ಭಗತ್‌ಸಿಂಗ್ ಮೊಮ್ಮಗ ಅಪಘಾತಕ್ಕೆ ಬಲಿ
ಶಿಮ್ಲಾ(ಹಿ.ಪ್ರ),ಮೇ 29: ಸ್ವಾತಂತ್ರ ಹೋರಾಟಗಾರ ಭಗತ್‌ಸಿಂಗ್ ಅವರ ಅಣ್ಣನ ಮೊಮ್ಮಗ ಅಭಿತೇಜ್ ಸಿಂಗ್ ಸಂಧು(27) ಅವರು ಶನಿವಾರ ಸಂಜೆ ಇಲ್ಲಿಂದ 130 ಕಿ.ಮೀ.ದೂರದಲ್ಲಿರುವ ರಾಮಪುರದಲ್ಲಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಸಂಧು ಇನ್ನೋರ್ವ ವ್ಯಕ್ತಿಯೊಂದಿಗೆ ಬೈಕ್‌ನಲ್ಲಿ ಕಿನ್ನಾವುರ್ ಜಿಲ್ಲೆಯ ಕಲ್ಪಾದಿಂದ ಬರುತ್ತಿದ್ದಾಗ ಅದು ಪಲ್ಟಿಯಾಗಿ ಸಾವನ್ನಪ್ಪಿದ್ದಾರೆ. ಸಹಸವಾರ ಗಾಯಗೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
.......................
ಪಂಜಾಬ್ ಮಾಜಿ ಮುಖ್ಯಮಂತ್ರಿಯ
ಮೊಮ್ಮಗನ ನಿಗೂಢ ಸಾವು
ಚಂಡಿಗಡ, ಮೇ 29: ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಬಿಯಂತ್ ಸಿಂಗ್‌ರ ಮೊಮ್ಮಗ ಹರ್ಕಿರಾತ್ ಸಿಂಗ್, ಇಂದು ಅವರ ನಿವಾಸದಲ್ಲಿ ಗುಂಡಿನ ಗಾಯದೊಂದಿಗೆ ನಿಗೂಢ ರೀತಿಯಲ್ಲಿ ಸಾವಿಗೀಡಾಗಿದ್ದಾರೆ.
ಹರ್ಕಿರಾತ್‌ರ(40) ತಲೆಗೆ ಗುಂಡಿನ ಗಾಯವಾಗಿದೆ. ಅವರಿಗೆ ಗುಂಡಿನ ಗಾಯ ಹೇಗಾಯಿತೆಂದು ತಕ್ಷಣಕ್ಕೆ ತಿಳಿದುಬಂದಿಲ್ಲ. ತಾವು ಅವರ ಹೆತ್ತವರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದೇವೆಂದು ಸೆಕ್ಟರ್ 3 ಪೊಲೀಸ್ ಠಾಣೆಯ ಮುಖ್ಯಾಧಿಕಾರಿ ನೀರಜ್ ಸರ್ನಾ ಪಿಟಿಐಗೆ ತಿಳಿಸಿದ್ದಾರೆ.
ಲುಧಿಯಾನ ಜಿಲ್ಲೆಯ ಗ್ರಾಮವೊಂದರ ಸರಪಂಚರಾಗಿದ್ದ ಹರ್ಕಿರಾತ್‌ರನ್ನು ಕುಟುಂಬದ ಸದಸ್ಯರು ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನೆಯ ಸ್ನಾತಕೋತ್ತರ ಸಂಸ್ಥೆಗೆ(ಪಿಜಿಐಎಂಇಆರ್) ಕೊಂಡೊಯ್ದರಾದರೂ, ಅವರು ಅಲ್ಲಿ ಕೊನೆಯುಸಿರೆಳೆದರೆಂದು ಸರ್ನಾ ಹೇಳಿದ್ದಾರೆ.
ಅದೊಂದು ಆತ್ಮಹತ್ಯೆಯ ಪ್ರಕರಣವೆಂಬ ಶಂಕೆಯಿದೆಯೇ ಎಂಬ ಪ್ರಶ್ನೆಗೆ, ತನಿಖೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ತಾವು ಯಾವುದೇ ಸಾಧ್ಯತೆಯನ್ನು ತಳ್ಳಿ ಹಾಕುವುದಿಲ್ಲವೆಂದು ಅವರುತ್ತರಿಸಿದ್ದಾರೆ.