ಸ್ವಿಸ್: ವಿಶ್ವದ ಅತಿ ಉದ್ದದ ರೈಲು ಸುರಂಗ ಮಾರ್ಗ ಜೂ. 1ರಂದು ಅನಾವರಣ

ಸ್ವೀಡನ್, ಮೇ 19: ಜಗತ್ತಿನ ಅತಿ ಉದ್ದದ ಹಾಗೂ ಅಳವಾದ ರೈಲ್ವೆ ಸುರಂಗ ಮಾರ್ಗವು ಜೂನ್ 1ರಂದು ಅನಾವರಣಗೊಳ್ಳಲಿದೆ. ಅಲ್ಪ್ಸ್ ಪರ್ವತ ಶ್ರೇಣಿಯನ್ನು ಕೊರೆದು ನಿರ್ಮಿಸಲಾದ ಈ ಬೃಹತ್ ಸುರಂಗ ರೈಲು ಮಾರ್ಗವು ಯುರೋಪ್‌ನ ವಿವಿಧ ದೇಶಗಳ ನಡುವಿನ ಪ್ರಯಾಣದ ಸಮಯವನ್ನು ಗಣನೀಯವಾಗಿ ಕಡಿಮೆಗೊಳಿಸಲಿದೆ.
ಸ್ವಿಟ್ಜರ್‌ಲ್ಯಾಂಡ್‌ನ ಅಲ್ಪ್ಸ್‌ಪರ್ವತ ಶ್ರೇಣಿಯಲ್ಲಿ ನಿರ್ಮಾಣಗೊಂಡಿರುವ ಗೊಟ್ಟಾರ್ಡ್ ಬೇಸ್ ಟನೆಲ್(ಜಿಬಿಟಿ), ನೂರಾರು ಎಂಜಿನಿಯರ್ ಹಾಗೂ ಕಾರ್ಮಿಕರ 17 ವರ್ಷಗಳ ಸತತ ಪರಿಶ್ರಮದ ಫಲವಾಗಿದೆ.7500 ಅಡಿ ಅಳದ ಬಲಿಷ್ಠವಾದ ಬಂಡೆಗಲ್ಲುಗಳನ್ನು ಕಡಿದು 57 ಕಿ.ಮೀ.ವಿಸ್ತೀರ್ಣದ ಈ ಸುರಂಗವನ್ನು ನಿರ್ಮಿಸಲಾಗಿದೆ. ಸುಮಾರು 12 ಶತಕೋಟಿ ಡಾಲರ್ ವೆಚ್ಚದ ಈ ಬೃಹತ್ ಸುರಂಗ ಮಾರ್ಗ ಯೋಜನೆಯ ಕಾಮಗಾರಿಯ ವೇಳೆ 8 ಮಂದಿ ಕಾರ್ಮಿಕರು ಪ್ರಾಣಕಳೆದುಕೊಂಡಿದ್ದಾರೆ.
ಜೂನ್ 1ರಂದು ಜಿಬಿಟಿ ಸುರಂಗ ಮಾರ್ಗದ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಜರ್ಮನಿಯ ಚಾನ್ಸಲರ್ ಆ್ಯಂಜೆಲಾ ಮಾರ್ಕೆಲ್, ಫ್ರೆಂಚ್ ಅಧ್ಯಕ್ಷ ಫ್ರಾಂಕಾಯಿಸ್ ಹೊಲಾಂಡ್ ಸೇರಿದಂತೆ ನೆರೆಹೊರೆಯ ದೇಶಗಳ ಮುಖ್ಯಸ್ಥರು ಭಾಗವಹಿಸಲಿದ್ದಾರೆ.
ಈ ರೈಲು ಸುರಂಗರ್ಮಾಗವು ಡಿಸೆಂಬರ್‌ನಲ್ಲಿ ಪ್ರಯಾಣಿಕರ ಸೇವೆಗೆ ಮುಕ್ತವಾಗಲಿದೆ. ಈ ಸುರಂಗ ಮಾರ್ಗದಿಂದಾಗಿ ಜರ್ಮನಿಯ ಮ್ಯೂನಿಚ್‌ನಿಂದ ಫ್ರಾನ್ಸ್‌ನ ಮಿಲಾನ್‌ಗೆ ಕೇವಲ 2 ತಾಸು 40 ನಿಮಿಷಗಳಲ್ಲಿ ತಲುಪಬಹುದಾಗಿದೆ.





