ಹಲ್ಲೆಗೆ ಯತ್ನ: ಬಂಟ್ವಾಳ ಕಾರ್ಯನಿರತ ಪತ್ರಕರ್ತರ ಸಂಘ ಖಂಡನೆ
ಬಂಟ್ವಾಳ, ಮೇ 30: ವೀರಕಂಭ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಂಪರ್ಕ ಕಡಿತ ಮಾಡಿದ ಕುರಿತಾಗಿ ನಡೆಯುತ್ತಿದ್ದ ಪ್ರತಿಭಟನೆಯ ವರದಿಗೆ ಸಂಬಂಧಿಸಿ ಆಕ್ಷೇಪ ವ್ಯಕ್ತಪಡಿಸಿ ಪಕ್ಷವೊಂದರ ಮುಖಂಡ ಸಹಿತ ಪ್ರೇರಿತ ಗುಂಪೊಂದು ವಿಟ್ಲದ ಪತ್ರಕರ್ತರೋರ್ವರ ಮೇಲೆ ಹಲ್ಲೆಗೆ ಮುಂದಾದ ಘಟನೆಯನ್ನು ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಖಂಡಿಸಿದೆ.
ಮೇ 26ರಂದು ವೀರಕಂಭ ಗ್ರಾಪಂ ವ್ಯಾಪ್ತಿಯ ಕಲ್ಮಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಸಂಬಂಧಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು. ಇದರ ವರದಿಗೆಂದು ವಿಟ್ಲದ ಪತ್ರಕರ್ತರಾದ ವಿಷ್ಣುಗುಪ್ತ ಪುಣಚ, ಮುಹಮ್ಮದ್ ಅಲಿ, ನಿಶಾಂತ್ ಬಿಲ್ಲಂಪದವು ತೆರಳಿದ್ದು, ವರದಿಗೆ ಬಂದದ್ದನ್ನೆ ಆಕ್ಷೇಪಿಸಿ ದೂರವಾಣಿ ಮೂಲಕ ಸ್ಥಳೀಯ ಕೆಲ ರಾಜಕೀಯ ನಾಯಕರು ತಕರಾರು ತೆಗೆದಿದ್ದಕ್ಕೆ ಎಲ್ಲರೂ ತಕ್ಕ ಉತ್ತರ ನೀಡಿದ್ದರು. ಆದರೆ ಮಾರನೆ ದಿನ ಪತ್ರಿಕೆಗಳಲ್ಲಿ ವರದಿ ಪ್ರಕಟವಾಗಿರುವುದನ್ನು ಪ್ರಶ್ನಿಸಿದ ಪಕ್ಷವೊಂದರ ಪ್ರೇರಿತ ಕೆಲವರು ವಿಟ್ಲದ ನಿರೀಕ್ಷಣಾ ಮಂದಿರದಲ್ಲಿ ಕಾರ್ಯಕ್ರಮವೊಂದರ ವರದಿ ಮಾಡುತ್ತಿದ್ದ ಸಮಯ ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ ಅವರ ಸಮ್ಮುಖದಲ್ಲಿ ನಿಶಾಂತ್ ಬಿಲ್ಲಂಪದವು ಎಂಬವರನ್ನು ತರಾಟೆಗೆ ತೆಗೆದುಕೊಂಡರಲ್ಲದೆ, ಹಲ್ಲೆಗೆ ಮುಂದಾಗಿದ್ದಾರೆ. ಪೊಲೀಸ್ ಇಲಾಖೆಗೆ ಈ ಬಗ್ಗೆ ಮೊದಲೇ ಮಾಹಿತಿ ನೀಡಿದ್ದರೂ, ಸೂಕ್ತ ಬಂದೋಬಸ್ತು ಕಲ್ಪಿಸಿಲ್ಲ ಮತ್ತು ಘಟನೆಯ ಸಂದರ್ಭ ಠಾಣೆಯ ದೂರವಾಣಿಗೆ ಮಾಹಿತಿ ನೀಡಿದರು ಸ್ಥಳಕ್ಕಾಗಮಿಸಿಲ್ಲ. ಈ ಘಟನೆ ಪತ್ರಕರ್ತರ ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನವಾಗಿದ್ದು, ಇದನ್ನು ಸಂಘ ಬಲವಾಗಿ ಖಂಡಿಸಿದೆ. ಇಂತಹಾ ಘಟನೆಗಳು ಪ್ರಜ್ಞಾವಂತ ಸಮಾಜಕ್ಕೆ ಕಪ್ಪು ಚುಕ್ಕೆಯಾಗಿದ್ದು, ಪೊಲೀಸ್ ಇಲಾಖೆ ಇಂತಹಾ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕು. ರಾಜಕೀಯ ಪಕ್ಷಗಳ ನಾಯಕರೂ ಕೂಡ, ಪಕ್ಷಗಳ ಹೆಸರಿನಲ್ಲಿ ನಾಚಿಗೆಗೇಡಿನ ಕೆಲಸ ಮಾಡುವವರ ವಿರುದ್ದವೂ ನಿಗಾವಹಿಸುವಂತೆ ಸಂಘ ಮನವಿ ಮಾಡಿದೆ.





