ಈ ಸಲದ ಹಜ್ ಯಾತ್ರೆಗೆ ಇರಾನ್ ಇಲ್ಲ?

ಟೆಹರಾನ್,ಮೇ 29: ಇಸ್ಲಾಂ ಧರ್ಮದ ಪರಮ ಪವಿತ್ರ ಮಸೀದಿಗಳ ಪಾಲಕನಾದ ಸೌದಿ ಆರೇಬಿಯವು, ಇರಾನಿ ಹಜ್ ಯಾತ್ರಿಕರಿಗೆ ಅಡ್ಡಿಗಳನ್ನುಂಟು ಮಾಡುವ ಮೂಲಕ ಸತ್ಯವಿಶ್ವಾಸಿಗಳಿಗೆ ಅಲ್ಲಾಹುವಿನೆಡೆಗೆ ಸಾಗುವ ದಾರಿಯನ್ನು ತಡೆಗಟ್ಟಿರುವುದಾಗಿ ಇರಾನ್ ಹೇಳಿದೆ. ಇದರಿಂದಾಗಿ ಇರಾನಿ ಯಾತ್ರಿಕರು ಈ ವರ್ಷದ ಹಜ್ ಯಾತ್ರೆಯಿಂದ ವಂಚಿತರಾಗುವ ಸಾಧ್ಯತೆಯಿದೆಯೆಂದು ಅದು ತಿಳಿಸಿದೆ.
‘‘ಹಜ್‌ಯಾತ್ರೆಗೆ ತೆರಳಲು ಇರಾನಿಯನ್ನರಿಗೆ ಇರುವ ಸ್ಪಷ್ಟವಾದ ಹಕ್ಕನ್ನು ಸೌದಿ ಆರೇಬಿಯವು ವಿರೋಧಿಸುತ್ತಿದೆ ಹಾಗೂ ಅದು ಅಲ್ಲಾಹುವಿನೆಡೆಗೆ ಸಾಗುವ ದಾರಿಗೆ ತಡೆಯೊಡ್ಡಿದೆ’’ ಎಂದು ಇರಾನಿನ ಹಜ್ ಸಂಸ್ಥೆಯು ಆಕ್ರೋಶ ವ್ಯಕ್ತಪಡಿಸಿದೆ.
ಪವಿತ್ರ ಮಕ್ಕಾ ಯಾತ್ರೆಗೆ ಆಗಮಿಸಲಿರುವ ತನ್ನ ದೇಶದ 60 ಸಾವಿರಕ್ಕೂ ಅಧಿಕ ಯಾತ್ರಿಕರಿಗೆ ‘‘ಭದ್ರತೆ ಹಾಗೂ ಗೌರವ’’ವನ್ನು ನೀಡಬೇಕೆಂಬ ಇರಾನಿನ ಬೇಡಿಕೆಗಳಿಗೆ ಪ್ರತಿಕ್ರಿಯಿಸಲು ಸೌದಿ ವಿಫಲವಾಗಿರುವುದರಿಂದ ದುರದೃಷ್ಟವಶಾತ್, ಇರಾನಿ ಯಾತ್ರಿಕರಿಗೆ ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಹಜ್ ಯಾತ್ರೆಯಲ್ಲಿ ಭಾಗವಹಿಸಲು ಸಾಧ್ಯವಾಗದು ಎಂದು ಇರಾನ್‌ನ ಸಂಸ್ಕೃತಿ ಸಚಿವ ಅಲಿ ಜನ್ನತಿ ತಿಳಿಸಿದ್ದಾರೆ.
ಇರಾನ್‌ನಿಂದ ಆಗಮಿಸಲಿರುವ ಯಾತ್ರಿಕರಿಗೆ ಸೂಕ್ತ ಏರ್ಪಾಡುಗಳನ್ನು ಮಾಡುವ ಕುರಿತಾಗಿ ಇರಾನಿ ನಿಯೋಗದೊಂದಿಗೆ ನಡೆದ ಮಾತುಕತೆಯಲ್ಲಿ ಅಂತಿಮ ಒಪ್ಪಂದಕ್ಕೆ ಬರಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಇರಾನಿ ನಿಯೋಗವು ಸ್ವದೇಶಕ್ಕೆ ವಾಪಾಸಾಗಿದೆಯೆಂದು ಸೌದಿ ಅಧಿಕಾರಿಗಳು ತಿಳಿಸಿದ್ದಾರೆ. ಎರಡು ದಿನಗಳ ಕಾಲ ನಡೆದ ಮಾತುಕತೆಯಲ್ಲಿ ಇರಾನಿಯರು ಮುಂದಿಟ್ಟ ಹಲವು ಬೇಡಿಕೆಗಳಿಗೆ ತಾನು ಸ್ಪಂದಿಸಿರುವುದಾಗಿ ಸೌದಿಯ ಹಜ್ ಸಚಿವಾಲಯ ತಿಳಿಸಿದೆ. ಇರಾನ್‌ನಲ್ಲಿರುವ ಸೌದಿ ರಾಜತಾಂತ್ರಿಕ ಕಚೇರಿಗಳು ಮುಚ್ಚಿರುವುದರಿಂದ ಇರಾನಿ ಯಾತ್ರಿಕರಿಗೆ ಇಲೆಕ್ಟ್ರಾನಿಕ್ ವೀಸಾಗಳನ್ನು ನೀಡುವುದು ನೀಡಿಕೆ ಸೇರಿದಂತೆ ಹಲವು ವಿಷಯಗಳಲ್ಲಿ ಒಪ್ಪಂದಕ್ಕೆ ಬರಲಾಗಿತ್ತು.
ಹಜ್‌ಯಾತ್ರೆಗೆ ಇರಾನಿಯರು ಪಾಲ್ಗೊಳ್ಳದೆ ಇರುವುದು ಕಳೆದ 30 ವರ್ಷಗಳಲ್ಲೇ ಇದು ಮೊದಲ ಸಲವಾಗಿದೆ. 1987ರಲ್ಲಿ ಹಜ್‌ಯಾತ್ರೆಯ ವೇಳೆ ಮಕ್ಕಾದಲ್ಲಿ ಸೌದಿಯ ಭದ್ರತಾಪಡೆಗಳು ಹಾಗೂ ಇರಾನಿ ಯಾತ್ರಿಕರ ನಡುವೆ ಭುಗಿಲೆದ್ದ ಘರ್ಷಣೆಯಲ್ಲಿ 400ಕ್ಕೂ ಅಧಿಕ ಮಂದಿ ಮೃತಪಟ್ಟ ಘಟನೆಯ ಬಳಿಕ ರಿಯಾದ್ ಹಾಗೂ ಟೆಹರಾನ್ ಸುಮಾರು ನಾಲ್ಕು ವರ್ಷಗಳ ಕಾಲ ತಮ್ಮ ನಡುವಿನ ಬಾಂಧವ್ಯವನ್ನು ಕಡಿದುಕೊಂಡಿದ್ದವು.
ಕಳೆದ ಜನವರಿಯಲ್ಲಿ ಇರಾನಿ ಪ್ರತಿಭಟನಕಾರರು ಸೌದಿ ಆರೇಬಿಯ ರಾಯಭಾರಿ ಕಚೇರಿಗೆ ಬೆಂಕಿ ಹಚ್ಚಿದುದು ಹಾಗೂ ಶಿಯಾ ಧರ್ಮಗುರುವೊಬ್ಬರಿಗೆ ಸೌದಿ ಮರಣದಂಡನೆ ಜಾರಿಗೊಳಿಸಿದ ಘಟನೆಗಳ ಬಳಿಕ ಉಭಯ ದೇಶಗಳ ಬಾಂಧವ್ಯ ಮತ್ತೆ ಹಳಸಿದೆ.
ಶಿಯಾ ಪ್ರಾಬಲ್ಯದ ಇರಾನ್ ಹಾಗೂ ಸುನ್ನಿ ಮುಸ್ಲಿಂ ಸಮುದಾಯ ಬಹುಸಂಖ್ಯೆಯಲ್ಲಿರುವ ಸೌದಿ ಆರೇಬಿಯ ಹಲವಾರು ಪ್ರಾಂತೀಯ ವಿಷಯಗಳಿಗೆ ಸಂಬಂಧಿಸಿ ಪರಸ್ಪರ ಭಿನ್ನಾಭಿಪ್ರಾಯಗಳನ್ನು ಹೊಂದಿವೆ. ಸಿರಿಯ ಹಾಗೂ ಯೆಮೆನ್ ಸಂಘರ್ಷಗಳಲ್ಲಿ ಉಭಯ ದೇಶಗಳು ಪರಸ್ಪರ ಎದುರಾಳಿ ಗುಂಪುಗಳನ್ನು ಬೆಂಬಲಿಸುತ್ತಿರುವುದರಿಂದ ಅವುಗಳ ಸಂಬಂಧ ಇನ್ನಷ್ಟು ಹದಗೆಟ್ಟಿದೆ.
ಪವಿತ್ರ ಮಕ್ಕಾ ಯಾತ್ರೆಗೆ ಆಗಮಿಸಲಿರುವ ತನ್ನ 60 ಸಾವಿರಕ್ಕೂ ಅಧಿಕ ಯಾತ್ರಿಕರಿಗೆ ‘ಭದ್ರತೆ ಹಾಗೂ ಗೌರವ’ವನ್ನು ನೀಡಬೇಕೆಂಬ ಇರಾನಿನ ಬೇಡಿಕೆಗಳಿಗೆ ಪ್ರತಿಕ್ರಿಯಿಸಲು ಸೌದಿ ವಿಫಲವಾಗಿರುವುದರಿಂದ ದುರದೃಷ್ಟವಶಾತ್, ಇರಾನಿ ಯಾತ್ರಿಕರಿಗೆ ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಹಜ್ ಯಾತ್ರೆಯಲ್ಲಿ ಭಾಗವಹಿಸಲು ಸಾಧ್ಯವಾಗದು ಅಲಿ ಜನ್ನತಿ
ಇರಾನ್‌ನ ಸಂಸ್ಕೃತಿ ಸಚಿವ
ಸ್ವಿಸ್ ರಾಯಭಾರಿ ಕಚೇರಿ ಮೂಲಕ ಇರಾನಿ ಹಜ್ ಯಾತ್ರಿಕರಿಗೆ ವೀಸಾ: ಸೌದಿ
ಈ ಮಧ್ಯೆ ಸೌದಿಯ ಹಜ್ ಸಚಿವಾಲಯವು ಹೇಳಿಕೆಯೊಂದನ್ನು ನೀಡಿ, ಟೆಹರಾನ್‌ನಲ್ಲಿರುವ ಸ್ವಿಸ್ ರಾಯಭಾರಿ ಕಚೇರಿಯ ಮೂಲಕ ಇರಾನಿ ಪ್ರಜೆಗಳಿಗೆ ಹಜ್‌ವೀಸಾದ ವ್ಯವಸ್ಥೆಯನ್ನು ಮಾಡುವುದಾಗಿ ತಿಳಿಸಿದೆ. ಕಳೆದ ಜನವರಿಯಲ್ಲಿ ಉಭಯದೇಶಗಳ ಬಾಂಧವ್ಯಗಳಲ್ಲಿ ಬಿರುಕುಬಿಟ್ಟ ಬಳಿಕ, ಸ್ವಿಜರ್‌ಲ್ಯಾಂಡ್ ಇರಾನ್‌ನಲ್ಲಿ ಸೌದಿ ಹಿತಾಸಕ್ತಿಗಳ ಉಸ್ತುವಾರಿ ನೋಡಿಕೊಳ್ಳುತ್ತಿದೆ.







