ಹಾಸನ: ಅರ್ಧದಲ್ಲೇ ಮೊಟಕುಗೊಂಡ ಛಲವಾದಿ ಮಹಾಸಭೆ
ಚುನಾವಣೆ ನಡೆಸಿ ಅಧ್ಯಕ್ಷರ ಆಯ್ಕೆಗೆ ಸದಸ್ಯರ ಆಗ್ರಹ
.jpg)
ಹಾಸನ, ಮೇ 29: ಚುನಾವಣೆ ನಡೆಸಿ ಅಧ್ಯಕ್ಷರ ಆಯ್ಕೆ ಮಾಡುವಂತೆ ನೆರೆದಿದ್ದ ಸದಸ್ಯರು ಆಗ್ರಹಿಸಿ ಘೋಷಣೆ ಕೂಗುವ ಮೂಲಕ ಛಲವಾದಿ ಮಹಾಸಭೆಯನ್ನು ಮೊಟಕುಗೊಳಿಸಿದ ಪ್ರಸಂಗ ರವಿವಾರ ಮಧ್ಯಾಹ್ನ ನಡೆಯಿತು.
ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಛಲವಾದಿ ಮಹಾಸಭಾ ಸರ್ವಸದಸ್ಯರ ವಾರ್ಷಿಕ ಸಭೆ ಪ್ರಾರಂವಾಗುವ ಮೊದಲೇ ಗೊಂದಲದ ಮಾತುಗಳು ಕೇಳಿ ಬಂದಿತು. ಈ ನಡುವೆಯೇ ಸಭೆಯನ್ನು ಉದ್ಘಾಟಿಸಿ ಹಾಗೂ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ಸಭೆ ನಡೆಸಲು ಮುಂದಾದರು.
ವರ್ಷದ ಅಜೆಂಡವನ್ನು ಓದಲು ಪ್ರಾರಂಭಿಸಬೇಕು ಅಷ್ಟರಲ್ಲೆ ನೂರಾರು ಜನ ಸದಸ್ಯರು ವಾಗ್ದಾಳಿ ನಡೆಸಿದರು. ಮೊದಲು ರಾಜ್ಯಾಧ್ಯಕ್ಷರಾಗಿದ್ದ ಶಿವರಾಂ ಪರ ಧ್ವನಿ ಕೇಳಿ ಬಂದಿತು. ರಾಜ್ಯಾಧ್ಯಕ್ಷರ ಆಯ್ಕೆಯಲ್ಲಿ ಕಳೆದ ಹಲವಾರು ದಿನಗಳಿಂದ ಶಿವರಾಮ್ ಹಾಗೂ ಕುಮಾರ್ ಅವರ ನಡುವೆ ಇದ್ದ ಜಟಾಪಟಿ ಇಂದು ನಡೆದ ಸರ್ವ ಸದಸ್ಯರ ಸಭೆಯಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿತ್ತು. ರಾಜ್ಯಧ್ಯಕ್ಷ ಕುಮಾರ್ ಅವರ ವಿರುದ್ಧ ಘೋಷಣೆ ಕೂಗಿದ ಸದಸ್ಯರು ರಾಜೀನಾಮೆಗೆ ಅಗ್ರಹಿಸಿದರು.
ನ್ಯಾಯಯುತ ರೀತಿಯಲ್ಲಿ ಚುನಾವಣೆ ನಡೆಸಿ ಛಲವಾದಿ ಅಧ್ಯಕ್ಷರ ಆಯ್ಕೆ ಆಗಬೇಕು ಎಂದು ಶಿವರಾಂ ಪರ ಘೋಷಣೆ ಕೇಳಿ ಬಂದಿತು. ಗಲಾಟೆ ನಡುವೆಯು ಅಜೆಂಡವನ್ನು ಓದುತ್ತಿದ್ದರು. ಈ ವೇಳೆ ಮಧ್ಯ ಪ್ರವೇಶ ಮಾಡಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಶಾಂತಿ ಕಾಪಾಡಲು ಹರಸಾಹಸ ಮಾಡಬೇಕಾಯಿತು.
ಚಲನಚಿತ್ರ ನಟ, ಮಾಜಿ ಐಎಎಸ್ ಅಧಿಕಾರಿ ಹಾಗೂ ಛಲವಾದಿ ರಾಜ್ಯಾಧ್ಯಕ್ಷರಾಗಿದ್ದ ಶಿವರಾಂ ಮಾತನಾಡಿ, ಜಿಲ್ಲಾ ನೋಂದಣಿ ಅಧಿಕಾರಿಗಳು ಆದೇಶ ಕೊಟ್ಟಿದ್ದಾರೆ. ಚುನಾವಣೆ ನಡೆಸಲು 90 ದಿವಸಗಳು ಇರುತ್ತದೆ. ಅಷ್ಟರೊಳಗೆ ಸರ್ವಸದಸ್ಯರ ಸಭೆ ಕರೆದು ಹೊಸ ಕಾರ್ಯಕಾರಿ ಮಂಡಲಿ ಬರಬೇಕು ಎಂದರು. ನಿಮ್ಮ ಬೇಡಿಕೆಯಂತೆ ನ್ಯಾಯ ರೀತಿಯಲ್ಲಿ ಚುನಾವಣೆ ನಡೆಯಬೇಕು ಎಂದರು. ಸರ್ವಸದಸ್ಯರ ಸಭೆಯೊಳಗೆ ಚುನಾವಣೆ ನಡೆಸಲು ಮುಂದಿನ ದಿನಾಂಕ ನಿಗದಿಪಡಿಸಬೇಕಾಗಿದೆ ಎಂದು ಹೇಳಿದರು.
ಛಲವಾದಿ ಮಹಾಸಭಾದ ರಾಜ್ಯಾಧ್ಯಕ್ಷ ಕುಮಾರ್ ಮಾತನಾಡಿ, ಚುನಾವಣೆ ನಡೆಸಲು ಯಾವ ಸೂಚನೆ ಬಂದಿಲ್ಲ. ಆದ್ದರಿಂದ ಇನ್ನು 3 ವರ್ಷ ನಾನೇ ಅಧ್ಯಕ್ಷನಾಗಿ ಮುಂದುವರೆಯವ ಬಗ್ಗೆ ತಿಳಿಸಿದರು.
ಇದೆ ವೇಳೆ ಛಲವಾದಿ ಮಹಾಸಭಾದ ಉಪಾಧ್ಯಕ್ಷ ಸಂಪತ್ ಕುಮಾರ್, ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ, ಶ್ರೀನಿವಾಸ್, ವೀರದ್ರಪ್ಪ, ಜಿಲ್ಲಾಧ್ಯಕ್ಷ ಪುಟ್ಟರಾಜ್ ಇತರರು ಇದ್ದರು.







