ಉಳ್ಳಾಲ: ಕೋಟೆಪುರ ಟಿಪ್ಪುಸುಲ್ತಾನ್ ಶಾಲಾ ಪ್ರಾರಂಭೋತ್ಸವ

ಉಳ್ಳಾಲ, ಮೇ 30: ಕನ್ನಡ ಮಾಧ್ಯಮ ಶಾಲೆಗಳು ಕಲಿಕೆಗೆ ಪೂರಕ ವಾತಾವರಣ ಸೃಷ್ಟಿಸುವ ಜೊತೆ ವಿದ್ಯಾರ್ಥಿಗಳನ್ನು ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಯುವಂತೆ ಮಾಡುತ್ತದೆ ಎಂದು ಉಳ್ಳಾಲ ಕೇಂದ್ರ ಜುಮಾ ಮಸೀದಿ ಮತ್ತು ಸೈಯ್ಯದ್ ಮದನಿ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಅಭಿಪ್ರಾಯಪಟ್ಟರು.
ಸೈಯದ್ ಮದನಿ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ನಡೆಸಲ್ಪಡುವ ಕೋಟೆಪುರ ಅನುದಾನಿತ ಟಿಪ್ಪು ಸುಲ್ತಾನ್ ಶಿಕ್ಷಣ ಸಂಸ್ಥೆಯಲ್ಲಿ ಸೋಮವಾರ 2016-17ನೆ ಸಾಲಿನ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತಾಡಿದರು.
ಆಂಗ್ಲ ಮಾಧ್ಯಮದಲ್ಲಿ ಕಲಿತ ವಿದ್ಯಾರ್ಥಿಗಳಿಗಿಂತ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕಲಿತ ವಿದ್ಯಾರ್ಥಿಗಳೇ ಹೆಚ್ಚಿನ ಅಂಕಗಳನ್ನು ಪಡೆದಿರುತ್ತಾರೆ. ಅಲ್ಲದೆ, ಪಠ್ಯೇತರ ಚಟುವಟಿಕೆಗಳಲ್ಲೂ ಕ್ರಿಯಾಶೀಲರಾಗಿರುತ್ತಾರೆ. ಇದಕ್ಕೆ ಟಿಪ್ಪು ಸುಲ್ತಾನ್ ಶಿಕ್ಷಣ ಸಂಸ್ಥೆಯೇ ಪ್ರಮುಖ ಸಾಕ್ಷಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಒಂದನೆ ತರಗತಿಗೆ 20 ಹಾಗೂ 8ನೆ ತರಗತಿಗೆ 25 ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳಲಾಯಿತು. ಜೊತೆಗೆ ಉಚಿತ ಸಮವಸ್ತ್ರ, 1ರಿಂದ10ನೆ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕಗಳನ್ನು ವಿತರಿಸಲಾಯಿತು.
2015-16ನೆ ಸಾಲಿನ ಹತ್ತನೆ ತರಗತಿ ಪರೀಕ್ಷೆಯಲ್ಲಿ ವಿಶಿಷ್ಟ ದರ್ಜೆಯಲ್ಲಿ ತೇರ್ಗಡೆಯಾದ ಮುಹಮ್ಮದ್ ಶಾಹಿಲ್ ಮತ್ತು ಶರೀಫ ಅಫ್ರಾಳನ್ನು ಪುರಸ್ಕರಿಲಾಯಿತು. ಶೇ.94 ಫಲಿತಾಂಶ ಪಡೆದು ಉಳ್ಳಾಲ ವಲಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆಯುವಲ್ಲಿ ಅವಿರತ ಶ್ರಮಿಸಿದ, ಕನ್ನಡ ಮತ್ತು ಸಮಾಜ ವಿಷಯದಲ್ಲಿ ಶೇ.100 ಫಲಿತಾಂಶ ಸಾಧನೆಗೈದ ಶಿಕ್ಷಕರನ್ನು ದರ್ಗಾ ವತಿಯಿಂದ ಹಾಗೂ ಸಂಸ್ಥೆಯ ವತಿಯಿಂದ ದರ್ಗಾ ಸಮಿತಿಗೆ ನೂತನವಾಗಿ ಆಯ್ಕೆಯಾದ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಸದಸ್ಯರನ್ನು ಗೌರವಿಸಲಾಯಿತು. ವಿದ್ಯಾರ್ಥಿಗಳಿಗೆ ಸಿಹಿತಿಂಡಿ ಹಂಚಲಾಯಿತು.
ಜಂಟಿ ಶಿಕ್ಷಣ ಸಂಸ್ಥೆಯ ಸಂಚಾಲಕ ಎ.ಕೆ.ಮೊಹಿಯುದ್ದೀನ್, ದರ್ಗಾ ಉಪಾಧ್ಯಾಕ್ಷ ಮೋನು ಇಸ್ಮಾಯೀಲ್, ಸಮಿತಿ ಸದಸ್ಯರುಗಳಾದ ಹಮ್ಮಬ್ಬ, ಅಬ್ದುರಹ್ಮಾನ್, ಯು.ಕೆ. ಹಂಝ, ಅಬೂಬಕರ್, ಇಬ್ರಾಹೀಂ, ಕೋಟೆಪುರ ಜುಮಾ ಮಸೀದಿ ಅಧ್ಯಕ್ಷ ಯು.ಕೆ.ಬಾವ, ಉಪಾಧ್ಯಕ್ಷ ಅನ್ವರ್ ಹುಸೈನ್, ಕಾರ್ಯದರ್ಶಿ ಅಶ್ರಫ್, ಉಳ್ಳಾಲ ನಗರಸಭೆ ಅಧ್ಯಕ್ಷ ಹುಸೇನ್ ಕುಂಞಿ ಮೋನು, ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಯು.ಕೆ.ಅಬ್ಬಾಸ್, ಅಹ್ಮದ್ ಅಬ್ಬಾಸ್, ಹಮೀದ್ ಮೂಸನಬ್ಬ ಹಾಗೂ ಉಳ್ಳಾಲ ವಲಯ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ನಳಿನಿ ಉಪಸ್ಥಿತರಿದ್ದರು.
ಶಾಲೆಯ ಮುಖ್ಯ ಶಿಕ್ಷಕ ಎಂ.ಎಚ್.ಮಲಾರ್ ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿದರು. ಪ್ರೌಢ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಗೀತಾ ಡಿ. ವಂದಿಸಿದರು. ಚಿತ್ರಕಲಾ ಶಿಕ್ಷಕ ಬಿ.ಎಂ.ರಫೀಕ್ ತುಂಬೆ ಕಾರ್ಯಕ್ರಮ ನಿರೂಪಿಸಿದರು.







