ಸಹಕಾರ, ಮುಕ್ತಮನಸ್ಸಿನಿಂದ ಸಾಧನೆ ಸಾಧ್ಯ:ಚಾರುಲತಾ ಸೋಮಲ್
ಸೈನಿಕ ಶಾಲಾ ವಿದ್ಯಾರ್ಥಿಗಳ ಪದಗ್ರಹಣ

ಕುಶಾಲನಗರ, ಮೇ 29: ಕೂಡಿಗೆ ಸೈನಿಕ ಶಾಲೆಯ 2016-17ನೆ ಸಾಲಿನ ವಿದ್ಯಾರ್ಥಿಗಳ ಪದಗ್ರಹಣ ಸಮಾರಂಭ ಶಾಲಾ ಸಭಾಂಗಣದಲ್ಲಿ ಶುಕ್ರವಾರ ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕೊಡಗು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಚಾರುಲತಾ ಸೋಮಲ್ ಕಾರ್ಯಕ್ರಮ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಶಾಲೆಯ ಚಟುವಟಿಕೆಗಳ ಕುರಿತು ಶ್ಲಾಘಿಸಿದರು. ಸಂಘಟನೆ, ಸಹಕಾರ ಮತ್ತು ಮುಕ್ತಮನಸ್ಸಿದ್ದರೆ ಪ್ರತಿಯೊಬ್ಬರೂ ಯಾವುದೇ ಸಾಧನೆಯನ್ನು ಮಾಡಲು ಸಾಧ್ಯ ಎಂದರು. ಉತ್ತಮ ಗುಣಗಳನ್ನು ಮಕ್ಕಳ ಬಾಲ್ಯಾವಸ್ಥೆಯಲ್ಲಿಯೇ ಬೆಳೆಯುವಂತೆ ಮಾಡಿ ಅವರು ತಮ್ಮ ಭಾವಿ ಬದುಕಿನಲ್ಲಿ ಮಾನವೀಯತೆಯನ್ನು ಮೆರೆಯುವಂತೆ ಮಾಡಬೇಕೆಂದು ತಿಳಿಸಿದರು. ಶಾಲೆಯ ಪ್ರಾಂಶುಪಾಲ ಕ್ಯಾಪ್ಟನ್ ಬೆನ್ ಎಚ್ ಬೆರ್ಸನ್‌ರವರು ಮುಖ್ಯ ಅತಿಥಿಗಳಾದ ಚಾರುಲತಾ ಸೋಮಲ್ ಅವರ ಕಿರು ಪರಿಚಯವನ್ನು ಮಾಡಿಕೊಟ್ಟರು. ನಂತರ ಮುಖ್ಯ ಅತಿಥಿಗಳು ಶಾಲೆಯಲ್ಲಿ ಆಯ್ಕೆ ಮಾಡಲ್ಪಟ್ಟ ವಿದ್ಯಾರ್ಥಿಗಳ ಭುಜದ ಮೇಲಿನ ಸಾಂಕೇತಿಕ ಚಿಹ್ನೆಯನ್ನು ಅನಾವರಣ ಮಾಡುವುದರ ಮೂಲಕ ಅವರ ಪದವಿಗಳನ್ನು ಪ್ರದಾನ ಮಾಡಿದರು. ಶಾಲೆಯ ಶಿಸ್ತು ವಿಭಾಗದ ನಾಯಕನಾದ ಕೆಡೆಟ್ ಹನುಮಂತ್ ವಿವಿಧ ಪದವಿಗಳನ್ನು ಪಡೆದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.





