ಐಪಿಎಲ್ ಬೆಟ್ಟಿಂಗ್‌ನಲ್ಲಿ ಪತ್ನಿಯನ್ನೇ ಪಣಕ್ಕಿಟ್ಟು ಕಳಕೊಂಡ ಭೂಪ
ಕಾನ್ಪುರ, ಮೇ 29: ಇದು ಆಧುನಿಕ ಮಹಾಭಾರತದ ಕಥೆ. ಮಹಾಭಾರತದಲ್ಲಿ ಪಗಡೆಯಾಟದಲ್ಲಿ ದ್ರೌಪದಿಯನ್ನೇ ಪಣಕ್ಕಿಟ್ಟು ಕಳೆದುಕೊಂಡ ಯುದಿಷ್ಠಿರನಂತೆ, ಇಲ್ಲಿನ ಗೋವಿಂದ ರಾಜನಗರ ಸಮೀಪದ ವ್ಯಕ್ತಿಯೊಬ್ಬ ಐಪಿಎಲ್ ಬೆಟ್ಟಿಂಗ್‌ನಲ್ಲಿ ಪತ್ನಿಯನ್ನೇ ಪಣಕ್ಕಿಟ್ಟು ಕಳೆದುಕೊಂಡಿದ್ದಾನೆ. ವ್ಯಕ್ತಿಯ ಜತೆಗೆ ಬಾಜಿ ಕಟ್ಟಿದ ವ್ಯಕ್ತಿ, ಈತನ ಪತ್ನಿಗೆ ಕಿರುಕುಳ ನೀಡಲು ಆರಂಭಿಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಬೆಟ್ಟಿಂಗ್ ಪತ್ನಿ ಇದೀಗ ಸಾಮಾಜಿಕ ಕಾರ್ಯಕರ್ತರ ನೆರವಿನೊಂದಿಗೆ ಪೊಲೀಸರಿಗೆ ಮೊರೆ ಹೋಗಿದ್ದಾಳೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು, ವ್ಯಕ್ತಿಗಾಗಿ ಹುಡುಕಾಟ ನಡೆಸಿದ್ದಾರೆ. ಶೇರು ವಹಿವಾಟಿನಲ್ಲಿ ಹಣ ಕಳೆದುಕೊಂಡ ಬಳಿಕ, ಐಪಿಎಲ್ ಬೆಟ್ಟಿಂಗ್‌ನಲ್ಲಿ ಪತ್ನಿಯನ್ನು ಪಣಕ್ಕಿಟ್ಟು ಆಕೆಯನ್ನೂ ಕಳೆದುಕೊಂಡಿದ್ದಾನೆ. ತಂದೆಯಿಂದ ಏಳು ಲಕ್ಷ ರೂಪಾಯಿ ಹಣ ತರುವಂತೆ ಒತ್ತಾಯಿಸಿ ಪ್ರತಿದಿನ ಕಿರುಕುಳ ನೀಡುತ್ತಿದ್ದ ಎಂದು ಪತ್ನಿ ಪೊಲೀಸರಿಗೆ ತಿಳಿಸಿದ್ದಾಗಿ ಗೋವಿಂದರಾಜನಗರ ಠಾಣಾಧಿಕಾರಿ ಅಜಯ್ ಪ್ರಕಾಶ್ ಶ್ರೀ ವಾಸ್ತವ ಹೇಳಿದ್ದಾರೆ.
ಇತ್ತೀಚೆಗೆ ಬೆಟ್ಟಿಂಗ್‌ನಲ್ಲಿ ಪತ್ನಿಯನ್ನು ಕಳೆದುಕೊಂಡ ಬಳಿಕ, ಗಂಡನ ಜತೆ ಬೆಟ್ ಕಟ್ಟಿದ್ದ ವ್ಯಕ್ತಿ ಮನೆಗೆ ಪದೇ ಪದೇ ಭೇಟಿ ನೀಡಿ, ಈಕೆಗೆ ಕಿರುಕುಳ ನೀಡಲಾರಂಭಿಸಿದ. ದೂರವಾಣಿ ಮೂಲಕವೂ ಕಿರುಕುಳ ನೀಡುತ್ತಿದ್ದ. ಅಪಾಯದ ಮುನ್ಸೂಚನೆ ಅರಿತ ಮಹಿಳೆ, ಗಂಡನ ವಿರುದ್ಧ ದೂರು ನೀಡಿದಳು.
ಐದು ವರ್ಷದ ಹಿಂದೆ ಇವರ ವಿವಾಹವಾಗಿತ್ತು. ಮೊದಲ ದಿನದಿಂದಲೇ ಗಂಡ ಕಿರುಕುಳ ನೀಡುತ್ತಿದ್ದ ಎಂದು ಬ್ಯೂಟಿಪಾರ್ಲರ್ ನಡೆಸುತ್ತಿರುವ ಈ ಮಹಿಳೆ ಆಪಾದಿಸಿದ್ದಾಳೆ. ಷೇರು ವಹಿವಾಟಿನಲ್ಲಿದ್ದ ಪತಿ ಮೊದಲ ದಿನವೇ ಎಲ್ಲ ಆಭರಣಗಳನ್ನು ನೀಡುವಂತೆ ಒತ್ತಾಯಿಸಿದ. ಕ್ರಮೇಣ ಕುಡಿತ ಹಾಗೂ ಜೂಜಿನ ಚಟ ಕೂಡಾ ಅಂಟಿಸಿಕೊಂಡ. ಎಲ್ಲ ಆಭರಣ ಹಾಗೂ ಗೃಹ ಬಳಕೆ ವಸ್ತುಗಳನ್ನು ಕೂಡಾ ಕಳೆದುಕೊಂಡ. ಐಪಿಎಲ್ ಬೆಟ್ಟಿಂಗ್‌ಗಾಗಿ ಮನೆಯನ್ನೂ ಮಾರಾಟ ಮಾಡಲು ನಿರ್ಧರಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ. ತನಿಖೆ ಪ್ರಗತಿಯಲ್ಲಿದೆ.





