ಕೆಲಸ ಮಾಡದ ಕಾರ್ಯಕರ್ತರಿಗೆ ಯಾವ ಜವಾಬ್ದಾರಿಯೂ ಸಿಗದು: ಬಿ.ಎಸ್. ಯಡಿಯೂರಪ್ಪ
.jpg)
ಹಾಸನ, ಮೇ 30: ಪಕ್ಷದಲ್ಲಿ ನಾನೇ ಅಭ್ಯರ್ಥಿಯೆಂದು ಕೆಲಸದ ಮಾಡದ ಕಾರ್ಯಕರ್ತರಿಗೆ ಯಾವ ಜವಾಬ್ದಾರಿಯನ್ನೂ ನೀಡುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ.
ನಗರದ ಸಾಲಗಾಮೆ ರಸ್ತೆ, ಭಾರತೀ ಕಲ್ಯಾಣ ಮಂಟಪದಲ್ಲಿ ಬಿಜೆಪಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಪಕ್ಷವನ್ನು ಬಲಪಡಿಸಲು ಪ್ರತಿಯೊಬ್ಬ ಕಾರ್ಯಕರ್ತನು ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕು. ಇಲ್ಲವಾದರೆ ಅಂತಹವರಿಗೆ ಯಾವ ಹುದ್ದೆಯನ್ನೂ ನೀಡುವುದಿಲ್ಲ ಎಂದರು.
ಜೂನ್ 9ಕ್ಕೆ ನಡೆಯಲಿರುವ ದಕ್ಷಿಣ ಪದವಿದರ ಕ್ಷೇತ್ರದ ಚುನಾವಣೆಯಲ್ಲಿ ಪಕ್ಷದ ಅ್ಯರ್ಥಿ ಮೈ.ವಿ. ರವಿಶಂಕರ್‌ರಿಗೆ ಮೊದಲ ಆದ್ಯತೆಯಲ್ಲಿ ಮತ ಹಾಕಲು ಮನವಿ ಮಾಡಿದರು.
ಹಾಸನ ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತರ ದೊಡ್ಡ ಪಡೆಯೇ ಇದ್ದು, ಕೆಲ ಗುಂಪುಗಾರಿಕೆ ಇರುವುದರಿಂದ ಸಲ್ಪಹಿನ್ನಡೆಯಾಗಿದೆ. ಮುಂದಿನ ದಿವಸಗಳಲ್ಲಿ ಅಂತಹ ಸನ್ನಿವೇಶಕ್ಕೆ ಅವಕಾಶ ಕೊಡುವುದಿಲ್ಲ ಎಂದರು.
ಬಿಜೆಪಿ ಅಧಿಕಾರವಧಿಯಲ್ಲಿ ಕೊಟ್ಟ ಜನಪರ ಯೋಜನೆ ಇದುವರೆಗೂ ಯಾವ ಪಕ್ಷದ ಆಡಳಿತದಲ್ಲಿ ನೀಡಿಲ್ಲ ಎಂದರು. ದೇಶದ ಪ್ರಧಾನಿ ನರೇಂದ್ರ ಮೋದಿ ಅವರ 2 ವರ್ಷದ ಅಧಿಕಾರವಧಿಯಲ್ಲಿ ಸರಕಾರ ಸಾಕಷ್ಟು ಸಾಧನೆ ಮಾಡಿದೆ. ಈ ಬಗ್ಗೆ ಇಡೀ ಜಗತ್ತೇ ಅಚ್ಚರಿಯಿಂದ ಇತ್ತ ಕಡೆ ತಿರುಗಿ ನೋಡುತ್ತಿದೆ ಎಂದು ಹೇಳಿದರು. ಕಾಂಗ್ರೆಸ್ ಮುಕ್ತ ಭಾರತಕ್ಕೆ ಮೋದಿ ಅವರು ಕರೆ ನೀಡಿರುವುಂತೆ ಕಾಂಗ್ರೆಸ್ ಕರ್ನಾಟಕ ಮುಕ್ತ ಮಾಡಲು ನಿರ್ಧರಿಸಲಾಗಿದೆ. ಸರ್ವಾಧಿಕಾರದಿಂದ ಅಧಿಕಾರ ನಡೆಸುತ್ತಿರುವ ಹಾಗೂ ಜನವಿರೋಧಿ ಆಡಳಿತವನ್ನು ಕಿತ್ತೊಗೆಯಲು ಜಿಲ್ಲೆಯಲ್ಲಿ ಕನಿಷ್ಠ ಶಾಸಕರು ಪಕ್ಷದಿಂದ ತರುವಂತೆ ಕರೆ ನೀಡಿದರು.
ಬೆಳೆ ವಿಮೆ ನೀತಿ ಇದುವರೆಗೂ ರೈತರಿಗೆ ಸರಿಯಾಗಿ ನೀಡಿರಲಿಲ್ಲ. ಕೇಂದ್ರದ ಬಿಜೆಪಿ ಸರಕಾರ ನೀಡಿದೆ. ಶೇಕಡ 2 ರಷ್ಟು ವಿಮೆ ಹಣ ಕಟ್ಟಿದರೆ ಸಾಕು. ಬೆಳೆ ನಷ್ಟವಾದಾಗ ವಿಮೆ ನೀಡುವ ಯೋಜನೆಯನ್ನು ಮೋದಿ ತಂದಿದ್ದಾರೆ ಎಂದರು.
ದೇಶದ 11 ರಾಜ್ಯದಲ್ಲಿ ಭೀಕರ ಬರಗಾಲ ಇದ್ದು, ಕೇಂದ್ರದಿಂದ ನೀಡಿದ ಪರಿಹಾರ ಹಣವನ್ನು ಸಮರ್ಪಕವಾಗಿ ಸದುಪಯೋಗ ಮಾಡಿಕೊಳ್ಳಬೇಕು ಎಂದು ರಾಜ್ಯ ಸರಕಾರಕ್ಕೆ ಸಲಹೆ ನೀಡಿದರು. ನಿರಂತರ ವಿದ್ಯುತ್, ರೈಲ್ವೆ ಹಾಗೂ ರಾಷ್ಟ್ರೀಯ ಹೆದ್ದಾರಿ ವಿಸ್ತಾರಗೊಳಿಸಿ ಮತ್ತು ಎಲ್ಲಾ ಜಿಲ್ಲೆಯನ್ನು ಅಭಿವೃದ್ಧಿಗೊಳಿಸುವ ಮಹತ್ವಕಾಂಕ್ಷೆ ಹೊಂದಿದ್ದಾರೆ ಎಂದರು.
ಜೂನ್ 4ಕ್ಕೆ ಕರೆ ನೀಡಲಾಗಿರುವ ಪೊಲೀಸ್ ಮುಷ್ಕರದ ಬಗ್ಗೆ ತಿಳಿದಿದ್ದು, ಅವರ ಸಮಸ್ಯೆಯನ್ನು ಮಾತುಕತೆ ಮೂಲಕ ಬಗೆಹರಿಸಬೇಕು ಹೊರತು ದಬ್ಬಾಳಿಕೆ ಮೂಲಕವಲ್ಲ ಎಂದು ಹೇಳಿದರು.
ಇದೆ ವೇಳೆ ಜೆಡಿಎಸ್ ಪಕ್ಷದಲ್ಲಿದ್ದ ಮಾಜಿ ಶಾಸಕ ಬಿ.ವಿ. ಕರೀಗೌಡ ಇತರರು ಬಿಜೆಪಿಗೆ ಸೇರ್ಪಡೆಗೊಂಡರು.
ಸಭೆಯಲ್ಲಿ ರಾಜ್ಯ ಮುಖಂಡರಾದ ಸಿ.ಟಿ. ರವಿ, ದಕ್ಷಿಣ ಪದವೀಧರ ಕ್ಷೇತ್ರದ ಅ್ಯರ್ಥಿ ಮೈ.ವಿ. ರವಿಶಂಕರ್, ಜಿಲ್ಲಾಧ್ಯಕ್ಷ ರೇಣುಕುವಾರ್, ಯೋಗಾರಮೇಶ್, ಖಜಾಂಚಿ ಪ್ರೀತವ್ ಜೆ. ಗೌಡ, ಹುಲ್ಲಳ್ಳಿ ಸುರೇಶ್, ವೇಣುಗೋಪಾಲ್, ನಾಗೇಶ್, ಚನ್ನಕೇಶವ ಇತರರು ಪಾಲ್ಗೊಂಡಿದ್ದರು.







