ಎಸ್ಸಿ/ಎಸ್ಟಿ ವರ್ಗಕ್ಕೆ ದಲಿತ ಕ್ರೈಸ್ತರು, ಮೀನುಗಾರರ ಸೇರ್ಪಡೆಗೆ ಕರುಣಾ ಮನವಿ
ಚೆನ್ನೈ,ಮೇ 29: ದಲಿತ ಕ್ರೈಸ್ತರು ಮತ್ತು ಮೀನುಗಾರರನ್ನು ಪರಿಶಿಷ್ಟ ಪಂಗಡಗಳ ವರ್ಗಕ್ಕೆ ಸೇರಿಸುವಂತೆ ಡಿಎಂಕೆ ಅಧ್ಯಕ್ಷ ಎಂ.ಕರುಣಾನಿಧಿ ಅವರು ರವಿವಾರ ಮುಖ್ಯಮಂತ್ರಿ ನರೇಂದ್ರ ಮೋದಿಯವರನ್ನು ಕೋರಿಕೊಂಡಿದ್ದಾರೆ.
ತಮಿಳುನಾಡಿನಲ್ಲಿರುವ ನರಿಕುರವರ ಸಮುದಾಯವನ್ನು ಎಸ್ಸಿ ಪಟ್ಟಿಗೆ ಸೇರಿಸುವ ಕೇಂದ್ರ ಸಂಪುಟದ ಇತ್ತೀಚಿನ ನಿರ್ಧಾರಕ್ಕೆ ತಾನು ಆಭಾರಿಯಾಗಿದ್ದೇನೆ ಎಂದ ಅವರು,ಇದಕ್ಕಾಗಿ ಡಿಎಂಕೆ ಸುದೀರ್ಘ ಕಾಲದಿಂದ ಒತ್ತಾಯಿಸುತ್ತಿತ್ತು ಎಂದರು.
ಎಸ್ಸಿ/ಎಸ್ಟಿ ವರ್ಗಕ್ಕೆ ದಲಿತ ಕ್ರೈಸ್ತರು,ಮೀನುಗಾರರ ಸೇರ್ಪಡೆಗೆ ತನ್ನ ಬೇಡಿಕೆ ಕುರಿತಂತೆ ಅವರು, ಎಸ್ಸಿ/ಎಸ್ಟಿಗಳು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಾಗ ಅವರು ಆವರೆಗೂ ಅನುಭವಿಸುತ್ತಿದ್ದ ಎಲ್ಲ ಮೀಸಲು ಸೌಲಭ್ಯಗಳಿಂದ ವಂಚಿತರಾಗುತ್ತಾರೆ. ಮತಾಂತರದ ನಂತರವೂ ಅವರನ್ನು ಎಸ್‌ಸಿ/ಎಸ್‌ಟಿಗಳೆಂದು ಪರಿಗಣಿಸಬೇಕು ಮತ್ತು ಎಲ್ಲ ಮೀಸಲು ಸೌಲಭ್ಯಗಳನ್ನು ಒದಗಿಸಬೇಕು ಎನ್ನುವುದು ಡಿಎಂಕೆಯ ಆಗ್ರಹವಾಗಿದೆ ಎಂದರು. ಸಿಖ್ಖ ಕ್ರೈಸ್ತರು ಮತ್ತು ಬೌದ್ಧ ಕ್ರೈಸ್ತರು ಈ ಸೌಲಭ್ಯಗಳನ್ನು ಪಡೆದಿರುವ ಪೂರ್ವ ನಿದರ್ಶನಗಳಿವೆ ಎಂದರು.
ಸಮುದ್ರ ಬುಡಕಟ್ಟು ಜನಾಂಗವಾಗಿ ಮೀನುಗಾರರನ್ನು ಎಸ್ಟಿ ವರ್ಗಕ್ಕೆ ಸೇರಿಸಬೇಕು ಎಂದ ಅವರು,ಮೀನುಗಾರರ ಭೌಗೋಳಿಕ ಸ್ವರೂಪದಿಂದಾಗಿ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಅವರಿಗೂ ಪರಿಶಿಷ್ಟ ವರ್ಗಗಳಿಗೂ ಯಾವುದೇ ವ್ಯತ್ಯಾಸವಿಲ್ಲ ಎಂದರು.





