15ರ ಬಾಲಕಿಯ ಸಾಮೂಹಿಕ ಅತ್ಯಾಚಾರ: ಹತ್ಯೆ ಮಾಡಿ ಮರಕ್ಕೆ ನೇತುಹಾಕಿದ ಕಾಮುಕರು
ಲಕ್ನೋ, ಮೇ 30: ಹದಿನೈದು ವರ್ಷದ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿ, ಆಕೆಯನ್ನು ಹತ್ಯೆ ಮಾಡಿ ಮರಕ್ಕೆ ನೇತುಹಾಕಿದ ಪೈಶಾಚಿಕ ಘಟನೆ ಉತ್ತರ ಪ್ರದೇಶದ ಬಹರೀಚ್ ಜಿಲ್ಲೆಯಲ್ಲಿ ನಡೆದಿದೆ. ಶುಕ್ರವಾರ ಈ ಬಾಲಕಿ ತನ್ನ ಮನೆಯಿಂದ ನಾಪತ್ತೆಯಾಗಿದ್ದಳು.
ಲಕ್ನೋದಿಂದ 160 ಕಿಲೋ ಮೀಟರ್ ದೂರದ ನನ್ಪಾರಾದಿಂದ ಅದೇ ಗ್ರಾಮದ ಮೂವರು ಪುರುಷರು ಬಾಲಕಿಯನ್ನು ಅಪಹರಿಸಿದ್ದು, ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾರೆ. ಬಳಿಕ ಇದು ಆತ್ಮಹತ್ಯೆ ಎಂದು ಬಿಂಬಿಸುವ ಸಲುವಾಗಿ ಮರಕ್ಕೆ ಶವವನ್ನು ನೇತುಹಾಕಿದ್ದಾರೆ ಎಂದು ಬಾಲಕಿಯ ಕುಟುಂಬದವರು ಆಪಾದಿಸಿದ್ದಾರೆ.
ಪೊಲೀಸ್ ಅಧೀಕ್ಷಕ ಸಾಲಿಕ್ರಾಮ್ ವರ್ಮಾ ಈ ಸಾಮೂಹಿಕ ಅತ್ಯಾಚಾರ ಆರೋಪವನ್ನು ಖಚಿತಪಡಿಸಿದ್ದಾರೆ. ಈ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವುದನ್ನು ಮರಣೋತ್ತರ ಪರೀಕ್ಷೆ ಖಚಿತಪಡಿಸಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದು, ಅತ್ಯಾಚಾರಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ಈ ಪ್ರಕರಣದ ಸಂಬಂಧ ಕರ್ತವ್ಯಲೋಪ ಆರೋಪದಲ್ಲಿ ನಾಲ್ವರು ಪೊಲೀಸರನ್ನು ಅಮಾನತು ಮಾಡಲಾಗಿದೆ.