ಸನ್‌ರೈಸರ್ಸ್ ಹೈದರಾಬಾದ್ ಐಪಿಎಲ್ ಚಾಂಪಿಯನ್

ಬೆಂಗಳೂರು, ಮೇ 29: ಡೇವಿಡ್ ವಾರ್ನರ್ ಅವರ ಸಮರ್ಥ ನಾಯಕತ್ವ ಹಾಗೂ ಬೆನ್ ಕಟ್ಟಿಂಗ್ ಆಲ್‌ರೌಂಡ್ ಆಟದ ನೆರವಿನಿಂದ ಆತಿಥೇಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 8 ರನ್ ಸೋಲಿಸಿದ ಸನ್‌ರೈಸರ್ಸ್ ಹೈದರಾಬಾದ್ ತಂಡ 9ನೆ ಆವೃತ್ತಿಯ ಐಪಿಎಲ್‌ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ರವಿವಾರ ಇಲ್ಲಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಹೈ-ಸ್ಕೋರ್ ಪಂದ್ಯದಲ್ಲಿ ಗೆಲುವಿಗೆ 209 ರನ್ ಗುರಿ ಪಡೆದಿದ್ದ ಆರ್‌ಸಿಬಿ ತಂಡ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 200 ರನ್ ಗಳಿಸಿತು. ಚೊಚ್ಚಲ ಐಪಿಎಲ್ ಟ್ರೋಫಿ ಜಯಿಸಿದ ಹೈದರಾಬಾದ್ 20 ಕೋಟಿ.ರೂ. ಬಹುಮಾನ ಜಯಿಸಿದರೆ, ಮೂರನೆ ಬಾರಿ ರನ್ನರ್-ಅಪ್ ಪ್ರಶಸ್ತಿ ಪಡೆದ ಬೆಂಗಳೂರು ತಂಡ 11 ಕೋಟಿ ರೂ. ಜೇಬಿಗಿಳಿಸಿತು.
ಕಠಿಣ ಸವಾಲು ಪಡೆದಿದ್ದ ಅರ್‌ಸಿಬಿಗೆ ಕ್ರಿಸ್ ಗೇಲ್ ಹಾಗೂ ನಾಯಕ ವಿರಾಟ್ ಕೊಹ್ಲಿ ಭದ್ರಬುನಾದಿ ಹಾಕಿಕೊಟ್ಟರು. ಈ ಜೋಡಿ 10.3 ಓವರ್‌ಗಳಲ್ಲಿ 114 ರನ್ ಗಳಿಸಿತು. 25 ಎಸೆತಗಳಲ್ಲಿ 3 ಬೌಂಡರಿ, 5 ಸಿಕ್ಸರ್ ನೆರವಿನಿಂದ ಅರ್ಧಶತಕ ಸಿಡಿಸಿದ್ದ ಗೇಲ್ ಆರ್‌ಸಿಬಿಗೆ ಬಿರುಸಿನ ಆರಂಭವನ್ನೇ ನೀಡಿದ್ದರು. 76 ರನ್(38 ಎಸೆತ, 4 ಬೌಂಡರಿ, 8 ಸಿಕ್ಸರ್)ಗಳಿಸಿದ್ದ ಗೇಲ್‌ಗೆ ಆಲ್‌ರೌಂಡರ್ ಕಟ್ಟಿಂಗ್ ಕಂಟಕವಾದರು.
ಗೇಲ್ ನಿರ್ಗಮನದ ಬೆನ್ನಿಗೆ ಡಿವಿಲಿಯರ್ಸ್(5) ಔಟಾದರು. 32 ಎಸೆತಗಳಲ್ಲಿ 50 ರನ್ ಗಳಿಸಿದ ಕೊಹ್ಲಿ ಉತ್ತಮ ಫಾರ್ಮ್ ಮುಂದುವರಿಸಿದರು. ಆದರೆ, ಕೊಹ್ಲಿ ರನ್ ಕೊಯ್ಲಿಗೆ ಸ್ರಾನ್ ಕಡಿವಾಣ ತೊಡಿಸಿದರು. ರಾಹುಲ್(11) ಹಾಗೂ ಶೇನ್ ವ್ಯಾಟ್ಸನ್(11) ನಿರಾಸೆಗೊಳಿಸಿದರು. 2009 ಹಾಗೂ 2011ರಲ್ಲೂ ರನ್ನರ್‌ಅಪ್‌ಗೆ ತೃಪ್ತಿಪಟ್ಟುಕೊಂಡಿದ್ದ ಬೆಂಗಳೂರು ಈವರ್ಷವೂ ಪ್ರಶಸ್ತಿ ವಂಚಿತವಾಯಿತು.
ಹೈದರಾಬಾದ್‌ನ ಪರ ಬೌಲಿಂಗ್‌ನಲ್ಲಿ ಕಟ್ಟಿಂಗ್(2-35) ಯಶಸ್ವಿ ಬೌಲರ್ ಎನಿಸಿಕೊಂಡರು.
ಹೈದರಾಬಾದ್ 208/7: ಟಾಸ್ ಜಯಿಸಿದ ಹೈದರಾಬಾದ್ ತಂಡದ ನಾಯಕ ವಾರ್ನರ್ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಈ ವರ್ಷ 9ನೆ ಅರ್ಧಶತಕ ಬಾರಿಸಿದ ವಾರ್ನರ್(69ರನ್, 38 ಎಸೆತ) ಹಾಗೂ ಆಲ್‌ರೌಂಡರ್ ಬೆನ್ ಕಟ್ಟಿಂಗ್(ಔಟಾಗದೆ 39, 15 ಎಸೆತ, 3 ಬೌಂಡರಿ, 4 ಸಿಕ್ಸರ್)ತಂಡ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 208 ರನ್ ಗಳಿಸಲು ನೆರವಾದರು.
ಇನಿಂಗ್ಸ್ ಆರಂಭಿಸಿದ ವಾರ್ನರ್(69ರನ್, 38 ಎಸೆತ, 8 ಬೌಂಡರಿ, 3 ಸಿಕ್ಸರ್) ಹಾಗೂ ಶಿಖರ್ ಧವನ್(28) 6.4 ಓವರ್‌ಗಳಲ್ಲಿ 63 ರನ್ ಸೇರಿಸಿ ಎಚ್ಚರಿಕೆಯ ಆರಂಭ ನೀಡಿದರು.
ವಾರ್ನರ್ ಕೇವಲ 24 ಎಸೆತಗಳಲ್ಲಿ 5 ಬೌಂಡರಿ, 3 ಸಿಕ್ಸರ್‌ಗಳ ಸಹಾಯದಿಂದ ಈ ವರ್ಷ 9ನೆ ಅರ್ಧಶತಕ ಬಾರಿಸಿದರು. ಐಪಿಎಲ್ ಇತಿಹಾಸದಲ್ಲಿ 800ಕ್ಕೂ ಅಧಿಕ ರನ್(848) ಗಳಿಸಿದ ಎರಡನೆ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಯುವರಾಜ್ ಸಿಂಗ್(38, 23 ಎಸೆತ, 4 ಬೌಂಡರಿ, 2 ಸಿಕ್ಸರ್) ಹಾಗೂ ದೀಪಕ್ ಹೂಡ(3) ನಾಲ್ಕನೆ ವಿಕೆಟ್‌ಗೆ 22 ರನ್ ಸೇರಿಸಿದ್ದರು. ಈ ಇಬ್ಬರು ಆಟಗಾರರು ಬೆನ್ನಿ ಬೆನ್ನಿಗೆ ಔಟಾದರು. ಆಗ ಸನ್‌ರೈಸರ್ಸ್ ಸ್ಕೋರ್ 5 ವಿಕೆಟ್ ನಷ್ಟಕ್ಕೆ 148 ರನ್.
ವ್ಯಾಟ್ಸನ್ ಎಸೆದ ಇನಿಂಗ್ಸ್‌ನ ಅಂತಿಮ ಓವರ್‌ನಲ್ಲಿ 3 ಸಿಕ್ಸರ್ ಹಾಗೂ 1 ಬೌಂಡರಿ ಸಹಿತ 24 ರನ್ ಗಳಿಸಿದ ಆಲ್‌ರೌಂಡರ್ ಬೆನ್ ಕಟ್ಟಿಂಗ್ ಹೈದರಾಬಾದ್ ಸ್ಕೋರನ್ನು 200ರ ಗಡಿ ದಾಟಿಸಿದರು. ಅಂತಿಮ 3 ಓವರ್‌ಗಳಲ್ಲಿ 57 ರನ್ ಕಲೆ ಹಾಕಿದ ಹೈದರಾಬಾದ್ 7 ವಿಕೆಟ್ ನಷ್ಟಕ್ಕೆ 208 ರನ್ ಗಳಿಸಲು ಶಕ್ತವಾಯಿತು.
ಬೆಂಗಳೂರಿನ ಬೌಲಿಂಗ್ ವಿಭಾಗದಲ್ಲಿ ಸ್ಥಳೀಯ ಆಟಗಾರ ಶ್ರೀನಾಥ್ ಅರವಿಂದ್(2-30), ಇಂಗ್ಲೆಂಡ್‌ನ ಜೋರ್ಡನ್(3-45) ಯಶಸ್ವಿ ಬೌಲರ್ ಎನಿಸಿಕೊಂಡರು. ಶೇನ್ ವ್ಯಾಟ್ಸನ್ 61 ರನ್ ಬಿಟ್ಟುಕೊಟ್ಟು ದುಬಾರಿ ಬೌಲರ್ ಎನಿಸಿಕೊಂಡರು.
ಕಳೆದ 2ನೆ ಕ್ವಾಲಿಫೈಯರ್ ಪಂದ್ಯದಲ್ಲಿ ಗಾಯದ ಸಮಸ್ಯೆಯಿಂದಾಗಿ ತಂಡದಿಂದ ಹೊರಗುಳಿದಿದ್ದ ಬಾಂಗ್ಲಾದೇಶದ ವೇಗದ ಬೌಲರ್ ಮುಸ್ತಫಿಝುರ್ರಹ್ಮಾನ್‌ರನ್ನು ಆಡುವ 11ರ ಬಳಗಕ್ಕೆ ವಾಪಸಾದರು. ಇನ್ನುಳಿದಂತೆ ತಂಡದಲ್ಲಿ ಯಾವುದೇ ದೊಡ್ಡ ಬದಲಾವಣೆಯಾಗಿಲ್ಲ.
ಸ್ಕೋರ್ ವಿವರ
ಸನ್‌ರೈಸರ್ಸ್ ಹೈದರಾಬಾದ್
20 ಓವರ್‌ಗಳಲ್ಲಿ 208/7
ವಾರ್ನರ್ ಸಿ ಅಬ್ದುಲ್ಲಾ ಬಿ ಅರವಿಂದ್ 69
ಧವನ್ ಸಿ ಜೋರ್ಡನ್ ಬಿ ಚಾಹಲ್ 28
ಹೆನ್ರಿಕ್ಸ್ ಸಿ ಚಾಹಲ್ ಬಿ ಜೋರ್ಡನ್ 04
ಯುವರಾಜ್ ಸಿ ವ್ಯಾಟ್ಸನ್ ಬಿ ಜೋರ್ಡನ್ 38
ಹೂಡ ಸಿ ಕೊಹ್ಲಿ ಬಿ ಅರವಿಂದ್ 03
ಕಟ್ಟಿಂಗ್ ಔಟಾಗದೆ 39
ನಮನ್ ಓಜಾ ರನೌಟ್ 07
ಬಿಪುಲ್ ಸಿ ಚಾಹಲ್ ಬಿ ಜೋರ್ಡನ್ 05
ಭುವನೇಶ್ವರ್ ಔಟಾಗದೆ 01
ಇತರ 14
ವಿಕೆಟ್ ಪತನ: 1-63, 2-97, 3-125, 4-147, 5-148, 6-158,7-174
ಬೌಲಿಂಗ್ ವಿವರ:
ಶ್ರೀನಾಥ್ ಅರವಿಂದ್ 4-0-30-2
ಕ್ರಿಸ್ ಗೇಲ್ 3-0-24-0
ಶೇನ್ ವ್ಯಾಟ್ಸನ್ 4-0-61-0
ಯುಝ್ವೇಂದ್ರ ಚಾಹಲ್ 4-0-35-1
ಇಕ್ಬಾಲ್ ಅಬ್ದುಲ್ಲಾ 1-0-10-0
ಕ್ರಿಸ್ ಜೋರ್ಡನ್ 4-0-45-3
ರಾಯಲ್ ಚಾಲೆಂಜರ್ಸ್ ಬೆಂಗಳೂರು
20 ಓವರ್‌ಗಳಲ್ಲಿ 200/7
ಕ್ರಿಸ್‌ಗೇಲ್ ಸಿ ಬಿಪುಲ್ ಬಿ ಕಟ್ಟಿಂಗ್ 76
ವಿರಾಟ್ ಕೊಹ್ಲಿ ಬಿ ಸ್ರಾನ್ 54
ಡಿವಿಲಿಯರ್ಸ್ ಸಿ ಹೆನ್ರಿಕ್ಸ್ ಬಿ ಬಿಪುಲ್ 05
ರಾಹುಲ್ ಬಿ ಕಟ್ಟಿಂಗ್ 11
ಶೇನ್ ವ್ಯಾಟ್ಸನ್ ಸಿ ಹೆನ್ರಿಕ್ಸ್ ಬಿ ರಹ್ಮಾನ್ 11
ಸಚಿನ್ ಬೇಬಿ ಔಟಾಗದೆ 18
ಬಿನ್ನಿ ರನೌಟ್ 09
ಜೋರ್ಡನ್ ರನೌಟ್ 03
ಅಬ್ದುಲ್ಲಾ ಔಟಾಗದೆ 04
ಇತರ 09
ವಿಕೆಟ್ ಪತನ: 1-114, 2-140, 3-148, 4-160, 5-164, 6-180,7-194 ಬೌಲಿಂಗ್ ವಿವರ:
ಭುವನೇಶ್ವರ ಕುಮಾರ್ 4-0-25-0
ಬರಿಂದರ್ ಸ್ರಾನ್ 3-0-41-1
ಕಟ್ಟಿಂಗ್ 4-0-35-2
ಮುಸ್ತಫಿಝರ್ರಹ್ಮಾನ್ 4-0-37-1
ಹೆನ್ರಿಕ್ಸ್ 3-0-40-0
ಬಿಪುಲ್ ಶರ್ಮ 2-0-17-1







