ಉತ್ತರಪ್ರದೇಶ: ಮೂವರಿಂದ ಬಾಲಕಿಯ ಅಪಹರಣ-ಅತ್ಯಾಚಾರ-ಕೊಲೆ
ಬಹ್ರೈಚ್, ಮೇ 29: ಉತ್ತರಪ್ರದೇಶದ ಬಹ್ರೈಚ್‌ನ ನಾನ್‌ಪಾರ ಪ್ರದೇಶದಲ್ಲಿ ಮೂವರು ವ್ಯಕ್ತಿಗಳು ಹದಿಹರೆಯದ ಬಾಲಕಿಯೊಬ್ಬಳನ್ನು ಅಪಹರಿಸಿ, ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆ ಮಾಡಿದ್ದಾರೆಂದು ಪೊಲೀಸರಿಂದು ತಿಳಿಸಿದ್ದಾರೆ. ಆರೋಪಿಗಳು ಹುಡುಗಿಯ ಮೃತದೇಹವನ್ನು ಮರವೊಂದಕ್ಕೆ ನೇತಾಡಿಸಿದ್ದರೆನ್ನಲಾಗಿದೆ.
ಪ್ರಕರಣದ ಸಂಬಂಧ ಇಬ್ಬರನ್ನು ಬಂಧಿಸಲಾಗಿದ್ದು, ಮೂರನೆಯ ಆರೋಪಿ ತಲೆ ಮರೆಸಿಕೊಂಡಿದ್ದಾನೆ. ಕರ್ತವ್ಯ ನಿರ್ಲಕ್ಷದ ಆರೋಪದಲ್ಲಿ ನಾಲ್ವರು ಕಾನ್‌ಸ್ಟೆಬಲ್‌ಗಳನ್ನು ಕೂಡ ಅಮಾನತುಗೊಳಿಸಲಾಗಿದೆ.
ಹುಡುಗಿಯ ತಂದೆ ನೀಡಿದ ದೂರಿನನ್ವಯ ಆರೋಪಿಗಳಾದ ಇಮ್ರಾನ್, ಸರ್ವಜಿತ್ ಯಾದವ್ ಹಾಗೂ ಘನಶ್ಯಾಂ ವೌರ್ಯ ಎಂಬವರ ವಿರುದ್ಧ ಅಪಹರಣ, ಅತ್ಯಾಚಾರ ಹಾಗೂ ಕೊಲೆ ಆರೋಪಗಳಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಈ ಘಟನೆಯು ಶುಕ್ರವಾರ ಸಂಭವಿಸಿದ್ದು, 15ರ ಹರೆಯದ ಬಾಲಕಿ ತನ್ನ ಗ್ರಾಮದಿಂದ ಕಾಣೆಯಾಗಿದ್ದಳು. ಅವಳ ಮೃತದೇಹ ನಿನ್ನೆ ಗ್ರಾಮದ ಹೊರಗೆ ಪತ್ತೆಯಾಗಿತ್ತೆಂದು ಪೊಲೀಸರು ತಿಳಿಸಿದ್ದಾರೆ.
ಮೂವರು ಆರೋಪಿಗಳು ಈ ಮೊದಲೂ ತನ್ನ ಮಗಳನ್ನು ಅಪಹರಿಸಲು ಪ್ರಯತ್ನಿಸಿದ್ದರು. ಆದರೆ ಯಶಸ್ವಿಯಾಗಿರಲಿಲ್ಲವೆಂದು ಬಾಲಕಿಯ ತಂದೆ ಆರೋಪಿಸಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಅತ್ಯಾಚಾರ ನಡೆದಿದೆಯೇ ಎಂಬುದು ಆ ಬಳಿಕವಷ್ಟೇ ಖಚಿತವಾಗಲಿದೆಯೆಂದು ಪೊಲೀಸ್ ಅಧೀಕ್ಷಕ ಸಲಿಕ್ ರಾಮ್ ವರ್ಮ ಹೇಳಿದ್ದಾರೆ.





