ಮಾನವೀಯ ಮೌಲ್ಯಗಳಿಗೆ ಆದ್ಯತೆ ನೀಡಲು ಗಣ್ಯರ ಕರೆ
ಮಡಿಕೇರಿ: ಕೋಟಿ ಚೆನ್ನಯ ಕ್ರೀಡಾಕೂಟದ ಸಮಾರೋಪ
ಮಡಿಕೇರಿ, ಮೇ 29: ವಿವಿಧತೆಯಲ್ಲಿ ಏಕತೆಯನ್ನು ಕಂಡಿರುವ ಭಾರತ ದೇಶದಲ್ಲಿ ಸುಮಾರು ಸಾವಿರಕ್ಕೂ ಅಧಿಕ ಜಾತಿಗಳಿದ್ದು, ಜೀವನ ಪದ್ಧತಿ ವಿಭಿನ್ನವಾಗಿದೆಯಾದರೂ ಮಾನವೀಯ ಮೌಲ್ಯಗಳು ಏಕರೂಪದಾಗಿರಬೇಕೆಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಕರೆ ನೀಡಿದ್ದಾರೆ.
ಬಿಲ್ಲವ ಸಮಾಜ ಸೇವಾ ಸಂಘದಿಂದ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ 14ನೆ ವರ್ಷದ ಜಿಲ್ಲಾ ಮಟ್ಟದ ಕೋಟಿ ಚೆನ್ನಯ ಕ್ರೀಡಾಕೂಟದ ಸಮಾರೋಪ ಸಮಾರಂಭ ನಡೆಯಿತು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಶಾಸಕ ರಂಜನ್, ಸಮಾಜದ ಬಂಧುಗಳು ಕ್ರೀಡಾಕೂಟದಂತಹ ಸಮಾರಂಭಗಳ ಮೂಲಕ ಸಂಘಟಿತರಾದಾಗ ಆಚಾರ, ವಿಚಾರ ಹಾಗೂ ಸಂಸ್ಕೃತಿಗಳ ಬೆಳವಣಿಗೆಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ, ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ವಿವಿಧ ಸಮಾಜಗಳ ಮೂಲಕ ಕ್ರೀಡೋತ್ಸವಗಳು ಹೆಚ್ಚು ಹೆಚ್ಚಾಗಿ ನಡೆಯುತ್ತಿದ್ದು, ಇದು ಯುವ ಸಮೂಹಕ್ಕೆ ಸ್ಫೂರ್ತಿದಾಯಕವಾಗಿದೆ ಮಾತ್ರವಲ್ಲದೆ ಒಗ್ಗಟ್ಟಿನ ಸಮಾಜಕ್ಕೆ ನಾಂದಿಯಾಗಿದೆ ಎಂದು ಅಭಿಪ್ರಾಯಪಟ್ಟರು. ತಮ್ಮ ತಮ್ಮ ಜಾತಿ, ಸಮುದಾಯ, ಭಾಷೆಗಳ ಬಗ್ಗೆ ಅಭಿಮಾನವಿರಬೇಕೆ ಹೊರತು ದುರಾಭಿಮಾನ ಇರಬಾರದೆಂದು ಬೋಪಯ್ಯ ಸಲಹೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಸುನೀಲ್ ಸುಬ್ರಮಣಿ ಮಾತನಾಡಿ, ಸಂಘ ಸಂಸ್ಥೆಗಳಿಗೆ ಸ್ವಜಾತಿ ಪ್ರೇಮದ ಜೊತೆಗೆ ಸಾಮಾಜಿಕ ಕಳಕಳಿಯೂ ಇರಬೇಕೆಂದು ಕರೆ ನೀಡಿದರು.
ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬಿಲ್ಲವರ ಮಹಾಮಂಡಲದ ವಕ್ತಾರ ಪರಮಾನಂದ ಸಾಲ್ಯಾನ್, ಆಯಾ ಸಮಾಜದ ಸಂಸ್ಕಾರ, ಸಂಸ್ಕೃತಿ, ಆಚಾರ, ವಿಚಾರಗಳನ್ನು ಉಳಿಸಿ ಬೆಳೆಸುವ ಮಾರ್ಗದಲ್ಲಿ ಮಾನವೀಯತೆಗೂ ಆದ್ಯತೆ ನೀಡಬೇಕೆಂದರು.
ಪ್ರತಿಯೊಬ್ಬರು ತಮ್ಮ ಸಂಸ್ಕೃತಿಯನ್ನು ದೈನಂದಿನ ಚಟುವಟಿಕೆಗಳ ಒಂದು ಭಾಗವನ್ನಾಗಿ ಅಳವಡಿಸಿಕೊಂಡಾಗ ಹಿರಿಯರು ಪರಿಚಯಿಸಿದ ಆಚಾರ ವಿಚಾರಗಳನ್ನು ಉಳಿಸಿ ಬೆಳೆಸಬಹುದಾಗಿದೆ ಎಂದು ಅಭಿಪ್ರಾಯಪಟ್ಟರು.
ಕೊಡಗು ಜಿಲ್ಲಾ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಬಿ.ವೈ. ಆನಂದ ರಘು, ಮಡಿಕೆೇರಿ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಬಿ.ಎಂ. ರಾಜಶೇಖರ್, ಮಹಿಳಾ ಘಟಕದ ಬಿ.ಎಸ್.ಲೀಲಾವತಿ, ಸಮಾಜದ ಪ್ರಮುಖರಾದ ಅರುಣ ಆನಂದ್, ಜಯಪ್ಪ, ಖಜಾಂಚಿ ಮಹೇಶ್ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಜಿಪಂ ಸದಸ್ಯರಾದ ಕಲಾವತಿ ಪೂವಪ್ಪ, ತಾಪಂ ಸದಸ್ಯರಾದ ಬಿ.ವೈ.ರವೀಂದ್ರ ಹಾಗೂ ಬಿ.ಎಂ.ಗಣೇಶ್ ಅವರನ್ನು ಸನ್ಮಾನಿಸಲಾಯಿತು. ಪ್ರತಿ ವರ್ಷದಂತೆ ಈ ಬಾರಿ ಕೂಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡಿ ಗೌರವಿಸಲಾಯಿತು.







