಿಜೆಪಿಯು ಆಯ್ಕೆ ಮಾಡಿದೆ. ರಾಜ್ಯದಲ್ಲಿ ತಾನು ಗೆಲ್ಲಬಹುದಾದ ಏಕೈಕ ಸ್ಥಾನಕ್ಕೆ ಅದು ಮಾಜಿ ಉಪ ಮುಖ್ಯಮಂತ್ರಿ ಸುಶೀಲ ಕುಮಾರ ಮೋದಿ ಅವರನ್ನು ಆಯ್ಕೆ ಮಾಡಬಹುದೆಂಬ ಊಹಾಪೋಹಗಳಿದ್ದವು.
ನಾಯ್ಡು, ಸಿಂಗ್, ಸೀತಾರಾಮನ್, ಗೋಯಲ್ ಮತ್ತು ನಕ್ವಿ ಅನುಕ್ರಮವಾಗಿ ರಾಜಸ್ಥಾನ, ಹರ್ಯಾಣ, ಕರ್ನಾಟಕ, ಮಹಾರಾಷ್ಟ್ರ ಮತ್ತು ಜಾರ್ಖಂಡ್‌ಗಳಿಂದ ತನ್ನ ಅಭ್ಯರ್ಥಿಗಳಾಗಿರುತ್ತಾರೆ ಎಂದು ಪಕ್ಷದ ಹೇಳಿಕೆಯು ತಿಳಿಸಿದೆ.
ಹರ್ಷವರ್ಧನ ಸಿಂಗ್ ಮತ್ತು ರಾಮ ಕುಮಾರ ವರ್ಮಾ (ಇಬ್ಬರೂ ರಾಜಸ್ಥಾನ) ಮತ್ತು ರಾಮವಿಚಾರ ನೇತಂ(ಛತ್ತೀಸಗಡ) ಅವರು ಬಿಜೆಪಿಯ ಇತರ ಅಭ್ಯರ್ಥಿಗಳಾಗಿದ್ದಾರೆ.
ನಾಮಪತ್ರಗಳನ್ನು ಸಲ್ಲಿಸಲು ಮೇ 31 ಕೊನೆಯ ದಿನಾಂಕವಾಗಿದ್ದು,ತನ್ನ ಇನ್ನಷ್ಟು ಅಭ್ಯರ್ಥಿಗಳ ಹೆಸರುಗಳ್ನು ಪಕ್ಷವು ಶೀಘ್ರವೇ ಪ್ರಕಟಿಸಲಿದೆ.
ರೈಲ್ವೆ ಸಚಿವ ಸುರೇಶ ಪ್ರಭು ಅವರ ಸದಸ್ಯತ್ವದ ಅವಧಿಯೂ ಸದ್ಯವೇ ಕೊನೆಗೊಳ್ಳಲಿದ್ದು,ಅವರನ್ನು ಪುನಃ ನಾಮಕರಣಗೊಳಿಸುವ ನಿರೀಕ್ಷೆಯಿದೆ. ಪಕ್ಷದ ಟಿಕೆಟ್ ಪಡೆಯಲು ಪ್ರಧಾನ ಕಾರ್ಯದರ್ಶಿ ರಾಮ ಮಾಧವ ಮತ್ತು ಉಪಾಧ್ಯಕ್ಷ ವಿನಯ ಸಹಸ್ರಬುದ್ಧೆ ಅವರೂ ಸ್ಪರ್ಧೆಯಲ್ಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ರಾಜ್ಯಸಭಾ ಸದಸ್ಯರಾಗಿರುವ ಖ್ಯಾತ ಪತ್ರಕರ್ತ ಎಂ.ಜೆ.ಅಕ್ಬರ್ ಅವರ ಅವಧಿಯೂ ಕೊನೆಗೊಳ್ಳುತ್ತಿದೆ.
57 ಸ್ಥಾನಗಳಿಗಾಗಿ ದ್ವೈವಾರ್ಷಿಕ ಚುನಾವಣೆ ನಡೆಯಲಿದ್ದು,14 ಬಿಜೆಪಿ ಸದಸ್ಯರು ನಿವೃತ್ತರಾಗುತ್ತಿದ್ದಾರೆ. ಅದು 18-19 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ.







